ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದಕ್ಷಿಣ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಕೆ.ಆಶಾಲತ ಅವರನ್ನು ನಿಯೋಜಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಈವರೆಗೂ ಬಿಎಂಟಿಸಿಯಲ್ಲಿ ವಿಭಾಗೀಯ ಯಾಂತ್ರಿಕ ಅಭಿಯಂತರರಾಗಿದ್ದ ಕೆ.ಆಶಾಲತ ಸೇರಿದಂತೆ 6 ಮಂದಿ ಅಧಿಕಾರಿಗಳಿಗೆ ಬುಧವಾರ ಜೂನ್ 26ರಂದು ಮುಂಬಡ್ತಿ ನೀಡಿ ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ.
ಮುಂಬಡ್ತಿಯೊಂದಿಗೆ ಉನ್ನತ ಹುದ್ದೆ ಅಲಂಕರಿಸಿದ ಅಧಿಕಾರಿಗಳು: ವಿಭಾಗೀಯ ಯಾಂತ್ರಿಕ ಅಭಿಯಂತರ (ದರ್ಜೆ-1 ಕಿರಿಯ)ರನ್ನು ಉಪ ಮುಖ್ಯ ಯಾಂತ್ರಿಕ ಅಭಿಯಂತರ(ದರ್ಜೆ-1 ಹಿರಿಯ) ಹುದ್ದೆಗೆ ಮುಂಬಡ್ತಿ ನೀಡಿ ಕಾರ್ಯ ನಿರ್ವಹಣೆ (ಅಫಿಷಿಯೇಟಿಂಗ್) ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶಿಸಿದ್ದಾರೆ.
ಬಿಎಂಟಿಸಿ ಸಂಸ್ಥೆಯ ಯಾಂತ್ರಿಕ ವಿಭಾಗದ ವಿಭಾಗೀಯ ಅಭಿಯಂತರರಾದ ಕೆ.ಚಂದು ಅವರನ್ನು ನಿಯಮ 17/1 ರಡಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ಕೇಂದ್ರ ಕಚೇರಿಗೆ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.
ಇನ್ನು ಬಿಎಂಟಿಸಿಯ ವಿಭಾಗೀಯ ಯಾಂತ್ರಿಕ ಅಭಿಯಂತರರಾಗಿದ್ದ ಅಮಲಿಂಗಯ್ಯ ಪಿ. ಹೊಸಪೂಜಾರಿ ಅವರನ್ನು ಕೆಎಸ್‌ಆರ್‌ಟಿಸಿ ಮತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಬಿಎಂಟಿಸಿಯ ವಿಭಾಗೀಯ ಯಾಂತ್ರಿಕ ಅಭಿಯಂತರರಾದ ರಾಜೀವಲೋಚನ ಅವರನ್ನು ನಿಯಮ 17/1 ರಡಿ ನಿಗಮದ ಉಪ ಮುಖ್ಯ ಕಾರ್ಮಿಕ & ಕಲ್ಯಾಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅದರಂತೆ ಬಿಎಂಟಿಸಿಯ ವಿಭಾಗೀಯ ಯಾಂತ್ರಿಕ ಅಭಿಯಂತರರಾದ ಕೆ.ಎಸ್. ಚೈತ್ರ ಅವರನ್ನು ನಿಗಮದ ಉಪ ಮುಖ್ಯ ಅಭಿಯಂತರರಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗ ಯಾಂತ್ರಿಕ ವಿಭಾಗೀಯ ಅಭಿಯಂತರರಾದ ಎಸ್.ಸೂರ್ಯಕಾಂತ ಅವರನ್ನು ನಿಯಮ 17/1 ರಡಿ ಬಿಎಂಟಿಸಿಯ ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರ ಬಡ್ತಿ ನೀಡಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ಈ 6 ಅಧಿಕಾರಿಗಳನ್ನು ಬಡ್ತಿ ಹುದ್ದೆಯಲ್ಲಿ ಹಾಜರಾಗಲು ಅನುವಾಗುವಂತೆ 26-6-2024 ರ ಅಪರಾಹ್ನದಿಂದ ಜಾರಿಗೆ ಬರುವಂತೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಿಂದ ಬಿಡುಗಡೆಗೊಳಿಸಲಾಗಿದೆ. ಒಂದು ವೇಳೆ ಬಡ್ತಿಯನ್ನು ನಿರಾಕರಿಸುವುದಾಗಿ ಮನವಿ ಸಲ್ಲಿಸಿದ್ದಲ್ಲಿ ಸಂಸ್ಥೆಯ ಸುತ್ತೋಲೆ ಸಂಖ್ಯೆ. 1344ರ 15-7-2006 ರನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಸೂಚಿಸುವ ಮೂಲಕ ಆದೇಶ ಹೊರಡಿಸಿದ್ದಾರೆ.