ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾ ಅಧಿಕಾರಿ ಸೇರಿ ಐವರು ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನು ಚಾಲಕ ಕಂ ನಿರ್ವಾಹಕರೊಬ್ಬರು ದಾಖಲಿಸಿದ್ದಾರೆ.
ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾರಿಗೆ ನಿಗಮದ ಕೋಲಾರ ವಿಭಾಗ ಕೋಲಾರ ಘಟಕದ ಚಾಲಕ ಕಂ ನಿರ್ವಾಹಕ ಜೆ.ಎನ್.ನಾಗರಾಜ ಎಂಬುವರು ಅಧಿಕಾರಿಗಳ ವಿರುದ್ಧ ಮೇ 24ರಂದು ದೂರು ದಾಖಲಿಸಿದ್ದಾರೆ.
ಈ ಸಂಬಂಧ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾ ಅಧಿಕಾರಿ ಎಸ್.ಎನ್.ಅರುಣ್, ಸಹಾಯಕ ಸಂಚಾರ ವ್ಯವಸ್ಥಾಪಕ ಎನ್.ಜಿ. ಪ್ರಶಾಂತ್ ಕುಮಾರ್, ಸಂಚಾರ ನಿರೀಕ್ಷಕ ಆರ್.ಡಿ.ಸತೀಶ್, ಸಹಾಯಕ ಸಂಚಾರಕ ನಿರೀಕ್ಷಕ ಕೆ.ಬಿ.ಅರುಣ್, ಅಹಾಯಕ ಸಂಚಾರ ಅಧೀಕ್ಷಕ ಮಂಜುನಾಥ ಹೊನ್ನಾಳ ಇವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ದೂರಿನಲ್ಲೇನಿದೆ?: ಕೋಲಾರ ವಿಭಾಗದ ಕೋಲಾರ ಘಟಕದ ಚಾಲಕ-ಕಂ-ನಿರ್ವಾಹಕ ಜೆ.ಎನ್.ನಾಗರಾಜ ಆದ ನಾನು 11-05-2024 ರಂದು ಘಟಕದಲ್ಲಿ ನನಗೆ ಮಾರ್ಗ ಸಂಖ್ಯೆ 71 ಎಬಿ ಗೆ ನಿರ್ವಾಹಕನಾಗಿ ಕರ್ತವ್ಯವನ್ನು ನಿರ್ವಹಿಸಲು ನಿಯೋಜಿಸಿರುತ್ತಾರೆ. ನನ್ನ ಜೊತೆ ಚಾಲಕರಾಗಿ ಕರ್ತವ್ಯವನ್ನು ನಿರ್ವಹಿಸಲು ನಾರಾಯಣಸ್ವಾಮಿ ಮತ್ತು ವಾಹನ ಸಂಖ್ಯೆ ಕೆಎ-07, ಎಫ್-1851 ವಾಹನವನ್ನು ಕೊಟ್ಟು ನಿಯೋಜಿಸಿರುತ್ತಾರೆ.
ಈ ಮಾರ್ಗವು 11-05-2024 ರಂದು ಬೆಳಗ್ಗೆ ಸುಮಾರು 8.30 ಗಂಟೆಗೆ ಕೋಲಾರ ಬಸ್ ನಿಲ್ದಾಣದಿಂದ ಹೊರಟು, ಸಮಯ ಸುಮಾರು 11.25 ಗಂಟೆಗೆ ಕೆ.ಎಸ್.ಆರ್.ಟಿ.ಸಿ. ಟರ್ಮಿನಲ್-03 ಕೇಂದ್ರ ಬಸ್ ನಿಲ್ದಾಣ ಬೆಂಗಳೂರಿಗೆ ತಲುಪಿ ಮಧ್ಯಾಹ್ನ 12.15 ಗಂಟೆಗೆ ಕೇಂದ್ರ ಬಸ್ ನಿಲ್ದಾಣದಿಂದ ತಿರುಪತಿಗೆ ಕಾರ್ಯಾಚರಣೆ ಮಾಡಿ ಸಂಜೆ 6.30 ಗಂಟೆಗೆ ತಿರುಪತಿ ಬಸ್ ನಿಲ್ದಾಣಕ್ಕೆ ತಲುಪಿರುತ್ತೇವೆ.
ಬಳಿಕ ರಾತ್ರಿ 7.15 ಗಂಟೆಗೆ ತಿರುಪತಿಯಿಂದ ಬೆಂಗಳೂರಿಗೆ ಕಾರ್ಯಾಚರಣೆ ಮಾಡಿಕೊಂಡು 12-05-2024 ರಂದು ಬೆಳಗಿನ ಜಾವ 1.25 ಗಂಟೆಗೆ ಟರ್ಮಿನಲ್-3ರ ಬೆಂಗಳೂರು ಕೇಂದ್ರ ಬಸ್ ನಿಲ್ದಾಣವನ್ನು ತಲುಪಿರುತ್ತೇವೆ. ಪುನಃ ಕೇಂದ್ರ ಬಸ್ ನಿಲ್ದಾಣದಿಂದ ಕೋಲಾರ ಕಾರ್ಯಾಚರಣೆ ಮಾಡುವ ಸುತ್ತುವಳಿ ಬಾಕಿಯಿರುತ್ತದೆ. ಇಲ್ಲಿಯವರೆವಿಗೂ ನಾನು ಯಾವುದೇ ವಿಶ್ರಾಂತಿ ಇಲ್ಲದೇ ಸುಮಾರು 600 ಕಿ.ಮೀ.ಗಳು ಕಾರ್ಯಾಚರಣೆ ಮಾಡಿರುತ್ತೇವೆ.
ಆದರೆ, ನಾವು ಬೆಂಗಳೂರು ಕೇಂದ್ರ ಬಸ್ ನಿಲ್ದಾಣ ತಲುಪುತ್ತಿದ್ದಂತೆ 12.05.2024 ರಂದು ಕೆಎಸ್ಆರ್ಟಿಸಿ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ಟರ್ಮಿನಲ್-03 ಆವರಣದಲ್ಲಿ ಕೆಂಪೇಗೌಡ ಬಸ್ ನಿಲ್ದಾಣದ ಈ ಐವರು ಅಧಿಕಾರಿಗಳು ಬಂದು ಮತ್ತೆ ಬೆಂಗಳೂರಿಂದ ತಿರುಪತಿಗೆ ಹೆಚ್ಚಿನ ಟ್ರಿಪ್ ಮಾಡುವಂತೆ ನನಗೆ ಹೇಳಿದರು.
ಆ ವೇಳೆ ನಾನು ಅವರಿಗೆ ಬೆಳಗ್ಗೆಯಿಂದ ಸತತವಾಗಿ 13.30 ಗಂಟೆಗಳ ಕಾಲ ಸತತವಾಗಿ ವಿಶ್ರಾಂತಿಯಿಲ್ಲದೇ ಕರ್ತವ್ಯವನ್ನು ನಿರ್ವಹಿಸಿರುತ್ತೇನೆ, ಆದ್ದರಿಂದ ನಾನು ವಿಶ್ರಾಂತಿ ಪಡೆದು ನಂತರ ಹೋಗುತ್ತೇನೆ ಎಂದು ಪರಿಪರಿಯಾಗಿ ಅವರ ಹತ್ತಿರ ನಿವೇದಿಸಿದರೂ, ನನ್ನ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡಿ ಅವಾಚ್ಯ ಪದಗಳಿಂದ ಬೈದು ಜಾತಿ ನಿಂದನೆ ಮಾಡಿ ಸಾರ್ವಜನಿಕರ ಮಧ್ಯೆ ಅಪಮಾನಗೊಳಿಸಿ ಮಾನಸಿಕ ನೋವುಂಟು ಮಾಡಿದ್ದಾರೆ. ಅಲ್ಲದೆ ನೀನು ಈಗ ತಿರುಪತಿ ಟ್ರಿಪ್ಗೆ ಹೋಗಿಲ್ಲ ಅಂದರೆ ನಿನ್ನನ್ನು ಸಾಯಿಸಿ ಬಿಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಅಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಜಾತಿ ನಿಂದನೆ, ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎಂಬುವುದು ಸೇರಿ ಇನ್ನು ಹಲವಾರು ರೀತಿಯ ಆರೋಪ ಮಾಡಿರುವ ನಿರ್ವಾಹಕ ನಾಗರಾಜ, ಈ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ನಮಗೆ ನ್ಯಾಯಕೊಡಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.