ತಿ.ನರಸೀಪುರ: ಪಟ್ಟಣದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಇಂದು (ನ.29) ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ನಡೆಸಿದರು. ಈ ವೇಳೆ ಅಹವಾಲು ಹೇಳಿಕೊಳ್ಳಲು ಜಿಲ್ಲೆ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು.
ಈ ವೇಳೆ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಪ್ರಸಕ್ತ ಸಾಲಿನ ಕಬ್ಬಿನ ಹೆಚ್ಚುವರಿ ದರ ನಿಗದಿ ಮಾಡದೆ ರೈತರಿಗೆ ದ್ರೋಹ ಮಾಡುತ್ತಿರುವ ಬಣ್ಣಾರಿ ಅಮ್ಮನ ಸಕ್ಕರೆ ಕಾರ್ಖಾನೆಯಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ ಈ ಬಗ್ಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಕಳೆದ ವರ್ಷದ ಬಾಕಿ ಪ್ರತಿ ಟನ್ ಕಬ್ಬಿಗೆ 150 ರೂ. ಕೊಟ್ಟಿರುವುದಿಲ್ಲ ಮತ್ತು ಕಾರ್ಖಾನೆ ಒಳಗಿರುವ ತೂಕದ ಯಂತ್ರವನ್ನು ಕಾರ್ಖಾನೆಯ ಮುಂಭಾಗ ಅಳವಡಿಸಬೇಕು. ಕಳೆದ ವರ್ಷ ರಾಜ್ಯ ಕಬ್ಬು ಬೆಳೆಗಾರರ ಸಂಘ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತತವಾಗಿ 39 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ ಪರಿಣಾಮ ರಾಜ್ಯ ಸರ್ಕಾರ ಪ್ರತಿ ಟನ್‌ಗೆ 150 ರೂ. ಹೆಚ್ಚುವರಿ ಮಾಡಿ ಆದೇಶ ಮಾಡಿದ್ದರು ಕಾರ್ಖಾನೆಯವರು ರೈತರಿಗೆ ಹಣ ನೀಡಿರುವುದಿಲ್ಲ.
ಕಬ್ಬಿನ ಉತ್ಪಾದನ ವೆಚ್ಚ ಹೆಚ್ಚಾಗಿರುವ ಕಾರಣ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರವನ್ನು ಹೆಚ್ಚುವರಿ ಮಾಡಿ ರೈತರಿಗೆ ಕೂಡಿಸಬೇಕು, ರಾಜ್ಯದ ಬಹುತೇಕ ಕಾರ್ಖಾನೆಗಳು ಎಫ್ ಆರ್‌ಪಿ ದರದ ಮೇಲೆ ಟನ್‌ಗೆ 200 ರಿಂದ 300 ರೂಗಳನ್ನು ಕೊಡುತ್ತಿದ್ದಾರೆ, ಬಣ್ಣಾರಿ ಕಾರ್ಖಾನೆಯವರು ಯಾಕೆ ಹೆಚ್ಚುವರಿ ಕೊಡುತ್ತಿಲ್ಲ. ಈ ಬಗ್ಗೆ ಜಿಲ್ಲಾ ಮಂತ್ರಿಗಳು ಸಕ್ಕರೆ ಮಂತ್ರಿಗಳು ಸಭೆ ನಡೆಸಿದರು ಪ್ರಯೋಜನವಾಗಿಲ್ಲ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಈ ರೀತಿ ಆದರೆ ರೈತರಿಗೆ ಹೇಗೆ ನ್ಯಾಯ ಸಿಗುತ್ತದೆ?
ಕೇಂದ್ರ ಸರ್ಕಾರದಿಂದಲೂ ಕಬ್ಬು ಬೆಳೆಗಾರರಿಗೆ ದ್ರೋಹ, ರಾಜ್ಯ ಸರ್ಕಾರದಿಂದಲೂ ನಿರ್ಲಕ್ಷ್ಯ ಎಲ್ಲರೂ ರೈತರ ಮೂಗಿಗೆ ತುಪ್ಪ ಸವರುತ್ತಾರೆ ಇದರಿಂದ ರೈತರಿಗೆ ಏನು ಅನುಕೂಲ. ತಾವು ಜನ ಸಂಪರ್ಕ ಸಭೆ ಮಾಡುತ್ತಿದ್ದೀರಿ ಈಗಾಗಲೇ ನಾವು ಕೊಟ್ಟ ದೂರುಗಳನ್ನು ಬಗೆಹರಿಸಿ ಎಂದು ಒತ್ತಾಯಿಸಿದರು.
ಈ ಹಿಂದೆ ಸರ್ಕಾರ ಸಭೆ ನಡೆಸಲು ವಿಫಲವಾದ ನಂತರ ಮೈಸೂರಿನ ಮುಖ್ಯಮಂತ್ರಿಗಳ ಮನೆ ಮುಂದೆ ನಿರಂತರ ಧರಣಿ ನಡೆಸಲು ಮುಂದಾದ ರೈತರನ್ನು ಬಂಧನದಲ್ಲಿಟ್ಟು ರೈತರ ಚಳವಳಿಯನ್ನು ಹತ್ತಿಕ್ಕುವ ಮೂಲಕ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿತು. ಇದು ರೈತರಿಗೆ ಕೊಡುವ ಗೌರವವೇ ?
ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನ ಸಂಪರ್ಕ ಸಭೆ ಮಾಡುತ್ತಿದ್ದೀರಿ ನಿಮ್ಮ ಹಾಗೂ ಮುಖ್ಯಮಂತ್ರಿಗಳ ಕ್ಷೇತ್ರದ ವ್ಯಾಪ್ತಿಯಲಿರುವ ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿಯೇ ಕನಿಷ್ಠ ದರ ನೀಡುತ್ತಿದೆ, ಇದು ನ್ಯಾಯವೇ ? ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸರ್ಕಾರದ ಸೂಚನೆಯನ್ನು ಪಾಲಿಸುವಂತೆ ಕ್ರಮ ಕೈಗೊಳ್ಳದೆ ತಾವು ನಿರ್ಲಕ್ಷ ವಹಿಸುತ್ತಿರಲು ಕಾರಣವೇನು?
ಕಾವೇರಿ ಕಬಿನಿ ಅಚ್ಚು ಕಟ್ಟು ಭಾಗದ ರೈತರಿಗೆ ಭತ್ತ ಬೆಳೆಯಲು ನೀರು ಹರಿಸದೆ ತಮಿಳುನಾಡಿಗೆ ಹರಿಸಿ ಈ ಭಾಗದ ರೈತರಿಗೆ ಸಂಕಷ್ಟ ಉಂಟು ಮಾಡಿದ್ದೀರಿ ಇಂತಹ ರೈತರಿಗೆ ಪರಿಹಾರವನ್ನು ಸಹ ನೀಡಿಲ್ಲ ಕೂಡಲೇ ಎಕರೆಗೆ 25,000 ರೂ. ಪರಿಹಾರ ಕೊಡಿಸಬೇಕು. ಹಗಲು ವೇಳೆ ಕೃಷಿ ಪಂಪ್‌ಸೆಟ್‌ಗಳಿಗೆ 10 ಗಂಟೆಗಳ ನಿರಂತರ ವಿದ್ಯುತ್ ಪೂರೈಸಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಬೇಕು.
ತಿ.ನರಸೀಪುರ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ಖಾಲಿ ಇರುವ ವೈದ್ಯರ ಹುದ್ದೆಗೆ ಶೀಘ್ರದಲ್ಲೇ ನೇಮಕ ಮಾಡಿ ಸಮಸ್ಯೆ ತಪ್ಪಿಸಬೇಕು. ಈ ಒತ್ತಾಯಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಕೇವಲ ಜನ ಸಂಪರ್ಕ ಸಭೆ ಮಾಡಿ ಅರ್ಜಿ ಸ್ವೀಕರಿಸಿ ಹೋದರೆ ಪ್ರಯೋಜನವಿಲ್ಲ ಎಂಬುದನ್ನು ತಾವು ಜನ ಪ್ರತಿನಿಧಿಯಾಗಿ ಅರಿತುಕೊಳ್ಳಬೇಕು ಎಂಬುದು ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಕುರುಬೂರು ಸಿದ್ದೇಶ್, ಕುರುಬೂರು ಪ್ರದೀಪ್ ಮನವಿ ಮಾಡಿದರು.