ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಘಟಕ-26ರ ಚಾಲಕನ ಧೈರ್ಯವನ್ನು ಮೆಚ್ಚಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಗದು ಬಹುಮಾನ ಮತ್ತು ಪ್ರಶಂಸನ ಪತ್ರ ನೀಡಿ ಗೌರವಿಸಿದ್ದಾರೆ.
ನಿನ್ನೆ ಡಿ.4ರ ಸೋಮವಾರ ಬೆಳಗ್ಗೆ 9ಗಂಟೆ ಸುಮಾರಿನಲ್ಲಿ ಘಟಕದ ವಾಹನಕ್ಕೆ ಹಿಂದಿನಿಂದ ಬಂದ ಕಾರು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ. ಬಸ್ಸಿನ ಕೆಳಭಾಗದಲ್ಲಿ ಸಿಕ್ಕಿಕೊಂಡು ಘರ್ಷಣೆಯಿಂದ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ಕಾರಿನಿಂದ ಬಸ್ಸನ್ನು ಬೇರ್ಪಡಿಸಲು ಚಾಲಕ ಗೌರೀಶ್ ಪ್ರಾಣದ ಹಂಗುತೊರೆದು ಬಸ್ ಚಾಲನೆ ಮಾಡಿ ಬಸ್ಸನ್ನು ರಕ್ಷಿಸಿದ್ದರು.
ಗೌರೀಶ್ ಅವರು ಧೈರ್ಯದಿಂದ ಎದೆಗುಂದದೆ ಸಮಯ ಪ್ರಜ್ಞೆ ಮೆರೆದು ನಿಗಮದ ಆಸ್ತಿಯನ್ನು ರಕ್ಷಿಸಿ ಲಕ್ಷಾಂತರ ರೂ.ಗಳನ್ನು ಉಳಿಸುವ ಜತೆಗೆ ಭಾರಿ ಅನಾಹುತವನ್ನು ತಪ್ಪಿಸಿದ್ದರು. ಹೀಗಾಗಿ ಅವರ ಧೈರ್ಯವನ್ನು ಮೆಚ್ಚಿ ಇಂದು ನಿಗಮದ ಕೇಂದ್ರ ಕಚೇರಿಯಲ್ಲಿ ಅವರಿಗೆ 10 ಸಾವಿರ ರೂಪಾಯಿ ನಗದು ಬಹುಮಾನದ ಜತೆಗೆ ಪ್ರಶಂಸನ ಪತ್ರನೀಡಿ ಸನ್ಮಾನಿಸಿದರು.
ಚಾಲಕ ಗೌರೀಶ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಇನ್ನು ನಿಗಮದ ಎಂಡಿ ಜಿ.ಸತ್ಯವತಿ ಅವರು ಕೂಡ ಚಾಲಕನ ಉತ್ತಮ ಸೇವೆಯನ್ನು ಶ್ಲಾಘಿಸಿದ್ದು ಇದು ಇತರರಿಗೂ ಮಾದರಿಯಾಗಬೇಕು ಎಂದು ಉದ್ದೇಶದಿಂದ ಗೌರೀಶ್ ಅವರ ಧೈರ್ಯ ಮೆಚ್ಚಿ ನಗದು ಬಹುಮಾನದ ಜತೆಗೆ ಪ್ರಶಂಸನ ಪತ್ರ ನೀಡಿ ಅಭಿನಂದಿಸಿದ್ದಾರೆ.