ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ 1.25 ಲಕ್ಷ ನೌಕರರಿಗೆ 2024ರ ಜ.1ರಿಂದ ಆಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿ ನಮಗೆ ಸರ್ಕಾರ ಸಿಹಿ ಸುದ್ದಿಕೊಡಲಿದೆ ಎಂದು ನೌಕರರು ಭಾವಿಸಿದ್ದರು ಆದರೆ, ಅವರ ಭಾವನೆಗೆ ಸರ್ಕಾರ ಸ್ಪಂದಿಸಿಲ್ಲ.
ಆದರೆ, ಸರ್ಕಾರ ರಚನೆಯಾದ ಬಳಿಕ ಈ ಹಿಂದೆ ಎರಡು ಬಾರಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ 7ನೇ ವೇತನ ಆಯೋಗ ಜಾರಿ ಸಂಬಂಧ ಯಾವುದೇ ಪ್ರಸ್ತಾಪವಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡ ನೌಕರರ ಸಂಘ ಇದೇ ಜುಲೈ 29ರಿಂದ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ಮೂರನೇ ಸಚಿವ ಸಂಪುಟ ಸಭೆಯಲ್ಲಿ ಅಂದರೆ ನಿನ್ನೆ ವೇತನ ಆಯೋಗ ಜಾರಿಗೆ ನಿರ್ಧಾರ ತೆಗೆದುಕೊಂಡಿದೆ.
ಅದರಂತೆ ಸಾರಿಗೆ ನೌಕರರ ಸಂಘಟನೆಗಳಲ್ಲೂ ಅಥವಾ ನೌಕರರು ಅಧಿಕಾರಿಗಳ ನಡುವೆ ಒಗ್ಗಟ್ಟು ಇದ್ದಿದ್ದರೆ ಸರ್ಕಾರ ಸರ್ಕಾರಿ ನೌಕರರ ಕೂಗಿಗೆ ಹೇಗೆ ಬೆಚಿತೋ ಅದರಂತೆ ಸಾರಿಗೆ ನೌಕರರ ಸಂಘಟನೆಗಳ ಎಚ್ಚರಿಕೆಗೂ ಹೆದರಿ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿತ್ತು. ಆದರೆ, ಇಲ್ಲಿ ನಾಯಿ ಕೊಡೆಯಂತೆ ಹುಟ್ಟಿಕೊಂಡಿರುವ ಸಂಘಟನೆಗಳ ಜತೆ ಹರಿದು ಹಂಚಿಹೋಗಿರುವ ನೌಕರರು ಒಗ್ಗಟ್ಟಾಗಿಲ್ಲದ ಪರಿಣಾಮ ಒಂದೊಂದು ಸಂಘಟನೆ ಒಂದೊಂದು ರೀತಿ ನಡೆದುಕೊಳ್ಳುತ್ತಿರುವುದರಿಂದ ಇಂದು ಏನಾಗಿದೆ ಎಂಬುವುದು ಕಾಣುತ್ತಿದೆ.
ಇನ್ನು ಸಂಘಟನೆಗಳ ಪದಾಧಿಕಾರಿಗಳು ನೌಕರರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಬಲಿಷ್ಟವಾದ ಹೋರಾಟ ರೂಪಿಸುತ್ತಿರುವಂತೆ ಕಾಣಿಸುತ್ತಿಲ್ಲ. ಇನ್ನು ಸಾರಿಗೆ ನೌಕರರು ಮತ್ತು ಅಧಿಕಾರಿಗಳು ಒಗ್ಗಟ್ಟಾಗಿಲ್ಲದಿರುವುದು ಇದಕ್ಕೆ ಕಾರಣವೂ ಇರಬಹುದು. ಹೀಗಾಗಿ ಸಂಘಟನೆಗಳ ಪದಾಧಿಕಾರಿಗಳುಯ ನಿಮ್ಮನ್ನೊಳಗೊಂಡಂತೆ ಸಭೆ ಸೇರಿ ಹೋರಾಟದ ರೂಪರೇಷೆ ಸಿದ್ಧಪಡಿಸಿದ ಹೊರತು ಯಾವುದೇ ಕಾರಣಕ್ಕೂ ನಿಮ್ಮ ಬೇಡಿಕೆಗಳು ನೀವು ಅಂದು ಕೊಂಡಂತೆ ಈಡೇರುವುದಿಲ್ಲ.
ಹೀಗಾಗಿ ಇನ್ನಾದರೂ ನೌಕರರು ಮತ್ತು ಅಧಿಕಾರಿಗಳು ಇತರ ನಿಗಮಗಳಲ್ಲಿ ಇರುವಂತೆ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ. ಆದರೆ ಅದು ಸದ್ಯದ ಪರಿಸ್ಥಿತಿಯಲ್ಲಿ ಕಾಣುತ್ತಿಲ್ಲ. ಅದಕ್ಕೆ ಕಾರಣವೂ ಇದೆ. ಸಾರಿಗೆ ನಿಗಮಗಳಲ್ಲಿ ಇರುವ ಬಹುತೇಕ ಅಧಿಕಾರಿಗಳು ನೌಕರರಿಂದಲೇ ನೇರವಾಗಿ ಲಂಚಪಡೆಯುವುದು, ಡಿಪೋಗಳಿಗೆ ಬರಬೇಕಿರುವ ಬಿಡಿ ಭಾಗಗಳ ಹಣವನ್ನು ಕೃಷ್ಣನ ಲೆಕ್ಕ ತೋರಿಸಿ ಸೂಟ್‌ಕೇಸ್‌ಗೆ ತುಂಬಿಕೊಂಡು ಹೋಗುತ್ತಿರುವುದರಿಂದ ಬಹುತೇಕ ಅಧಿಕಾರಿಗಳು ವೇತನದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಇನ್ನು ನಿಷ್ಠಾವಂತ ಕೆಲ ಅಧಿಕಾರಿಗಳು ನೇರವಾಗಿಯೋ ಇಲ್ಲ ಪರೋಕ್ಷವಾಗಿಯೋ ಹೋರಾಟಕ್ಕೆ ಬೆಂಬಲ ಸೂಚಿಸಿದರೆ ಅಂತ ಅಧಿಕಾರಿಗಳ ಬಗ್ಗೆ ಕೆಲ ಸಂಘಟನೆಗಳ ಬಳಿಹೋಗಿ ಕಿವಿ ಊದುವ ಮೂಲಕ ಭ್ರಷ್ಟ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಕಿರುಕುಳ ಕೊಡಿಸುವುದು ನಡೆಯುತ್ತಿದೆ. ಹೀಗಾಗಿ ನಿಷ್ಠಾವಂತ ಅಧಿಕಾರಿಗಳು ಮೌನ ವಹಿಸುವ ಸ್ಥಿತಿ ಇದೆ.
ಇನ್ನೊಂದೆಡೆ ನೌಕರರು ಹೋರಾಟ ಮಾಡಿ ವಜಾ, ಅಮಾನತು, ವರ್ಗಾವಣೆ ಶಿಕ್ಷೆ ಅನುಭವಿಸುವ ಮೂಲಕ ವೇತನ ಪರಿಷ್ಕರಣೆ ಮಾಡಿಸುತ್ತಾರೆ. ಹೀಗಾಗಿ ನಾವೇಕೆ ಹೋರಾಟಕ್ಕೆ ಇಳಿಯಬೇಕು ಎಂಬ ಅಸಡ್ಡೆ ಭಾವನೆ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ ಇದೆ. ಇದು ಕೆಲ ಸಂಘಟನೆಗಳ ಮುಖಂಡರು ತಮಗಿಷ್ಟ ಬಂದಂತೆ ನಡೆದುಕೊಳ್ಳುವುದಕ್ಕೆ ಎಡೆಮಾಡಿಕೊಡುತ್ತಿದೆ.
ಇನ್ನು ಬಹುತೇಕ ಎಲ್ಲ ನೌಕರರ ಸಂಘಟನೆಗಳು ನೌಕರರ ಮತ್ತು ಅಧಿಕಾರಿಗಳ ಸಮಸ್ಯೆ ಮತ್ತು ಬೇಡಿಕೆಗಳು ಏನು ಎಂದು ಕೇಳದೆ ಏಕಪಕ್ಷೀಯವಾಗಿ ಸರ್ಕಾರ ಅಥವಾ ಆಡಳಿತ ಮಂಡಳಿ ಮುಂದೆ ತಮಗನಿಸಿದ ಬೇಡಿಕೆ ಇಟ್ಟು ಬಳಿಕ ನಾವು ಹೇಳಿದಂತೆ ಸರ್ಕಾರ, ಆಡಳಿತ ಮಂಡಳಿ ನಡೆದುಕೊಂಡಿಲ್ಲ ನಾವೇನು ಮಾಡುವುದು ಎಂಬ ಸಬೂಬು ಹೇಳಿ ಜಾರಿಕೊಳ್ಳುತ್ತಿವೆ. ಜತೆಗೆ ನೌಕರರ ವಿರುದ್ಧವೆ ತಿರುಗಿ ಬೀಳುತ್ತಿವೆ.
ಈ ಎಲ್ಲದರಿಂದ ವರ್ಷಾನುಗಟ್ಟಲೇ ನಿರಂತರವಾಗಿ ಒಬ್ಬರಾದ ಮೇಲೆ ಒಬ್ಬರಂತೆ ಸಾರಿಗೆ ಸಚಿವರು, ನಿಗಮಗಳ ಎಂಡಿಗಳನ್ನು ಭೇಟಿ ಮಾಡಿ 2020ರ ಜನವರಿ 1ರಿಂದ ಜಾರಿಗೆ ಬಂದಿರುವ ಶೆ.15ರಷ್ಟು ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಬಿಡುಗಡೆ ಹಾಗೂ 2024ರ ವೇತನ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸುತ್ತಿದ್ದರು ಈವರೆಗೂ ಉತ್ತಮ ಸ್ಪಂದನೆ ಸಿಕ್ಕೇಯಿಲ್ಲ.
ಹೀಗಾಗಿ ಈ ಬಗ್ಗೆ ಸರ್ಕಾರವೂ ಕೂ ಈವರೆಗೂ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಇನ್ನು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ 1.25 ಲಕ್ಷ ಸಾರಿಗೆ ನೌಕರರ ಬಗ್ಗೆ ಯಾವುದೇ ಚರ್ಚೆಯಾಗಲೇ ಇಲ್ಲ. ಇದರಿಂದ ಸಿಎಂ ಸಿಹಿಸುದ್ದಿ ಕೊಡುತ್ತಾರೆ ಎಂದು ಕುತೂಹಲದಿಂದ ಕಾದಿದ್ದ ನೌಕರರಿಗೆ ನಿರಾಸೆಯಾಯಿತು.
ಇನ್ನಾದರೂ ಈ ಎಲ್ಲವನ್ನು ಗಮನಿಸುತ್ತಿರುವ ನೌಕರರು ಮತ್ತು ಅಧಿಕಾರಿಗಳು ಒಗ್ಗಟ್ಟಾಗಿ ಸಂಘಟನೆಗಳ ಮುಖಂಡರೊಳಗೊಂಡಂತೆ ಸಭೆ ನಡೆಸಿ ವೇತನ ಪರಿಷ್ಕರಣೆ ಮತ್ತು 38 ತಿಂಗಳ ವೇತನ ಹಿಂಬಾಕಿ ಪಡೆಯುವುದಕ್ಕೆ ರೂಪುರೇಷೆ ರೂಪಿಸುವ ಅಗತ್ಯವಿದೆ ಎಂದು ಕೆಲ ಅಧಿಕಾರಿಗಳು, ನೌಕರರು ಮತ್ತು ಕೆಲ ಸಂಘಟನೆಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.