ರಾಯಚೂರು: ಬೀದಿ ನಾಯಿ ದಾಳಿಗೆ ಒಳಗಾಗಿದ್ದ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನ ಕೊರವಿಹಾಳ ಗ್ರಾಮದಲ್ಲಿ ನಡೆದಿದೆ.
15 ದಿನಗಳಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಈವರೆಗೂ ಕೊರವಿಹಾಳ ಗ್ರಾಮದ ಏಳು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚಿವೆ. ಇದರಿಂದ ಈಗಾಗಲೇ ಒಂದು ಹೆಣ್ಣು ಮಗುವನ್ನು ಕಳೆದು ಕೊಡಿದ್ದೇವೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರವಿಹಾಳ ಗ್ರಾಮದ ನಿವಾಸಿ ಕೀರಲಿಂಗ ಎಂಬುವದ ಮಗಳು ಲಾವಣ್ಯ (4) ಬೀದಿನಾಯಿ ದಾಳಿಯಿಂದ ಮೃತಪಟ್ಟ ಮಗು. ಲಾವಣ್ಯ ಶನಿವಾರ ಮೃತಮಟ್ಟಿದ್ದಾಳೆ
ಮನೆ ಬಳಿ ಆಟವಾಡುತ್ತಿದ್ದ ಮಗಳ ಮೇಲೆ ಬೀದಿನಾಯಿಗಳು ಅಟಾತ್ ದಾಳಿ ನಡೆಸಿ ಲಾವಣ್ಯಳ ಕತ್ತಿನ ಹಿಂಭಾಗವನ್ನು ಕಚ್ಚಿ ಎಳೆದಾಡಿದವು. ನಾಯಿ ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಮಗುವನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಡಿಸ್ಚಾರ್ಜ್ ಆಗಿ ಮನೆಗೆ ಬಂದರೂ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೂ ಲಾವಣ್ಯ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.
ಇನ್ನು ಇದರಿಂದ ನಾಯಿ ಕಡಿತಕ್ಕೆ ಒಳಗಾದ ಉಳಿದ ಮಕ್ಕಳ ಪಾಲಕರಲ್ಲಿ ಆತಂಕ ಮನೆ ಮಾಡಿದೆ. ಘಟನೆ ಬಳಿಕ ನಾಯಿ ಕಡಿತಕ್ಕೆ ಒಳಗಾಗಿದ್ದ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ, ಘಟನೆ ಬಳಿಕ ಬೀದಿ ನಾಯಿಯನ್ನು ಗ್ರಾಮಸ್ಥರು ಸಾಯಿಸಿದ್ದಾರೆ.
ಇತ್ತ ಬೀದಿ ನಾಯಿಯಿಂದ ಅವಾಂತರ ಸೃಷ್ಟಿಯಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.\
ಇನ್ನು ಗಾಯಾಳು ಮಕ್ಕಳಿಗೆ ಪರಿಹಾರ, ಚಿಕಿತ್ಸಾ ವೆಚ್ಚವನ್ನು ಭರಿಸದೇ ಸಗಮಕುಂಟಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಮೃತ ಲಾವಣ್ಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಅದಕ್ಕೂ ಮುಂದೆ ಸೌಜನ್ಯಕ್ಕಾದರೂ ಮೃತ ಮಗುವಿನ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಬೇಕಿತ್ತು. ಅದನ್ನು ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.