ಮೈಸೂರು: ಕರ್ನಾಟಕ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ (NRI) ಗಳಿಗೆ ಸೀಟುಗಳನ್ನು ಕಾಯ್ದಿರಿಸುವುದಕ್ಕಾಗಿ ರಾಷ್ಟ್ರೀಯ ಮೆಡಿಕಲ್ ಕೌನ್ಸಿಲ್ (NMC) ಗೆ ರಾಜ್ಯ ಸರ್ಕಾರ ಪತ್ರ ಬರೆದಿರುವುದು ಖಂಡನೀಯ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಖಂಡಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ಬಡ ಮಕ್ಕಳಿಗೆ ರೈತರ ಮಕ್ಕಳಿಗೆ, ಹಿಂದುಳಿದ – ದಲಿತ, ಕೂಲಿ ಕಾರ್ಮಿಕರ ಮಕ್ಕಳಿಗೆ ಸರ್ಕಾರ ನಿಗದಿ ಮಾಡಿದ ಶುಲ್ಕದಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೀಟುಗಳು ಸಿಗುತ್ತಿವೆ.
ಇಂತಹ ವ್ಯವಸ್ಥೆಯನ್ನು ಬದಲಾಯಿಸಿ ಹೊರದೇಶದಲ್ಲಿ ವಾಸ ಮಾಡುವ ಮಕ್ಕಳಿಗೆ (NRI) ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15 ರಷ್ಟು ಸೀಟುಗಳನ್ನು ಕಾಯ್ದಿರಿಸುವಂತೆ ರಾಜ್ಯ ಸರ್ಕಾರ “ರಾಷ್ಟ್ರೀಯ ಮೆಡಿಕಲ್ ಕೌನ್ಸಿಲ್ (NMC) ಗೆ ಒತ್ತಾಯ ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಅಲ್ಲದೆ ರಾಜ್ಯದ ಜನರ ಹಿತಾಸಕ್ತಿಯನ್ನು ಬಲಿಕೊಡುತ್ತಿರುವುದು ಸರ್ಕಾರಕ್ಕೆ ಗೌರವ ತರುವುದಿಲ್ಲ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ರೈತ ಪರ ಸಂಘಟನೆಗಳ ಸಹಕಾರ ದೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಆತ್ತಹಳ್ಳಿ ದೇವರಾಜ್ ಎಚ್ಚರಿಸಿದ್ದಾರೆ.