ಬೆಂಗಳೂರು: ಒಬ್ಬ ವ್ಯಕ್ತಿ ಜೀವಂತವಾಗಿ ಇರಬೇಕು ಎಂದರೆ ಆತನಿಗೆ ಮೊದಲು ಆಹಾರ ಬೇಕು, ದಿನದಲ್ಲಿ ಮೂರು ಟೈಂ ಆಹಾರ ಸೇವಿಸಿದರೆ ಆತ ಸಾಮಾನ್ಯವಾಗಿ ದೀರ್ಘಕಾಲದವರೆಗೆ ಬದುಕಿರಲು ಸಾಧ್ಯ. ಆ ಬಳಿಕ ಆತ ಸಮಾಜದಲ್ಲಿ ಬದಕಲು ಇತರೆ ಸೌಲಭ್ಯಗಳು ಬೇಕಾಗುತ್ತವೆ.
ಅದರಂತೆ ಯಾವುದೇ ಒಂದು ಸಂಘಟನೆ ಇರಬಹುದು ಒಂದು ಸಂಸ್ಥೆ ಇರಬಹುದು ಅದು ಆಕ್ಟಿವಾಗಿ ಇರಬೇಕು ಎಂದರೆ, ಅಲ್ಲಿ ಸದಸ್ಯರ ಬೆಂಬಲ ಇರಲೇ ಬೇಕು. ಸದಸ್ಯರ ಬಲ ಕಳೆದುಕೊಂಡ ಸಂಘಟನೆಗಳು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಕೊನೆಗೆ ನೆಲ ಕಚ್ಚಿಬಿಡಬೇಕಾಗುತ್ತದೆ.
ಒಂದು ಸಂಘಟನೆ ಅಥವಾ ಸಂಸ್ಥೆ ನೆಲಕಚ್ಚುವ ಪರಿಸ್ಥಿತಿಗೆ ಬಂದಿದೆ ಎಂದರೆ ಅದಕ್ಕೆ ಸಂಘಟನೆಯ ಮುಖಂಡರು ಪ್ರಮುಖವಾಗಿ ಕಾರಣವಾಗುತ್ತಾರೆ. ಏಕೆಂದರೆ ಒಂದು ಸಂಘಟನೆಯನ್ನು ತಳದಿಂದ ಉನ್ನತ ಸ್ಥಾವರಕ್ಕೆ ತಂದು ನಿಲ್ಲಿಸಬೇಕು ಎಂದರೆ ಅದು ಸಾಮಾನ್ಯ ಮಾತಲ್ಲ. ಆದರೆ, ಅದೇ ಸಂಘಟನೆಯಲ್ಲಿ ಪದಾಧಿಕಾರಿಗಳು, ಅಧ್ಯಕ್ಷರಲ್ಲಿ ಒಂದಾಣಿಕೆ ಕೊರತೆಯಾಗಿ ಒಬ್ಬರಿಗೊಬ್ಬರು ತಮಗೆ ಇಷ್ಟ ಬಂದ ರೀತಿ ನಡೆದು ಕೊಂಡು ಇತರರನ್ನು ಕಡೆಗಣಿಸಿದರೆ ಅಂಥ ಸಂಘಟನೆ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಇನ್ನು ಸಾರಿಗೆ ನಿಗಮಗಳಲ್ಲಿ ಕಳೆದ 4-5 ದಶಕಗಳಿಂದಲೂ ನೌಕರರ ನೆರಳಿನಲ್ಲಿ ಇದ್ದ ಸಂಘಟನೆಗಳು ಇಂದು ನೌಕರರನ್ನೇ ವಿರೋಧ ಕಟ್ಟಿಕೊಂಡಿರುವುದರಿಂದ ಅವುಗಳ ಸ್ಥಿತಿ ಪ್ರಸ್ತುತ ಯಾವ ಮಟ್ಟದಲ್ಲಿದೆ ಎಂಬುದನ್ನು ಪ್ರತಿಯೊಬ್ಬ ನೌಕರರಿಗೂ ಬಿಡಿಸಿ ಹೇಳಬೇಕಿಲ್ಲ.
ಅಂದರೆ ಯಾವುದೇ ಸಂಘಟನೆ ಆಕ್ಟಿವಾಗಿ ಇದೆ ಎಂದರೆ ಅಲ್ಲಿ ಆ ಸಂಘಟನೆಗೆ ಸಂಬಂಧಪಟ್ಟ ಸದಸ್ಯ ಬಲ ಹೆಚ್ಚಿದೆ ಎಂದೇ ಅರ್ಥ. ಸದಸ್ಯರಿಲ್ಲದಿದ್ದರೂ ನಾವು ಸಂಘ ಕಟ್ಟಿ ತೋರಿಸುತ್ತೇವೆ ಎಂದು ಸದಸ್ಯರನ್ನೇ ಎದುರು ಹಾಕಿಕೊಂಡರೆ ಮಣ್ಣು ಮುಕ್ಕಬೇಕಾದ ಪರಿಸ್ಥಿತಿ ಬರುತ್ತದೆ ಎಂಬುದಕ್ಕೆ ಇಂದು ಸಾರಿಗೆಯ ಕೆಲ ಸಂಘಟನೆಗಳು ಇರುವ ಸ್ಥಿತಿ ನೋಡಿದರೇ ಗೊತ್ತಾಗುತ್ತದೆ.
ಈ ಎಲ್ಲದರ ನಡುವೆ ಕೆಲ ಸಂಘಟನೆಗಳ ಮುಖಂಡರು ತಮ್ಮ ತಪ್ಪಿನ ಅರಿವಾಗಿದೆ ಎಂಬಂತೆ ಮತ್ತೆ ನೌಕರರ ಮನ ಒಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂದರೆ, 2024ಕ್ಕೆ ಮತ್ತೆ ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ವೇತನ ಹೆಚ್ಚಳವಾಗಬೇಕಿದ್ದು, ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಅದಕ್ಕಾಗಿ ಅಭಿಯಾನ, ಬೃಹತ್ ಪ್ರತಿಭಟನೆ ಹಾಗೂ ಮಂತ್ರಿ ಮಹೋದಯರಿಗೆ ಸನ್ಮಾನ ಸಮಾರಂಭ ಇತ್ಯಾದಿ ಇತ್ಯಾದಿಗಳನ್ನು ಮಾಡುತ್ತೇವೆ ಎಂದು ಸಾರಿಗೆ ನಿಗಮಗಳ ಬಹುತೇಕ ಸಂಘಟನೆಗಳ ಪ್ರಮುಖರು ಹಲವಾರು ರೀತಿಯ ಸರ್ಕಸ್ ಮಾಡುತ್ತಿದ್ದಾರೆ.
ಇವರು ನೌಕರರಿಗೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ಯೋಚನೆ ಮಾಡುವುದಕ್ಕಿಂತಲೂ ಆ ಸಂಘಟನೆ ನೌಕರರ ಪರ ಯಾವರೀತಿ ತನ್ನ ರೂಪುರೇಷೆ ಹಾಕಿಕೊಂಡಿದೆ, ಈ ಸಂಘಟನೆ ಯಾವರೀತಿ ಸಿದ್ಧತೆ ನಾಡಿಕೊಳ್ಳುತ್ತಿದೆ. ಈ ಸಿದ್ಧತೆಯನ್ನು ಹೇಗೆ ಹಾಳುನಾಡುವುದು ಎಂಬುದರ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿದೆ.
ಇದರಿಂದ 2024ರ ವೇತನ ಹೆಚ್ಚಳ ಮಾಡಿಸುವುದಕ್ಕೆ ಸರ್ಕಾರ ಮತ್ತು ಆಡಳಿತ ಮಂಡಳಿಗೆ ಒತ್ತಡ ಹೇರಲು ಪ್ರಯತ್ನಿಸುವ ಬದಲಿಗೆ ನೌಕರರಿಗೆ ಒಳ್ಳೆಯದಾಗದಿದ್ದರೂ ಸರಿ ಆ ಸಂಘಟನೆ ಇಟ್ಟಿರುವ ನೌಕರರ ಪರ ಬೇಡಿಕೆಯನ್ನು ಸರ್ಕಾರ ಈಡೇರಿಸಲು ಬಿಡಬಾರದು ಎಂಬ ನಿಟ್ಟಿನಲ್ಲೇ ಓಡಾಡುತ್ತಿರುವಂತೆ ಕಾಣುತ್ತಿದೆ.
ಅಲ್ಲದೆ ಸಂಘಟನೆ ಸಂಘಟನೆಗಳ ಮುಖಂಡರೆ ನೌಕರರ ಪರ ಒಳ್ಳೆ ತೀರ್ಮಾನವನ್ನು ತೆಗೆದುಕೊಳ್ಳುವ ಸಂಘಟನೆಯನ್ನು ಬೆಂಬಲಿಸುವ ಬದಲಿಗೆ ವಿರೋಧಿಸಿ ಅದಕ್ಕೆ ಅಪವಾದ ಎಂಬಂತಹ ಹೇಳಿಕೆಗಳನ್ನು ನೀಡಿ ಸರ್ಕಾರ ಮತ್ತು ಆಡಳಿತ ಮಂಡಳಿಗೇ ದಿಕ್ಕು ಪ್ಪಿಸುವ ಕೆಲಸಕ್ಕೆ ಕೈಹಾಕುತ್ತದ್ದಾರೆ.
ಈ ಸಂಘಟನೆಗಳ ಈ ಕುತಂತ್ರ ಬುದ್ಧಿ, ಒಳ ಜಗಳದಿಂದ 2020 ಜನವರಿ ಒಂದರಿಂದ ಆಗಿರುವ ವೇತನ ಹೆಚ್ಚಳದ ಶೇ.15ರಷ್ಟು ಹಿಂಬಾಕಿ (38 ತಿಂಗಳಿನದ್ದು) ಈವರೆಗೂ ನೌಕರರಿಗೆ ಸಿಕ್ಕಲ್ಲ. ಪ್ರಮುಖವಾಗಿ ಇಲ್ಲಿ ನೌಕರರು ಗಮನಿಸಬೇಕು ಇಲ್ಲಿ ಸರ್ಕಾರ ನಾವು ವೇತನ ಹೆಚ್ಚಳದ ಹಿಂಬಾಕಿ ಕೊಡುವುದಿಲ್ಲ ಎಂದು ಹೇಳಿಲ್ಲ.
ಆದರೆ, ಈ ಸಂಘಟನೆ ಸಂಘಟನೆಗಳ ನಡುವಿನ ಒಳ ಜಗಳದಿಂದ ಸರ್ಕಾರ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಇತ್ತ ಇದನ್ನೆ ದಾಳವಾಗಿಸಿಕೊಳ್ಳುತ್ತಿರುವ ಕೆಲ ಸಂಘಟನೆಗಳು ನಾವು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇವೆ ಆದರೆ ಸರ್ಕಾರ ಉದ್ಧಟತನ ತೋರುತ್ತಿದೆ ಎಂದು ನೌಕರರನ್ನು ನಂಬಿಸುವ ನಾಟಕವಾಡುತ್ತಿದ್ದಾರೆ.
ಈ ಎಲ್ಲ ನಾಟಕಗಳನ್ನು ಬಿಟ್ಟು ಸಾರಿಗೆ ನೌಕರರಿಗೆ ಒಟ್ಟಾರೆ ಸರ್ಕಾರಿ ನೌಕರರ ಸರಿ ಸಮಾನ ಕೆಲಸಕ್ಕೆ ಸರಿ ಸಮಾನ ವೇತನ ಕೊಡಬೇಕು. ಅದು ನೀವು ನಾಲ್ಕು ವರ್ಷಕೊಮ್ಮೆ ಮಾಡುವ ಅಗ್ರಿಮೆಂಟ್ ಮೂಲಕ ಕೊಡುತ್ತೀರೋ ಇಲ್ಲ ಸರ್ಕಾರಿ ನೌಕರರ ವೇತನ ಆಯೋಗದಲ್ಲೇ ಸೇರಿಸುತ್ತೀರೋ ಗೊತ್ತಿಲ್ಲ.
ಆದರೆ, ನಮಗೆ ಸರಿ ಮಾನ ವೇತನ ಬೇಕೇ ಬೇಕು ಎಂದು ಸಾರಿಗೆ ನೌಕರರ ಪರ ಇರುವ ಸರ್ವ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರಿದರೆ ಅದು ಕೈಗಾರಿಕಾ ಒಂದಕ್ಕೊಳಪಟ್ಟಂತೆ ನೌಕರರಿಗೆ ಕಾಲ ಕಾಲಕ್ಕೆ ಸಿಗಬೆಕಿರುವ ಸೌಲಭ್ಯಗಳನ್ನು ಸರ್ಕಾರದಿಂದ ಕೊಡಸಬಹುದು. ಆದರೆ, ಕೆಲ ಸಂಘಟನೆಗಳ ಮುಖಂಡರಿಗೆ ಇದರ ಬಗ್ಗೆ ಆಸಕಿಯೇ ಇಲ್ಲ.
ಇನ್ನಾದರೂ ನಿಮ್ಮ ಒಣ ಪ್ರತಿಷ್ಠೆಗಳನ್ನು ಬದಿಗೆ ಸರಿಸಿ ಸಾರಿಗೆ ನೌಕರರ ಹಿತಕಾಯುವುದೇ ಸಾರಿಗೆ ಸಂಘಟನೆಗಳ ಮುಖ್ಯ ಉದ್ದೇಶವಾಗಿದ್ದರೆ ಈಗಲಾದರೂ ನೌಕರರಿಗೆ ಸಿಗಬೇಕಿರುವ ನ್ಯಾಯಯುತ ಸೌಲಭ್ಯಗಳನ್ನು 38 ತಿಂಗಳ ವೇತನ ಹಿಂಬಾಕಿಯೊಂದಿಗೆ ಕೊಡಿಸಲು ಶ್ರಮಿಸಿರಿ.