ಪಿರಿಯಾಪಟ್ಟಣ: ಪಟ್ಟಣದ ಅಭಿವೃದ್ಧಿ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಪಟ್ಟಣದ ಅರಸನ ಕೆರೆ ಪಾರ್ಕನ್ನು ಅಭಿವೃದ್ಧಿ ಪಡಿಸಲು 45 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕುಟ್ಟತ್ತೀರ ಮುತ್ತಪ್ಪ ತಿಳಿಸಿದ್ದಾರೆ.
ಪಟ್ಟಣದ ಪುರಸಭಾ ಕಚೇರಿಯ ಶುಕ್ರವಾರ 2024-25 ನೇ ಸಾಲಿನ ಬಜೆಟ್ ಮಂಡನ ಸಭೆಯಲ್ಲಿ ಮಾತನಾಡಿದರು.
2024 – 25 ನೇ ಸಾಲಿನಲ್ಲಿ ವಿವಿಧ ಆದಾಯ ಮೂಲಗಳಿಂದ ಪುರಸಭೆಗೆ 21.80 ಕೋಟಿ ರೂ ಆದಾಯ ನಿರೀಕ್ಷಿಸಲಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಆಡಳಿತ ವೆಚ್ಚ ಹಾಗೂ ನಿರ್ವಹಣಾ ವೆಚ್ಚವಾಗಿ 21.53 ಕೋಟಿ ರೂ. ವ್ಯಯವಾಗಲಿದ್ದು 27.25 ಲಕ್ಷ ರೂ. ಉಳಿತಾಯ ನಿರೀಕ್ಷಿಸಲಾಗಿದೆ ಎಂದರು.
ಆಸ್ತಿ ತೆರಿಗೆ ಮತ್ತು ಮನೆ ಕಂದಾಯ ತೆರಿಗೆಯಿಂದ 2 ಕೋಟಿ ರೂ, ನೀರಿನ ತೆರಿಗೆಯಿಂದ 1.30 ಕೋಟಿ ರೂ, ವಾಣಿಜ್ಯ ಮಳಿಗೆ ಬಾಡಿಗೆಯಿಂದ 1.30 ಕೋಟಿ ರೂ, ಎಸ್ ಎಫ್ ಸಿ ವಿಶೇಷ ಅನುದಾನದ ಮೂಲಕ 7 ಕೋಟಿ ರೂ. ಎಸ್ ಎಫ್ ಸಿ ವೇತನಾನುದಾನ ದಿಂದ 2.22 ಕೋಟಿ ರೂ. ಸಚಿವರ ಪ್ರೋತ್ಸಾಹ ಧನ ಅನುದಾನ 1 ಕೋಟಿ ರೂ. ಸೇರಿದಂತೆ ವಿವಿಧ ಆದಾಯಗಳ ಮೂಲಕ ಒಟ್ಟು 21.80 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದರು.
ಪುರಸಭೆ ಆಡಳಿತ ಮತ್ತು ಕಚೇರಿಯ ನಿರ್ವಹಣಾ ವೆಚ್ಚವಾಗಿ 4.54 ಕೋಟಿ ರೂ. ಕುಡಿಯುವ ನೀರು ಸರಬರಾಜು ವೆಚ್ಚವಾಗಿ 1.45 ಕೋಟಿ ರೂ. ಘನ ತ್ಯಾಜ್ಯ ನಿರ್ವಹಣೆ ವೆಚ್ಚವಾಗಿ 2.32 ಕೋಟಿ ರೂ. ಬೀದಿ ದೀಪ ನಿರ್ವಹಣೆ ವೆಚ್ಚವಾಗಿ 2.26 ಕೋಟಿ ರೂ. ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ವೆಚ್ಚವಾಗಿ 10.40 ಕೋಟಿ ರೂ. ಸೇರಿದಂತೆ ಒಟ್ಟು 21.53 ಕೋಟಿ ರೂ. ವ್ಯಯವಾಗಲಿದೆ ಪುರಸಭಾ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟ್ ನಿರ್ಮಾಣ ಮಾಡಲು 50 ಲಕ್ಷ ರೂ.
ಮಾರುಕಟ್ಟೆ ಅಭಿವೃದ್ಧಿಗಾಗಿ 1 ಕೋಟಿ ರೂ. ಉದ್ಯಾನವನಗಳ ಅಭಿವೃದ್ಧಿಗಾಗಿ 25 ಲಕ್ಷ ರೂ. 15ನೇ ಹಣಕಾಸು ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗಾಗಿ 75.ಲಕ್ಷ ರೂ. ಹಾಗೂ ಎಸ್ಎಫ್ಸಿ ವಿಶೇಷ ಅನುದಾನದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ ಚರಂಡಿ ಮತ್ತು ಇತರೆ ಅಭಿವೃದ್ಧಿಗಾಗಿ 7 ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷರಾದ ಮಂಜುನಾಥ ಸಿಂಗ್, ಕೆ.ಮಹೇಶ್, ಸದಸ್ಯರಾದ ಎಚ್.ಕೆ.ಮಂಜುನಾಥ್, ಶ್ಯಾಮ್, ಹರ್ಷದ್, ಪಿ.ಎನ್.ವಿನೋದ್, ರತ್ನಮ್ಮ, ಆಶಾ, ಮಂಜುಳಾ, ಪುಷ್ಪಲತಾ, ಸುವರ್ಣ, ಪ್ರಕಾಶ್, ಮಹೇಶ್ ಸಿಬ್ಬಂದಿಗಳಾದ ಆದರ್ಶ್ ಮಹದೇವಸ್ವಾಮಿ, ಪ್ರದೀಪ್, ಶರ್ಮಿಳಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.