ವಿಜಯನಗರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೂಡ್ಲಿಗಿ ಘಟಕದ ಸಿಬ್ಬಂದಿಗಳು ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಿನ್ನೆ ಸಂಜೆ ಸಚಿವರನ್ನು ಭೇಟಿ ಮಾಡಿದ ಕೂಡ್ಲಿಗಿ ಘಟಕದ ಸಿಬ್ಬಂದಿಗಳು ಮನವಿ ಪತ್ರ ಸಲ್ಲಿಸಿ 1/1/2020ರಿಂಧ ಜಾರಿಗೆಯಾಗಬೇಕಾದ ವೇತನ ಪರಿಷ್ಕರಣೆ ವಿಳಂಬವಾಗಿ ಶೇ.15 ನೀಡಿದ್ದು, ಅದಕ್ಕೆ ಸಂಬಂಧಿಸಿದಂತೆ ಉಳಿದ 38 ತಿಂಗಳ ವೇತನ ಹಿಂಬಾಕಿಯನ್ನು (Arrears) ಒಂದೇ ಕಂತಿನಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು 1/1/2024ಕ್ಕೆ ಸಾರಿಗೆ ನೌಕರ ವೇತನಕ್ಕೆ ಸಂಬಂಧಿಸಿದಂತೆ ನಿಮ್ಮ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಸರ್ಕಾರಿ ನೌಕರರ “ಸರಿ ಸಮಾನ ವೇತನ” ನೀಡಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಅಂತಿಮ ಮತ್ತು ದೃಢ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಿದೆ.
ಇನ್ನು ಕೂಡ್ಲಿಗಿ ಡಿಪೋ ಹಳೆಯದಾಗಿದ್ದು ಅದನ್ನು ನವೀಕರಣ ಮಾಡಬೇಕು ಹಾಗೂ ಸಾರಿಗೆ ನೌಕರರ ವಸತಿ ಗೃಹಗಳನ್ನು ನಿರ್ಮಿಸಲು ಅಗತ್ಯವಾದ ನಿವೇಶನ ನೀಡಬೇಕು ಎಂದು ಮನವಿ ಮಾಡಿದರು.
ನಿಮ್ಮ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ “ಶಕ್ತಿಯೋಜನೆ”ಯನ್ನು ಸಮಪರ್ಕವಾಗಿ ಹಗಲು-ರಾತ್ರಿ ಅತ್ಯಂತ ಶ್ರಮವಹಿಸಿ ಸಂಪೂರ್ಣವಾಗಿ ನಿಭಾಯಿಸಿ ಘನಸರ್ಕಾರಕ್ಕೆ ಜನಪ್ರಿಯತೆ ತಂದುಕೊಟ್ಟಿದ್ದೇವೆ. ಆದ್ದರಿಂದ ಸಾರಿಗೆ ನೌಕಕರ ಪರಿಶ್ರಮವನ್ನು ಅರಿತು ನಮ್ಮ ಬೇಡಿಕೆಗಳನ್ನು ಅತಿ ಶೀಘ್ರದಲ್ಲಿ ಈಡೇರಿಸಿಕೊಡಬೇಕೆಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದರು.
ಘಟಕದ ನೌಕರರಿಂದ ಮನವಿ ಸ್ವೀಕರಿಸಿದ ಸಚಿವರು ಈ ಬಗ್ಗೆ ಅಧಿಕಾರಿಗಳು ಮತ್ತು ನೌಕರರು ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂಧಿನ ದಿನಗಳಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಾಗುವುದು. ಹೀಗಾಗಿ ನಿಗಮದ ಅಧಿಕಾರಿಗಳು ಮತ್ತು ನೌಕರರು ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು ಎಂದು ಘಟಕದ ನೌಕರರು ತಿಳಿಸಿದ್ದಾರೆ.