NEWSನಮ್ಮಜಿಲ್ಲೆಬೆಂಗಳೂರು

ಪ್ರತಿ ಮನೆಯಿಂದ ₹100 ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಎಎಪಿ ವಿರೋಧ – ಜೂ.17ರಿಂದ ಮನೆಮನೆಗೆ ತೆರಳಿ ಜಾಗೃತಿ ಅಭಿಯಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪ್ರತಿವರ್ಷ ಬಿಬಿಎಂಪಿ ಬಜೆಟ್‌ನಲ್ಲಿ ಕಸ ವಿಲೇವಾರಿಗೆಂದೇ ಹಣ ಮೀಸಲಿಟ್ಟಿದ್ದಾರೆ. ಪ್ರತಿವರ್ಷವೂ ಆಸ್ತಿ ತೆರಿಗೆ ಮೂಲಕ ಘನತ್ಯಾಜ್ಯ ನಿರ್ವಹಣೆ (SWM) ಸೆಸ್ ಎಂದೇ ತೆರಿಗೆ ಪಾವತಿಸಿದ್ದೇವೆ. ಹೀಗಿದ್ದರೂ ಮತ್ತೊಮ್ಮೆ ಘನತ್ಯಾಜ್ಯ ನಿರ್ವಹಣಾ ಕಂಪನಿ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಕಿಡಿಕಾರಿದ್ದಾರೆ.

ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷದಲ್ಲಿ ಬೆಂಗಳೂರಿನ ನಾಗರಿಕರಿಂದ ಬರೋಬ್ಬರಿ ಒಂದು ಸಾವಿರದ ನೂರು ಕೋಟಿ ರೂ.ಗಳನ್ನು ಆಸ್ತಿ ತೆರಿಗೆ ಮೂಲಕ ಘನತ್ಯಾಜ್ಯ ನಿರ್ವಹಣೆ (SWM) ಸೆಸ್ ಅನ್ನು ಸಂಗ್ರಹಿಸಲಾಗಿದೆ. ಕೇಂದ್ರ ಸರ್ಕಾರ ಸಹ ಸ್ವಚ್ಛ ಭಾರತ ಸೆಸ್ ಎಂದು ಆದಾಯ ತೆರಿಗೆ ಮೂಲಕ ಮಹಾನಗರಗಳಿಂದ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸುತ್ತಿದೆ.

ಬಿಬಿಎಂಪಿ ಕೂಡ ಪ್ರತಿವರ್ಷ ಕಸ ವಿಲೇವಾರಿಗಾಗಿ 450 ರಿಂದ 750 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. 2023-24ರಲ್ಲಿ 650 ಕೋಟಿ ರೂ.ಗಳನ್ನು ಕಸ ವಿಲೇವಾರಿಗೆ ಖರ್ಚು ಮಾಡಲಾಗಿದೆ ಎಂದಿದೆ. ಹೀಗಿದ್ದರೂ ಬಳಕೆದಾರರ ಶುಲ್ಕ ಎಂದು ತಿಂಗಳಿಗೆ 100 ರಿಂದ 500 ರೂ.ಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಇದರಿಂದ ವಾರ್ಷಿಕ 800 ಕೋಟಿ ಘನತ್ಯಾಜ್ಯ ಕಂಪನಿಗೆ ಆದಾಯ ಬರಲಿದೆ. ಪ್ರತಿವರ್ಷ ಬಿಬಿಎಂಪಿ ಬಜೆಟ್‌ನಲ್ಲಿ ಮೀಸಲಿಡುವ ಹಣ ಎಲ್ಲಿಗೆ ಹೋಗುತ್ತಿದೆ. ಅದು ಡಿ.ಕೆ. ಶಿವಕುಮಾರ್ ಅವರ ಟ್ಯಾಕ್ಸ್ ಆಗಿದೆಯಾ ಎಂದು ಪ್ರಶ್ನಿಸಿದರು.

ಈಗಾಗಲೇ ನೀವು ಘನತ್ಯಾಜ್ಯ ನಿರ್ವಹಣೆ (SWM) ಸೆಸ್, ಸ್ವಚ್ಛ ಭಾರತ ಸೆಸ್ ಎಂದು ಆದಾಯ ಗಳಿಸುತ್ತಿದ್ದೀರಿ. ಕಸ ವಿಲೇವಾರಿಗಾಗಿ ಮತ್ತೆ ಸಂಗ್ರಹಿಸಲು ಮುಂದಾಗಿರುವ 800 ಕೋಟಿ ರೂ. ಯಾರ ಜೇಬಿಗೆ ಹೋಗುತ್ತದೆ. ಬೆಂಗಳೂರಿನ ಅಭಿವೃದ್ಧಿ ಸಚಿವರಾಗಿರುವ ಶಿವಕುಮಾರ್ ನೀವು ಜನಸಾಮಾನ್ಯರ ಮೇಲೆ ಹೊರೆ ಹೇರುತ್ತಿದ್ದೀರಿ.

ಇನ್ನು ಈ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಇಲ್ಲ. ಬೆಂಗಳೂರಿನ ಸಾವಿರಾರು ಮನೆಗಳಿಗೆ ಭೇಟಿ ನೀಡಿ ಈ ಬಗ್ಗೆ ಕೇಳಿದ್ದಕ್ಕೆ ಅವರಿಗೆ ಅವರಿಗೇ ಮಾಹಿತಿಯೇ ಇಲ್ಲ. ಶೇ.85 ರಿಂದ 90ರಷ್ಟು ಮಂದಿ ಇದು ಹಗರಣವಲ್ಲದೆ ಮತ್ತೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೋಹನ್ ದಾಸರಿ ತಿಳಿಸಿದರು.

ಇದೇ ವಿಚಾರವಾಗಿ ಜೂನ್‌ 17ರ ಸೋಮವಾರದಿಂದ 10 ದಿನಗಳ ಕಾಲ ಬೆಂಗಳೂರಿನಾದ್ಯಂತ ಜನಾಭಿಪ್ರಾಯ ಸಂಗ್ರಹ ಮಾಡುತ್ತೇವೆ. ಆ ಅಭಿಯಾನದ ಮುಖಾಂತರ ಬೆಂಗಳೂರಿನ ಜನತೆಗೆ ಕಸ ವಿಲೇವಾರಿ ಹೆಸರಿನಲ್ಲಿ ಹೇಗೆ ಸಾವಿರಾರು ಕೋಟಿ ರೂ. ಹಗರಣ ಆಗುತ್ತಿದೆ ಎನ್ನುವ ಮಾಹಿತಿ ನೀಡುವುದರ ಜೊತೆಗೆ ಬೇರೆ ಬೇರೆ ನಗರಗಳಲ್ಲಿ ಕಡಿಮೆ ಖರ್ಚಿನಲ್ಲಿ ಹೇಗೆ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತೇವೆ. ಜನಾಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುಂದಿಡಲಿದ್ದೇವೆ ಎಂದು ಹೇಳಿದರು.

ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ ಮೃತ್ಯುಂಜಯ ಮಾತನಾಡಿ, ಕಸದಿಂದ ರಸ ಮಾಡುವ ಕಾಲದಲ್ಲಿ ಕಸ ನಿರ್ವಹಣೆಗೆಂದೇ ಹೆಚ್ಚುವರಿ ಬಳಕೆದಾರರ ಶುಲ್ಕ ವಿಧಿಸಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. 46 ಲಕ್ಷ ಆಸ್ತಿಯಲ್ಲಿ ಕೇವಲ 16 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿಸಿದ್ದಾರೆ. ಇನ್ನುಳಿದ 30 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿಸಿಲ್ಲ. ಹೀಗಿರುವಾಗ ಆಸ್ತಿ ತೆರಿಗೆ ಪಾವತಿಸಿರುವವರಿಗೆ ಮತ್ತೆ ಬರೆ ಹಾಕಲು ಮುಂದಾಗಿದ್ದಾರೆ. ಬಿಬಿಎಂಪಿಯ 2,100 ಕೋಟಿ ರೂ. ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಜನರ ಮೇಲೆ ಬರೆ ಎಳೆಯಲು ಮುಂದಾಗಿದ್ದಾರೆ ಎಂದು ದೂರಿದರು.

ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿ. ಈಗಾಗಲೇ ವಿಧಿಸಲಾಗಿರುವ ತೆರಿಗೆಗಳನ್ನು ಪ್ರತಿಯೊಬ್ಬರಿಂದ ಸಂಗ್ರಹಿಸಿ. ಅದನ್ನು ಬಿಟ್ಟು ಹೆಚ್ಚುವರಿ ಶುಲ್ಕ ವಿಧಿಸಲು ಮುಂದಾದರೆ ಆಮ್ ಆದ್ಮಿ ಪಾರ್ಟಿ ಹೋರಾಟ ಮಾಡಲಿದೆ. ಯಾವುದೇ ಕಾರಣಕ್ಕೂ ಜನರಿಗೆ ಬರೆ ಎಳೆಯಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇನ್ನು ಹಿಂದಿನ ಬಿಜೆಪಿ ಸರ್ಕಾರವೂ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ನೀವು ಕೂಡ ಅದೇ ಕೆಲಸದಲ್ಲಿ ತೊಡಗಿದ್ದೀರಿ. ಈ ಕೂಡಲೇ ನೀವು ಈ ನಿರ್ಧಾರವನ್ನು ಹಿಂಪಡೆಯಬೇಕು. ಆಮ್ ಆದ್ಮಿ ಪಾರ್ಟಿಯ ಗ್ಯಾರಂಟಿಗಳನ್ನು ಕದ್ದು ಉಚಿತವಾಗಿ ನೀಡುತ್ತಿದ್ದರೂ, ಭ್ರಷ್ಟಾಚಾರ ನಿಂತಿಲ್ಲ. ಘನತ್ಯಾಜ್ಯ ನಿರ್ವಹಣೆಗೆ ಶುಲ್ಕ ವಿಧಿಸಲು ಮುಂದಾಗಿರುವ ನಿಮ್ಮ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಹೇಳಿದರು.

ಈ ವೇಳೆ ಪಕ್ಷದ ಮುಖಂಡರಾದ ಶ್ರೀಮತಿ ಅಂಜನಾ ಗೌಡ ಹಾಗೂ ಮಹಾಲಕ್ಷ್ಮಿ ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ