KSRTC ಲಾರಿ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡ ಶಿವಮೊಗ್ಗ ಡಿಸಿ- ಮೌನಕ್ಕೆ ಶರಣಾದ ಎಂಡಿ..!!
ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವಿಭಾಗದ ನೌಕರರು ಆರೋಪ ಮಾಡಿದ್ದಾರೆ.
ಪ್ರಸ್ತುತ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಂಸ್ಥೆಯ ಸಾಮಾನುಗಳನ್ನು ಶಿವಮೊಗ್ಗ ಘಟಕದಿಂದ ಮತ್ತೊಂದು ಘಟಕಕ್ಕೆ ಕೊಂಡೊಯ್ಯುವ ವಾಹನ (ಸಂಸ್ಥೆಯ ಲಾರಿ ) ವನ್ನು ತಮ್ಮ ಸ್ವಂತಕ್ಕೆ, ಮನೆಯ ಸಾಮಗ್ರಿಗಳನ್ನು ಬೇರೆ ಮನೆಗೆ ಸಾಗಣೆ ಮಾಡಲು ಉಪಯೋಗಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಈ ಅಧಿಕಾರಿ ಸಂಸ್ಥೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂಸ್ಥೆಯ ಗೌರವ-ಘನತೆಗೆ ಚ್ಯುತಿ ಬರುವಂತೆ ಮಾಡಿದ್ದು, ಈ ತಪ್ಪಿತಸ್ಥ ಅಧಿಕಾರಿ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ನಿಗಮಗಳಲ್ಲಿ ಅಧಿಕಾರಿಗಳಿಗೆ ಒಂದು ನ್ಯಾಯ ಸಿಬ್ಬಂದಿಗಳಿಗೆ ಒಂದು ನ್ಯಾಯ ಎಂಬಂತಾಗಿದೆ. ಒಂದು ವೇಳೆ ಚಾಲನಾ ಸಿಬ್ಬಂದಿ ಅಥವಾ ಕಚೇರಿಯ ಸಿಬ್ಬಂದಿಯೊಬ್ಬರು ಈ ರೀತಿ ಮಾಡಿದ್ದರೆ, ಅವರಿಗೆ ಸಂಸ್ಥೆಯ ವಾಹನಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಮಾನತು ಶಿಕ್ಷೆಗೆ ಗುರಿಪಡಿಸುತ್ತಿದ್ದರು.
ಆದರೆ, ಇಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳೇ ಈ ರೀತಿ ಮಾಡಿದ್ದಾರೆ ಇವರಿಗೆ ಏನು ಶಿಕ್ಷೆ ಕೊಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಸಂಸ್ಥೆಯ ಮೇಲಧಿಕಾರಿಗಳು ಸಂಸ್ಥೆಗೆ ಹಣ ಪಾವತಿಸಿ ಅನುಮತಿ ಪಡೆದು ಉಪಯೋಗ ಪಡೆಯಬಹುದು ಎಂದು ಹೇಳಿದ್ದಾರೆ. ಆದರೆ ಈವರೆಗೂ ಶಿವಮೊಗ್ಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಂಸ್ಥೆಗೆ ಯಾವುದೇ ಹಣ ಪಾವತಿಸಿ ಅನುಮತಿ ಪಡೆದುಕೊಂಡಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು ಅಧಿಕಾರಿಗಳಂತೆ ನೌಕರರು ಕೂಡ ಸಂಸ್ಥೆಗೆ ಹಣ ಪಾವತಿಸಿ ತಮ್ಮ ಸ್ವಂತಕ್ಕೆ ಬಳಸಿಕೊಳ್ಳಲು ಅನುಮತಿ ನೀಡುತ್ತೀರ? ಯಾಕೆ ಸ್ವಾಮಿ ಸಿಬ್ಬಂದಿಗಳಿಗೆ ಒಂದು ನ್ಯಾಯ, ಅಧಿಕಾರಿಗಳಿಗೆ ಒಂದು ನ್ಯಾಯಾವೇ?
ಇನ್ನು ಸಂಸ್ಥೆಯ ಮೇಲಧಿಕಾರಿಗಳು ತಿಳಿಸಿದಂತೆ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಹಣವನ್ನು ಪಾವತಿಸಿ ಅನುಮತಿ ಪಡೆದುಕೊಂಡಿದ್ದರೆ, ಸಂಸ್ಥೆಯ ಲಾರಿ ಸಂಖ್ಯೆ ಕೆಎ 25, ಎಫ್ -2616ರ ವಾಹನವು ಯಾವ ದಿನಾಂಕದಂದು ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ವಿಜಯ ಕುಮಾರ್ ಅವರ ಮನೆಯ ಸಾಮಗ್ರಿಗಳನ್ನು ಕೊಂಡೊಯ್ಯುಲು ಯಾವ ದಿನಕ್ಕೆಂದು ಅನುಮತಿ ಪಡೆಯಲಾಗಿತ್ತು. ಈ ಬಗ್ಗೆ ಭದ್ರತಾ ಶಾಖೆಯ ಭದ್ರತಾ ಸಿಬ್ಬಂದಿಯು ಯಾವುದೇ ಪುಸ್ತಕದಲ್ಲಿ ಎಂಟ್ರಿ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಅಂದರೆ ಇದು ಕಾನೂನು ಬಾಹಿರವಾಗಿ ರುವುದರಿಂದ ಭದ್ರತಾ ಸಿಬ್ಬಂದಿಗಳು ಅಧಿಕಾರಿಗಳ ಭಯದಿಂದ ಶಿಫಾರಸು ಮಾಡಿದ್ದರಾಯೇ? ಈವರೆಗೂ ಯಾವುದೇ ಪುಸ್ತಕದಲ್ಲಿ ಎಂಟ್ರಿ ಮಾಡಿಲ್ಲ ಎಂದರೆ ಏನು ಅರ್ಥ. ಈ ರೀತಿ ಸಂಸ್ಥೆಯ ನಿಯಮಾವಳಿಗಳು ಇದ್ದರೆ ರಾಜಾರೋಷವಾಗಿ ಸಂಸ್ಥೆಯ ಮೇಲಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಅದಕ್ಕೆ ಸಂಬಂಧಪಟ್ಟ ಹಣವನ್ನು ಪಾವತಿಸಿ ಅನುಮತಿ ಪಡೆದು ಉಪಯೋಗ ಪಡೆಯಬಹುದಿತ್ತಲ್ಲವೇ?
ಸಂಸ್ಥೆಯ ವಾಹನಗಳನ್ನು ಸ್ವಂತಕ್ಕೆ ಬಳಸಿಕೊಳ್ಳ ಬಾರದೆಂದು ನಿಯಮವಿದ್ದರೂ ಸಹ ಈ ರೀತಿಯಾಗಿ ನಿಗಮದ ವಾಹನಗಳನ್ನು ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿರುವ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಗೆ ತಿಳಿದಿದ್ದರೂ ಜಾಣ ಮೌನ ವಹಿಸಿದ್ದಾರೆ. ಇದನ್ನು ಗಮನಿಸಿದರೆ ಇವರು ರಾಜಕೀಯ ಪ್ರಭಾವಕ್ಕೆ ಒಳಗಾದಂತೆ ಕಾಣಿಸುತ್ತಿದೆ. ಪ್ರಸ್ತುತ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ ಕುಮಾರ್ ಅವರನ್ನು ಹುಬ್ಬಳ್ಳಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ವ್ಯವಸ್ಥಾಪಕ ನಿರ್ದೇಶಕರೇ ಮತ್ತೆ ಒಂದೇ ದಿನದಲ್ಲಿ ಅಂದೇ ಶಿವಮೊಗ್ಗ ವಿಭಾಗಕ್ಕೆ ಮರು ವರ್ಗಾವಣೆ ಆದೇಶ ಮಾಡಿದ್ದರು.
ಇದನ್ನು ಗಮನಿಸಿದರೆ ಗೊತ್ತಾಗುವುದಿಲ್ಲವೇ ಎಲ್ಲಿದೆ ನ್ಯಾಯ, ಎಲ್ಲಿದೆ ದಕ್ಷತೆ, ಪ್ರಾಮಾಣಿಕತೆ, ಪ್ರಬುದ್ಧತೆ. ದಯಮಾಡಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.