ಬೆಂಗಳೂರು: ಕೇಂದ್ರ ಸರ್ಕಾರ ಆಮ್ ಆದ್ಮಿ ಪಾರ್ಟಿಯ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ಕಳುಹಿಸಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಎದುರಾಳಿಗಳನ್ನು ಮುಗಿಸಲು ಸಂಚು ಮಾಡಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೇಲೆ ಇಡಿ, ಸಿಬಿಐ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ನಡೆಸುತ್ತಿರುವ ನಿರಂತರ ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಆಮ್ ಆದ್ಮಿ ಪಕ್ಷ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ದಾಸರಿ, ಆಮ್ ಆದ್ಮಿ ಪಾರ್ಟಿಯ ನಾಯಕರನ್ನು ಜೈಲಿನಲ್ಲಿಡಲು ಇಡಿ ಮತ್ತು ಸಿಬಿಐ ಕೆಲಸ ಮಾಡುತ್ತಿದೆ ಎಂದು ಕೋರ್ಟ್ ಜಡ್ಜ್ ಕೂಡ ಹೇಳಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನೆ ಮಾಡಿದರು.
ಅರವಿಂದ್ ಕೇಜ್ರಿವಾಲ್ ತನಿಖೆಗೆ ಎಲ್ಲಾ ಸಹಕಾರ ಕೊಟ್ಟಿದ್ದರೂ, 2 ವರ್ಷದ ಬಳಿಕ ಅವರನ್ನು ಏಕಾಏಕಿ ಬಂಧಿಸಲಾಯಿತು. ತನಿಖಾ ಸಂಸ್ಥೆಗಳು ಈ ರೀತಿ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡಿದರೆ, ನೀಟ್ ರೀತಿಯ ಹಗರಣಗಳಿಗೆ ನ್ಯಾಯ ಸಿಗುತ್ತದೆಯೇ? ಎಂದು ಪ್ರಶ್ನಿಸಿದರು.
ಈ ಸಂದರ್ಭ ಪಕ್ಷದ ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಫರೀದ್, ಬಸವರಾಜ ಮುದೀಗೌಡರ್, ರವಿ ಕುಮಾರ್, ಉಷಾ ಮೋಹನ್, ಅಶೋಕ್ ಮೃತ್ಯುಂಜಯ, ಜಗದೀಶ್ ಬಾಬು, ಶಾಷಾ ವಲಿ, ಅಂಜನಾ ಗೌಡ, ಮಹಾಲಕ್ಷಿ ಮತ್ತಿತರ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.