ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು ಕೇಂದ್ರ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೆಂಗೇರಿಯ ಬಿಎಂಟಿಸಿ ಘಟಕ -12ರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗಷ್ಟೆ ಮುಂಬಡ್ತಿ ಮೇರೆಗೆ ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಗೆ ವರ್ಗಾವಣೆಗೊಂಡಿದ್ದ ಮಹೇಶ್ ಎಂಬುವರೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸಿಬ್ಬಂದಿ.
ಮಹೇಶ್ ಅವರು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದು, ಬಳಿಕ ಮನೆಗೆ ಹೋಗದೆ ರೆಕಾರ್ಡ್ ರೂಮ್ನಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇವರ ಆತ್ಮಹತ್ಯೆಗೆ ಏನು ಕಾರಣ ಎಂದು ತಿಳಿದು ಬಂದಿಲ್ಲ.
ಮಹೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಕೊಠಡಿಗೆ ನಿನ್ನೆ ಬೀಗಹಾಕಲಾಗಿತ್ತು. ಮತ್ತು ಇಂದು ಬೆಳಗ್ಗೆ ಬಂದು ರೂಮ್ನ ಬೀಗ ತೆಗೆದಾಗ ವಿಷಯ ಗೊತ್ತಾಗಿದೆ. ಈ ನಡುವೆ ನಿನ್ನೆ ರೂಮ್ಗೆ ಬೀಗ ಹಾಕಿಕೊಂಡು ಹೋದ ಸಿಬ್ಬಂದಿ ಮಹೇಶ್ ಕೊಠಡಿಯಲ್ಲಿ ಇರುವುದರ ಬಗ್ಗೆ ಗಮನಿಸದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನು ಮೃತದೇಹವನ್ನು ಕುಣಿಕೆಯಿಂದ ಕೆಳಗೆ ಇಳಿಸಿಲ್ಲ. ಆತ್ಮಹತ್ಯೆ ಮಾಡಿಕೊಂಡ ಮಹೇಶ್ ಮನೆಯವರು ಬರುವ ತನಕ ಕುಣಿಕೆಯಿಂದ ಇಳಿಸಬಾರದು ಎಂದು ಹೇಳಿರುವುದಾಗಿ ತಿಳಿದು ಬಂದಿದೆ.
ಒಟ್ಟಾರೆ ಸಾರಿಗೆ ನಿಗಮದಲ್ಲಿ ನೌಕರರಿಗೆ ಅಧಿಕಾರಿಗಳ ಕಿರುಕುಳ ಹೆಚ್ಚಾಗಿರುವುದು ತಿಳಿದ ವಿಷಯವಾಗಿದೆ. ಆದರೆ ಮಹೇಶ್ ಆತ್ಮಹತ್ಯೆಗೆ ಏನು ಕಾರಣ ಎಂಬುವುದು ಅವರ ಕುಟುಂಬದವರು ಬಂದ ಮೇಲಷ್ಟೇ ಗೊತ್ತಾಗಲಿದೆ ಎಂದು ಸ್ಥಳದಲ್ಲಿರುವ ನೌಕರರು ಹೇಳುತ್ತಿದ್ದಾರೆ.