ಬೆಂಗಳೂರು: ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ವೇಳೆ ಸಿಸಿಬಿ ಪೊಲೀಸರು ದಾಳಿ ಮಾಡಿ ಪಾರ್ಟಿ ಆಯೋಜಕ ವಾಸು ಸೇರಿ ಐವರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಯಲ್ಲೇ ಇದ್ದ ಮೂವರು ಡ್ರಗ್ ಪೆಡ್ಲರ್ಸನ್ನು ಬಂಧಿಸಿರುವ ಪೊಲೀಸರು ಈ ವೇಳೆ ಫಾರ್ಮ್ ಹೌಸ್‌ನಲ್ಲಿದ್ದ 45 ಗ್ರಾಂ ಡ್ರಗ್ಸ್, ಎಂಡಿಎಂಎ, ಕೊಕೇನ್ ಸೇರಿ ಹಲವು ಬಗೆಯ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾರ್ಟಿಯಲ್ಲಿ ಇದ್ದ ಹಲವು ಕಿರುತೆರೆ ಕಲಾವಿದರು: ಪೊಲೀಸರ ದಾಳಿ ವೇಳೆ ರೇವ್ ಪಾರ್ಟಿಯಲ್ಲಿ 25 ಕ್ಕೂ ಹೆಚ್ಚು ಯುವತಿಯರು ಇದ್ದರು. ಅಷ್ಟು ಮಂದಿ ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಲ್ಲಿ ಕೆಲವರು ತೆಲುಗು ಸಿನಿರಂಗದ ಮತ್ತು ಕಿರುತೆರೆ ಕಲಾವಿದರು ಹಾಗೂ ಮಾಡಲ್ಸ್ಗಳು ಇದ್ದಾರೆ ಎಂದು ತಿಳಿಸಿರುವ ಪೊಲೀಸರು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.
ನಿದ್ರೆ ಮಾಡಲು ಬಿಡಿ ಎಂದು ಪೊಲೀಸರಿಗೆ ನಟಿಯರ ಅವಾಜ್: ಇನ್ನು ಕೆಲವು ಕಿರುತೆರೆ ನಟಿಯರು ಮತ್ತು ಮಾಡಲ್‌ಗಳು ನಶೆಯಲ್ಲಿರುವುದು ಪೊಲೀಸರಿಗೆ ಗೊತ್ತಾಗಿದೆ. ಈ ವೇಳೆ ಬಂಧಿಸುವಾಗ ನಮಗೆ ನಿದ್ದೆ ಮಾಡಲು ಸಮಯ ಬೇಕಿದೆ. ನಮಗೆ ತೊಂದರೆ ಮಾಡಬೇಡಿ ಎಂದು ಹೇಳುತ್ತಾ ಪೊಲೀಸರಿಗೇ ಅವಾಜ್ ಹಾಕಿರುವ ಘಟನೆಯೂ ನಡೆದಿದೆ.
ಪೊಲೀಸರ ವಶದಲ್ಲಿ 80ಕ್ಕೂ ಹೆಚ್ಚು ಜನರು: ದಾಳಿಯಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 50ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದು, ಈಗಲೂ ಮುಂದುವರಿದಿದೆ. ಮಾಹಿತಿ ಪ್ರಕಾರ 25ಕ್ಕೂ ಹೆಚ್ಚು ಯುವತಿಯರು ಹಾಗೂ 45 ಕ್ಕೂ ಹೆಚ್ಚು ಯುವಕರು ಸೇರಿ ಪಾರ್ಟಿಯಲ್ಲಿ 80ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು ಅಷ್ಟೂ ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರ ವಶದಲ್ಲಿರುವ ಎಲ್ಲರನ್ನೂ ವೈದ್ಯಕೀಯ ತಪಾಸಣೆ ಕರೆದೊಯ್ಯಲಿದ್ದು ಬಳಿಕ ತೀರ್ವ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿದ್ರೆಯಿಂದ ಇನ್ನು ಎದ್ದಿಲ್ಲ: ಸಿಸಿಬಿ ಪೊಲೀಸರು ತಡರಾತ್ರಿ 2:30ರ ಸುಮಾರಿಗೆ ದಾಳಿ ಮಾಡಿದ್ದಾರೆ. ಭಾನುವಾರ ಸಂಜೆ ಐದು ಗಂಟೆಯಿಂದ ರೇವ್ ಪಾರ್ಟಿ ಪ್ರಾರಂಭವಾಗಿದೆ. ಪೊಲೀಸರ ದಾಳಿ ವೇಳೆಗೆ ಕೆಲ ಮಾಡೆಲ್ಸ್ ಹಾಗೂ ನಟಿಯರು ನಿದ್ರೆಗೆ ಜಾರಿದ್ದರು. ನಶೆಯಲ್ಲಿರುವ ಇನ್ನು ಕೆಲವರು ನಿದ್ರೆಯಿಂದ ಎದ್ದಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.