ಚಾಮರಾಜನಗರ: ಬರಗಾಲದ ಹಿನ್ನಲೆಯಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕಾಡಂಚಿನ ಗ್ರಾಮಗಳಲ್ಲಿ ಕೊಳವೆಬಾವಿ ನೀರನ್ನು ನಂಬಿ ಬದುಕುತ್ತಿರುವ ಜನರಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಕೊಳವೆ ಬಾವಿಗಳಲ್ಲಿ ಸಮರ್ಪಕವಾಗಿ ನೀರು ಬಾರದ ಕಾರಣದಿಂದಾಗಿ ನೀರಿಗಾಗಿ ಬಿಂದಿಗೆ ಹಿಡಿದು ಕಿ.ಮೀ.ಗಟ್ಟಲೆ ನಡೆಯುವಂತಾಗಿದೆ. ಕೆಲವು ಪ್ರದೇಶಗಳಲ್ಲಿ ನೀರಿಗಾಗಿ ಪ್ರತಿಭಟನೆ ನಡೆಸುತ್ತಿರುವ ಘಟನೆಗಳು ನಡೆಯುತ್ತಿವೆ.
ಈ ನಡುವೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದ ಕಾರಣದಿಂದ ಅಂತರ್ಜಲ ಮಟ್ಟ ತೀರಾ ಕುಸಿತವಾಗಿದ್ದು, ಕೊಳವೆಬಾವಿಗಳಲ್ಲಿ ನೀರು ಬಾರದಂತಾಗಿದೆ. ಹೀಗಾಗಿ ಈ ವ್ಯಾಪ್ತಿಯ ಇಂಡಿಗನತ್ತ ಹಾಗೂ ಕೊಕ್ಕಬರೆ ಗ್ರಾಮದಲ್ಲಿ ನೀರಿಗಾಗಿ ಜನ ಪರಿತಪಿಸುವಂತಾಗಿತ್ತು. ಹೀಗಾಗಿ ಗ್ರಾಮಸ್ಥರು ನೀರಿಗಾಗಿ ಪ್ರತಿಭಟನೆ ನಡೆಸಿದ್ದರು.
ಸದ್ಯ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಆಡಳಿತ ವರ್ಗ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದಲ್ಲದೆ, ಕೂಡಲೇ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಟ್ಟಿದಲ್ಲದೆ, ಗ್ರಾಮದಲ್ಲಿರುವ ಮೂರು ಕೊಳವೆ ಬಾವಿಗೆ ಹೆಚ್ಚುವರಿಯಾಗಿ ಪೈಪ್ ಲೈನ್ ಅಳವಡಿಸಿ ದುರಸ್ತಿ ಪಡಿಸಿದ್ದಾರೆ.
ಇಷ್ಟೇ ಅಲ್ಲದೆ ಗ್ರಾಮದ ಶಾಲಾ ಆವರಣದಲ್ಲಿದ್ದ ಮಿನಿ ಟ್ಯಾಂಕ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದ್ದಾರೆ. ಜತೆಗೆ ಹೆಚ್ಚುವರಿಯಾಗಿ ಮಿನಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಇಂತಹ ಸಮಸ್ಯೆ ಕೇವಲ ಇಂಡಿಗನತ್ತ ಹಾಗೂ ಕೊಕ್ಕಬರೆ ಗ್ರಾಮಗಳದ್ದಲ್ಲ. ಬಹುತೇಕ ಗ್ರಾಮಗಳಲ್ಲಿ ನೀರಿನ ಮಟ್ಟ ಪಾತಾಳಕ್ಕಿಳಿಯುತ್ತಿದ್ದು, ಇದರಿಂದ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತಿದೆ.
ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳತ್ತ ಗ್ರಾಮಪಂಚಾಯಿತಿ ನಿಗಾವಹಿಸಿ ನೀರಿನ ಸಮಸ್ಯೆಗಳಿಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಮಳೆ ಸುರಿಯದೆ ಹೋದರೆ ಜನ ಇನ್ನಷ್ಟು ಸಂಕಷ್ಟವನ್ನು ಎದುರಿಸಬೇಕಾಗಿ ಬಂದರೆ ಅಚ್ಚರಿಪಡಬೇಕಾಗಿಲ್ಲ.