ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಮಾ.4ರಿಂದ ಫ್ರೀಡಂ ಪಾರ್ಕ್ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಡುವ ಬಗ್ಗೆ ಸಮಾನ ಮನಸ್ಕರ ವೇದಿಕೆ ನಿರ್ಧರಿಸಿದೆ.
ನಿನ್ನೆ ಅಂದರೆ ಮಾ.5ರಂದು ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಸಭೆಯನ್ನು ಮಾ.7ರಂದು ಕರೆದಿರುವ ಬಗ್ಗೆ ನಿಗಮದ ಸಿಬ್ಬಂದಿ ಮತ್ತು ಜಾಗ್ರತಾ ವಿಭಾಗದ ನಿರ್ದೇಶಕರು ಸೂಚನ ಪತ್ರ ಹೊರಡಿಸಿರುವುದರಿಂದ ಇಂದು ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಡಲಾಗುವುದು ಎಂದು ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈಗಲೂ ಕೂಡ ಫ್ರೀಡಂ ಪಾರ್ಕ್ನಲ್ಲಿ ಧರಣಿ ಮುಂದುವರೆದಿದ್ದು ವಿವಿಧೆಡೆಯಿಂದ ನೂರಾರು ನೌಕರರು ಆಗಮಿಸುತ್ತಿರುವ ಹಿನ್ನೆಯಲ್ಲಿ ಅವರ ಬರುವಿಕೆಗಾಗಿ ನಾವು ಮುಂದುರಿಸಿದ್ದೇವೆ. ಎಲ್ಲರು ಬಂದು ಸೇರಿದ ಮೇಲೆ ಅಂದರೆ ಮಧ್ಯಾಹ್ನದೊಳಗೆ ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಡುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಒಂದು ವೇಳೆ ನಾಳೆ ಅಂದರೆ ಮಾ.7ರಂದು ನಡೆಯುವ ಸಭೆಯಲ್ಲಿ ನೌಕರರ ಬೇಡಿಕೆಗಳ ವಿರುದ್ಧ ತೀರ್ಮಾನ ತೆಗೆದುಕೊಂಡರೆ ನಾವು ಮತ್ತೆ ಅಹೋರಾತ್ರಿ ಧರಣಿಯನ್ನು ಮುಂದರಿಸುವ ಬಗ್ಗೆಯೂ ನಿರ್ಧಾರ ಮಾಡಬೇಕಿದೆ. ಹೀಗಾಗಿ ನೌಕರರು ಮತ್ತು ಇನ್ನು ಕೆಲ ಮುಖಂಡರ ಬರುವಿಕೆಗಾಗಿ ಕಾಯುತ್ತಿದ್ದೇವೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ನಾವು ಯಾವುದೇ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿಲ್ಲ. ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ವೇದಿಕೆಯ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.