KSRTC ಅಧಿಕಾರಿಗಳ ಧನದಾಹಕ್ಕೆ ಬೆಂಗಳೂರು – ರಾಯಚೂರು, ಬೀದರ್ ನಡುವೆ ಈವರೆಗೂ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಯಾಗಿಲ್ಲ. ಕಳೆದ 11 ತಿಂಗಳಿನಿಂದಲೂ ಹೀಗೆ ಮಾಡಿದ್ದಾರೆ. ಇದು ಅಚ್ಚರಿಯಾದರೂ ನಂಬಲೇಬೇಕು. ಇನ್ನು ಅಧಿಕಾರಿಗಳು ಹೇಳುವ ಕಾರಣ ಕೇಳಿದರೆ ನಿಮಗೆ ಇನ್ನಷ್ಟು ಅಚ್ಚರಿಯಾಗದೇ ಇರದು.
ರಾಮನಗರ: ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎಂಬ ಗಾದೆ ಮಾತು ಹಳ್ಳಿಗಾಡಿನಲ್ಲಿ ಹಾಸು ಹೊಕ್ಕಾಗಿದೆ. ಇಂತಹ ಗಾದೆ ಮಾತಿಗೆ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸ್ಪಷ್ಟ ನಿದರ್ಶನವಾಗಿದೆ!!!
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆಯೇ ರಾಜ್ಯದ ಮಹಿಳೆಯರಿಗೆ ಉಚಿತವಾಗಿ ಕರ್ನಾಟಕ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ಗಳಲ್ಲಿ ಪ್ರಯಾಣಿಸಲು ಶಕ್ತಿ ಯೋಜನೆ ಜಾರಿ ಮಾಡಲಾಗಿದೆ.
ಇನ್ನು ಈ ಯೋಜನೆ ಕುರಿತು ರಾಜ್ಯ ಸರ್ಕಾರ ಸಭೆ, ಸಮಾರಂಭಗಳಲ್ಲಿ ತನ್ನ ಬೆನ್ನು ತಾನೇ ತಟ್ಟಿಕೊಳ್ಳತ್ತಿದ್ದರೆ, ಇತ್ತ ಯೋಜನೆ ಜಾರಿಯಾಗಿ 11 ತಿಂಗಳಾಗುತ್ತ ಬರುತ್ತಿದ್ದರೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಸರ್ಕಾರಕ್ಕೂ ಮತ್ತು ಮಹಿಳಾ ಪ್ರಯಾಣಿಕರ ಕಣ್ಣಿಗೆ ಮಣ್ಣು ಎರಚಿ ರಾಜ್ಯದ ಒಳಗೆ ಪ್ರಯಾಣಿಸಿದರೂ ಉಚಿತ ಟಿಕೇಟ್ ನೀಡದೆ ಮಹಿಳಾ ಮಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಏನಿದು ಪ್ರಕರಣ!?: ರಾಜ್ಯ ರಸ್ತೆ ಸಾರಿಗೆ ನಿಗಮದ ರಾಯಚೂರು, ಬೀದರ್ ಜಿಲ್ಲೆಗಳ ಕೆಲವು ತಾಲೂಕುಗಳು ಆಂಧ್ರ ಮತ್ತು ಕರ್ನಾಟಕದ ಗಡಿಯಲ್ಲಿವೆ. ಈ ಸ್ಥಳಗಳಿಗೆ ರಾಜಧಾನಿ ಬೆಂಗಳೂರಿನಿಂದ ನೇರ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಅವುಗಳಲ್ಲಿ ಐರವಾತ, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಹೀಗೆ ಹಲವು ವಿವಿಧ ವಾಹನದ ಜತೆಗೆ ಬೆರಳೆಣಿಕೆಯಷ್ಟು ಸಾಮಾನ್ಯ ಸಾರಿಗೆ ವಾಹನಗಳು ಸಂಚರಿಸುತ್ತಿವೆ.
ಆದರೆ, ಬೆಂಗಳೂರಿನಿಂದ ರಾಯಚೂರು, ಬೀದರ್ಗೆ ಪ್ರಯಾಣ ಮಾಡಬೇಕು ಎಂದರೆ ಮಹಿಳೆಯರು ಹಣಕೊಟ್ಟು ಟಿಕೆಟ್ ಪಡೆದು ಪ್ರಯಾಣಸಬೇಕು. ಕೇಳಿದರೆ ಇಲ್ಲಿಂದ ನೇರವಾಗಿ ರಾಯಚೂರು, ಬೀದರ್ಗೆ ಬಸ್ಗಳಿಲ್ಲ ನಾವು ಅಂತಾರಾಜ್ಯ ಬಸ್ಗಳನ್ನು ಮಾತ್ರ ಬಿಟ್ಟಿದ್ದೇವೆ ಹೀಗಾಗಿ ಅಂತಾರಾಜ್ಯ ಬಸ್ಗಳಲ್ಲಿ ಪ್ರಯಾಣ ಮಾಡಬೇಕಾದರೆ ನೀವು ಟಿಕೆಟ್ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
ಅಂದರೆ ರಾಯಚೂರು, ಬೀದರ್, ಇವು ಅಂತರರಾಜ್ಯದಲ್ಲಿ ಇವೆಯೇ?: ಅಧಿಕಾರಿಗಳ ಈ ನಡೆ ನೋಡಿದರೆ ಕರ್ನಾಟಕದ ಗಡಿ ಜಿಲ್ಲಾಗಳಾದ ರಾಯಚೂರು, ಬೀದರ್ ಇವು ಸಾರಿಗೆ ಸಂಸ್ಥೆಯ ಪ್ರಕಾರ ಅಂತರ್ ರಾಜ್ಯಕ್ಕೆ ಸೇರಿದ್ದವು ಎಂಬುವುದು ಇವರ ಮಾತಿನಿಂದಲೇ ತಿಳಿಯುತ್ತಿದೆ. ಅಂದರೆ ಇವರು ಜನರನ್ನು ಎಷ್ಟರ ಮಟ್ಟಿಗೆ ಯಾಮಾರಿಸುತ್ತಿದ್ದಾರೆ ನೋಡಿ.
ಬೆಂಗಳೂರು ವಯಾ ಮಂತ್ರಾಲಯ ಮೂಲಕ ರಾಯಚೂರು ಮಾರ್ಗದಲ್ಲಿ ಒಂದು ಬಸ್ ಸಂಜೆ 7-30ಕ್ಕೆ ಬಿಟ್ಟು ಬೆಳಗ್ಗೆ 5 ಗಂಟೆಗೆ ರಾಯಚೂರು ತಲುಪಲಿದೆ, ಈ ವಾಹನದಲ್ಲಿ ಬೆಂಗಳೂರಿನಿಂದ ರಾಯಚೂರಿಗೆ ತೆರಳಬೇಕಾದರೆ ಮಹಿಳೆಯರು ನಿಗದಿತ ಪ್ರಯಾಣ ಚೀಟಿ ಪಡೆಯಲು ಹಣ ಪಾವತಿಸಲೇಬೇಕು. ಪ್ರಶ್ನೆ ಮಾಡಿದರೆ ಇದು ಅಂತರ್ ರಾಜ್ಯ ವಾಹನ ಎಂದು ನಿರ್ವಾಹಕರು ಹೇಳುತ್ತಾರೆ.
ಆದರೆ, ಸಾಮಾನ್ಯ ಸ್ಥಾಯಿ ಆದೇಶ ಏನು ಹೇಳುತ್ತದೆ?: ಸಾರಿಗೆ ಸಂಸ್ಥೆಯ ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 818 ರಲ್ಲಿ ಕ್ರಮ ಸಂಖ್ಯೆ 4 ಮತ್ತು 5 ರಲ್ಲಿ ಸ್ಪಷ್ಟವಾಗಿ ರಾಜ್ಯದಲ್ಲಿ ಪ್ರಯಾಣಿಸಬಹುದು ಎಂದು ಹೇಳಿದೆ. ಆದರೆ ಗಡಿ ಜಿಲ್ಲೆ ಬೀದರ್, ರಾಯಚೂರು ಸೇರಿದಂತೆ ಕೆಲವು ಜಿಲ್ಲೆಗೆ ಹಣ ಕೊಟ್ಟು ಹೋಗಬೇಕಾದ ಅನಿವಾರ್ಯ ಸ್ಥಿತಿ ರಾಜ್ಯದ ಮಹಿಳೆಯರದು. ಇದು ಹೇಗೆ?
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ನಿಮ್ಮ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಯಶಸ್ವಿಯಾಗಿದೆಯೇ ಇಲ್ಲ KSRTC ಅಧಿಕಾರಿಗಳ ಧನದಾಹಕ್ಕೆ ಹಳ್ಳ ಹಿಡಿದಿಸಿಯೇ ಎಂಬುದರ ಬಗ್ಗೆ ತಿಳಿದುಕೊಳ್ಳಿ. ಜತೆಗೆ ಸಾರಿಗೆ ಮಂತ್ರಿಗಳು ಈ ಬಗ್ಗೆ ಗಮನ ಹರಿಸಿ ಬೆಂಗಳೂರಿನಿಂದ ರಾಯಚೂರು, ಬೀದರ್ಗೆ ಪ್ರಯಾಣಿಸುವ ಪ್ರತಿ ಮಹಿಳೆಯರಿಗೆ ಉಚಿತ ಪ್ರಯಾಣ ಬಿಟ್ಟು ಹಣ ಕೊಟ್ಟು ಪ್ರಯಾಣಿಸುವ ಅನಿವಾರ್ಯತೆಯನ್ನು ಮೊದಲು ಪರಿಶೀಲಿಸಿ ಉಚಿತವಾಗಿ ಪ್ರಯಾಣಿಸುವುದಕ್ಕೆ ಅನುವು ಮಾಡಿಕೊಡಿ.
ಅಧಿಕಾರಿಗಳಿಂದ ಹಾರಿಕೆಯ ಉತ್ತರ: ರಾಯಚೂರು, ಬೀದರ್ ಸ್ಥಳಗಳಿಗೆ ಬೆಂಗಳೂರಿನಿಂದ ತೆರಳಬೇಕಾದರೆ ಹಣ ಪಾವತಿಸಬೇಕು. ಈ ಎರಡು ಜಿಲ್ಲೆಗಳು ಕರ್ನಾಟಕದಲ್ಲಿ ಇಲ್ಲವೇ ಎಂದು KSRTC ಸಾರ್ವಜನಿಕ ಸಂಪರ್ಕ ಅಧಿಕಾರಿ, ಮುಖ್ಯ ಸಂಚಾರ ವ್ಯವಸ್ಥಾಪಕರನ್ನು ಕೇಳಿದರೆ ಮತ್ತೊಬ್ಬ ಅಧಿಕಾರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ನುಣುಚಿಕೊಳ್ಳುತ್ತಾರೆ. ಹಾಗಾದರೆ ಇದರ ಬಗ್ಗೆ ಸಮರ್ಪಕ ಉತ್ತರ ನೀಡಬೇಕಾದವರೂ ಯಾರು!?
ಅಂತರ್ ರಾಜ್ಯ ಸುತ್ತಾಡಿ, ಕೊನೆಗೆ ರಾಯಚೂರು ಮತ್ತು ಬೀದರ್ ತಲುಪಿದರೆ, ಬೀದರ್ ಮತ್ತು ರಾಯಚೂರು ಜಿಲ್ಲೆಯನ್ನು ಆಂಧ್ರ ತೆಲಂಗಾಣಕ್ಕೆ ಸೇರಿಸಲಾದೀತೆ?.. ರಾಯಚೂರು ಮತ್ತು ಬೀದರ್ ಎರಡು ಜಿಲ್ಲೆಗಳು ಕರ್ನಾಟಕದ ಅವಿಭಾಜ್ಯ ಅಂಗವಲ್ಲವೇ…?
– ವರದಿ ಸಿದ್ದಲಿಂಗೇಗೌಡ ರಾಮನಗರ