ದುಬೈ: ಗುಡುಗು, ಮಿಂಚು, ಸಿಡಿಲು ಸಹಿತ ಒಂದೇ ಸಮನೆ ಧಾರಾಕಾರವಾಗಿ ಸುರಿದ ದಾಖಲೆಯ ಮಹಾ ಮಳೆಗೆ ಮರುಭೂಮಿ ನಾಡು ದುಬೈ ತತ್ತರಿಸಿ ಹೋಗಿದೆ.
ರಸ್ತೆಗಳೆಲ್ಲ ನದಿಗಳಂತೆ ನೀರುತುಂಬಿ ಹರಿಯುತ್ತಿದ್ದು, ದುಬೈ ಸಿಟಿ ಸಂಪೂರ್ಣ ಮುಳಗಡೆಯಾಗಿದೆ. ಇದರಿಂದಾಗಿ ಅಪಾಯದಲ್ಲಿ ಸಿಲುಕಿದವರ ರಕ್ಷಣೆ ಮಾಡುವುದೇ ದೊಡ್ಡ ಸಾಹಸವಾಗಿದೆ. ಈವರೆಗೂ ವರುಳನ ಅಬ್ಬರಕ್ಕೆ 20 ಮಂದಿ ಅಸುನೀಗಿದ್ದಾರೆ.
ಯುನಿಟೈಡ್ ಅರಬ್ ದೇಶದಲ್ಲಿ ಸುರಿದ ಧಾರಾಕಾರ ಮಳೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 24 ಗಂಟೆಯಲ್ಲಿ ರಸ್ತೆಗಳು ನೀರಿನಲ್ಲಿ ಮುಳುಗಿದ್ದು, ಹೆದ್ದಾರಿಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ದುಬೈನ ಒಂದೊಂದು ದೃಶ್ಯವೂ ರಣ ಭೀಕರವಾಗಿದ್ದು, ಮನೆಯಿಂದ ಹೊರ ಬರುವುದು ಕಷ್ಟಕರವಾಗಿದೆ. ಬರೋಬ್ಬರಿ 75 ವರ್ಷದ ಬಳಿಕ ಇದ್ದಕ್ಕಿದ್ದಂತೆ ದುಬೈನಲ್ಲಿ 254 ಮಿಲಿ ಮೀಟರ್‌ನಷ್ಟು ದಾಖಲೆಯ ಮಳೆ ದಾಖಲಾಗಿದೆ. ಈ ರೀತಿಯ ದಿಢೀರ್ ವಾತಾವರಣ ಬದಲಾಗಲು ಕಾರಣವೇನು ಅನ್ನೋದು ವಿಶ್ವದಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದೆ.
ಮಳೆಗೆ ಮೋಡ ಬಿತ್ತನೆ ಕಾರಣವಲ್ಲ!: ದುಬೈನಲ್ಲಿ ಸುರಿದ ರಣಭೀಕರ ಮಳೆಗೆ ಮೋಡ ಬಿತ್ತನೆ ಕಾರಣ ಅನ್ನೋ ವಾದವಿತ್ತು. ಮೋಡ ಬಿತ್ತನೆಯ ದುಷ್ಪರಿಣಾಮದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಆದರೆ, ಹವಾಮಾನ ತಜ್ಞರು ದಾಖಲೆಯ ಮಳೆಗೆ ಮೋಡ ಬಿತ್ತನೆಯೇ ಕಾರಣ ಅನ್ನೋದನ್ನ ತಳ್ಳಿ ಹಾಕಿದ್ದಾರೆ.
UAE ಹವಾಮಾನ ಸಂಸ್ಥೆ ಮಹಾಮಳೆಗೆ ಮೋಡ ಬಿತ್ತನೆ ಕಾರಣ ಅನ್ನೋದರ ಬಗ್ಗೆ ಸ್ಪಷ್ಟನೆ ನೀಡಿದೆ. ತಜ್ಞರ ಪ್ರಕಾರ ಹವಾಮಾನ ಬದಲಾವಣೆಯಿಂದ ಈ ಸಮಸ್ಯೆ ಎದುರಾಗಿದೆ. ಏಪ್ರಿಲ್ ತಿಂಗಳಲ್ಲಿ ಇದು ಅನಿರೀಕ್ಷಿತವಾದದ್ದು ಅಲ್ಲ. ಅಸಹಜವಾದ ಹವಾಮಾನ ವಾತಾವರಣದಿಂದ ಈ ರೀತಿಯಾಗಿದೆ ಎನ್ನಲಾಗಿದೆ.
ಮತ್ತೊಂದು ವರದಿಯ ಪ್ರಕಾರ ದುಬೈನಲ್ಲಿ ಬೇಸಿಗೆಯ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಒಂದೇ ದಿನ ಸುರಿದ ಧಾರಾಕಾರ ಮಳೆಯನ್ನು ಎದುರಿಸುವಲ್ಲಿ ದುಬೈನ ಒಳಚರಂಡಿಯ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.
ಮೋಡ ಬಿತ್ತನೆ ಎಂದರೇನು?: ಮೋಡ ಬಿತ್ತನೆಯು ಒಂದು ರೀತಿಯ ಹವಾಮಾನ ಮಾರ್ಪಾಡು ಮಾಡುವ ವಿಧಾನ. ಮೋಡದ ಘನೀಕರಣ ಅಥವಾ ಐಸ್ ನ್ಯೂಕ್ಲಿಯಸ್ಗಳಾಗಿ ಕಾರ್ಯನಿರ್ವಹಿಸುವ ವಸ್ತುಗಳನ್ನು ಗಾಳಿಯಲ್ಲಿ ಚದುರಿಸುವ ಮೂಲಕ ಮೋಡ ಬಿತ್ತನೆಯನ್ನು ಕೈಗೊಳ್ಳಲಾಗುತ್ತದೆ. ಮಳೆಯ ಪ್ರಮಾಣ ಅಥವಾ ಪ್ರಕಾರವನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ.
Massive storm in Dubai! #Dubai #dubairain #DubaiFlooding #الهلال_العين #ريال_مدريد_مانشستر_سيتي pic.twitter.com/FWSfvSHSc1
— Mjaugnar the Brave ⚔️ on Solana (@LibyanWalker) April 18, 2024