ಬೆಂಗಳೂರು: ಶಕ್ತಿ ಗ್ಯಾರಂಟಿಗೆ ಶತಕೋಟಿ ಸಂಭ್ರಮ. ಮಹಿಳಾ ಸಬಲೀಕರಣದ ಪಯಣದಲ್ಲಿ ಮಹತ್ವದ ಮೈಲಿಗಲ್ಲು. ಸಾರಿಗೆ ಸಂಸ್ಥೆಗಳ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಸಮಾರಂಭ. ಸರ್ವರಿಗೂ ಸುಸ್ವಾಗತ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇಂದು ಅಂದರೆ 24-11-2023 (ಶುಕ್ರವಾರ) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ಸಂಭ್ರದಲ್ಲಿ ನಾಡಿನ ಜನರು ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಹೌದು! ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಮ್ಮ ಪಕ್ಷದ ಮಹತ್ವಾಕಾಂಕ್ಷಿ ಪಂಚ ಯೋಜನೆಯಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದೆ. ರಾಜ್ಯದ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಇದೇ 2023ರ ಜೂನ್ 11 ರಿಂದ ಆರಂಭವಾದ ಉಚಿತ ಪ್ರಯಾಣದ ಲಾಭ ಪಡೆದಿರುವ ಮಹಿಳೆಯರ ಸಂಖ್ಯೆ ನವೆಂಬರ್ 22 ವರೆಗೆ ಶತಕೋಟಿ ದಾಟಿದೆ.
ರಾಜ್ಯದ 4 ನಿಗಮಗಳ ಬಸ್‌ಗಳಲ್ಲಿ ಈವರೆಗೂ 100 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಹೇಳಿಕೊಳ್ಳುದಕ್ಕೆ ಖುಷಿಯಾಗುತ್ತಿದೆ ಎಂದು ತಿಳಿಸಿರುವ ಸಚಿವರು, ಈ ಶಕ್ತಿ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ 2,397 ಕೋಟಿ ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ದರವನ್ನು ನಿಗಮಗಳಿಗೆ ನಮ್ಮ ಸರ್ಕಾರ ಸಂದಾಯ ಮಾಡಿದ್ದು, ಉಳಿದಿದ್ದನ್ನು ಮಾಡಲಿದೆ ಎಂದಿದ್ದಾರೆ.
ಜೂನ್ 11 ರಿಂದ ನವೆಂಬರ್ 22ರ ವರೆಗೂ 100.47 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅಂದರೆ ಕಳೆದ 165 ದಿನಗಳಲ್ಲಿ 100 ಕೋಟಿಯ 47 ಲಕ್ಷದ 56 ಸಾವಿರದ 184 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎಂಬುದು ಸಂತಸ ವಿಷಯವಾಗಿದೆ.
ಶತಕೋಟಿಯ ಶಕ್ತಿ! ಶಕ್ತಿ ಯೋಜನೆಯಲ್ಲಿ ರಾಜ್ಯದ ಮಹಿಳೆಯರ ಪ್ರಯಾಣ 100 ಕೋಟಿ ತಲುಪಿರುವುದು ಗಮನಿಸಿದರೆ, ಇದು ಮಹಿಳಾ ಸಬಲೀಕರಣದ ದಾರಿಯಲ್ಲಿ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಮಾತ್ರವಲ್ಲ ಇದೇ ಸಂಭ್ರಮದಲ್ಲಿ ಸಾರಿಗೆ ಸಂಸ್ಥೆಗಳ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.