ಬೆಂಗಳೂರು: ಮೊಬೈಲ್ ಶಾಪ್‌ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣೆ ವೇಳೆ ಧಾರ್ಮಿಕ ಭಾವನೆ ಕೆರಳಿಸುತ್ತಿರುವ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ನ ಲೀಗಲ್ ಟೀಂನ ಸೂರ್ಯ ಮುಕುಂದ ರಾಜ್ ಅವರು ಇ- ಮೇಲ್ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾವನ್ನು ಮುಕೇಶ್ ಎನ್ನುವರು ಹಾಕಿದ್ದರು. ಆದರೆ ಅನ್ಯ ಕೋಮಿನವರು ಬಂದು ಯುವಕನ ಮೇಲೆ ಹಲ್ಲೆ ಮಾಡಿದ್ದರು. ಹೀಗಾಗಿ ಇದನ್ನು ವಿರೋಧಿಸಿ ಇಂದು (ಮಾ.19) ಪ್ರತಿಭಟನೆ ಮಾಡಲಾಗುತ್ತಿದೆ. ಕೇಸರಿ ಧ್ವಜ ಮತ್ತು ಹನುಮಾನ್ ಚಾಲೀಸಾ ಪಠಣೆ ಮಾಡುವ ಮೂಲಕ ಅಲ್ಲಿ ಪ್ರತಿಭಟನೆ ಮಾಡಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಕೋಮು ದ್ವೇಷ ಬಿತ್ತಲಾಗುತ್ತಿದೆ ಎಂದು ಆರೋಪಿಸಿದೆ.
ಸದ್ಯ ಕಾಂಗ್ರೆಸ್ನ ಲೀಗಲ್ ಟೀಂನ ಸೂರ್ಯ ಮುಕುಂದ ರಾಜ್ ಅವರು ಸಂಸದ ತೇಜಸ್ವಿ ಸೂರ್ಯ, ರವಿ ಸುಬ್ರಮಣ್ಯ ಮತ್ತು ಇತರರ ಮೇಲೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಪ್ರತಿಭಟನೆ ಮಾಡಲಾಗುತ್ತಿದೆ. ಇದು ನೀತಿ ಸಂಹಿತೆ ಉಲ್ಲಂಘಿಸಿದಂತೆ ಆಗುತ್ತಿದೆ. ಆದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.