- ಮೈಸೂರು ಸಾರಿಗೆ ವಿಭಾಗದಲ್ಲಿ ಟಿಕೆಟ್ ಪಡೆಯದ ಪ್ರಯಾಣಿಕರಿಂದ ಈವರೆಗೂ 124 ಮಂದಿ ನಿರ್ವಾಹಕರು ದಂಡ ತೆತ್ತಿದ್ದಾರೆ
- ಇನ್ನು ಇದೇ ಟಿಕೆಟ್ ಪಡೆಯದ ಪ್ರಕರಣದಲ್ಲಿ 50 ಮಂದಿ ಅಮಾನತು ಕೂಡ ಆಗಿದ್ದಾರೆ
ಮೈಸೂರು: ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ಕೊಟ್ಟಂತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ವೇಳೆ ಐದು ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ (KSRTC) ನಾಲ್ಕೂ ನಿಗಮಗಳಲ್ಲೂ ಜಾರಿಗೆ ತಂದಿದೆ. ಇದರಿಂದ= ನಿಗಮಗಳೇನೋ ಆರ್ಥಿಕವಾಗಿ ಗಟ್ಟಿಗೊಳ್ಳುತ್ತಿವೆ.
ಆದರೆ, ಈ ಯೋಜನೆಯಿಂದ ನಾಲ್ಕೂ ನಿಗಮಗಳ ನಿರ್ವಾಹಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇದು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಮುಖ್ಯ ಸಂಚಾರ ವ್ಯವಸ್ಥಾಪಕರು, ಸಿಬ್ಬಂದಿ ಮತ್ತು ಜಾಗ್ರತಾ ಅಧಿಕಾರಿಗಳು ಸೇರಿ ಡಿಪೋ ವ್ಯವಸ್ಥಾಪಕರಾದಿಯಾಗಿ ಎಲ್ಲರಿಗೂ ತಿಳಿದಿದ್ದರೂ ಸಹ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಬದಲಿಗೆ ಪ್ರಯಾಣಿಕ ಮಹಿಳೆಯರು ಟಿಕೆಟ್ ಪಡೆಯದಿದ್ದರೆ ಅಥವಾ ಟಿಕೆಟ್ ಪಡೆದು ಮಾರ್ಗಮಧ್ಯೆ ಇಳಿದು ಹೋದರೂ ಇಲ್ಲಿ ತಂಡ ಮತ್ತು ಶಿಕ್ಷೆ ಅನುಭವಿಸಬೇಕಿರುವುದು ಮಾತ್ರ ನಿರ್ವಾಹಕರು. ಇದು ಒಂದು ರೀತಿ ಹಿಟ್ಲರ್ ಸಂಸ್ಕೃತಿ ಎಂದು ಹೇಳಿದರೂ ತಪ್ಪಾಗಲಾರದು. ಇಂಥ ಪರಿಸ್ಥಿತಿಯಲ್ಲಿ ನಿರ್ವಾಹಕರು ಕೆಲಸ ಮಾಡುವಂತಾಗಿದೆ.
ಹೌದು! ಸಾಮಾನ್ಯವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರು ಟಿಕೆಟ್ ಪಡೆಯದೆ ಪ್ರಯಾಣಿಸಿದರೆ, ತಪಾಸಣೆ ಮಾಡುವಾಗ ನಿಗಮದ ಅಧಿಕಾರಿಗಳಿಗೆ ಸಿಕ್ಕಿಬಿದ್ದರೆ ನಿರ್ವಾಹಕರು ದಂಡ ಕಟ್ಟಬೇಕು ಅಥವಾ ಆ ಪ್ರಯಾಣಿಕರಿಗೆ ಟಿಕೆಟ್ ನೀಡಲಿಲ್ಲ ಎಂಬ ಆರೋಪದಡಿ ಅಮಾನತು ಶಿಕ್ಷೆಗೂ ಗುರಿಯಾಗುವುದು ಸಾಮಾನ್ಯ ಎಂಬಂತಾಗಿದೆ. ಇದು ಇದೊಂದು ನಿರ್ವಾಹಕರ ಸೇವಾ ದಾಖಲೆಯಲ್ಲಿ ಕಪ್ಪುಚುಕ್ಕೆಯಾಗಿ ಉಳಿಯುತ್ತಿದೆ.
ಶಕ್ತಿ ಯೋಜನೆಯಡಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವಾಗ ಟಿಕೆಟ್ ವಿತರಣೆ ಮಾಡುವುದು ನಿರ್ವಾಹಕರ ಕರ್ತವ್ಯ. ಒಂದು ವೇಳೆ ನಿರ್ವಾಹಕರು ಮರತು ಟಿಕೆಟ್ ನೀಡದೆಯೋ, ಆ ಮಹಿಳಾ ಪ್ರಯಾಣಿಕರು ಟಿಕೆಟ್ ಕೇಳಿ ಪಡೆಯದೆಯೋ ಪ್ರಯಾಣಿಸುವಾಗ ತಪಾಸಣೆ ಅಧಿಕಾರಿಗಳ ತಂಡ ತಪಾಸಣೆ ನಡೆಸುವ ವೇಳೆ ಸಿಕ್ಕಿಬಿದ್ದರೆ, ನಿರ್ವಾಹಕರಿಗೆ ಹೆಚ್ಚು ಕಡಿಮೆ ಅಮಾನತು ಶಿಕ್ಷೆ ನಿಶ್ಚಿತ. ಆದರೆ, ಟಿಕೆಟ್ ಪಡೆಯದ ಮಹಿಳೆಗೆ ದಂಡ ಎಂಬುದೇನು ಇಲ್ಲ. ಇದು ನಿಯಮ ಬಾಹಿರ ನಡೆ. ಇದರಿಂದ ನಿರ್ವಾಹಕರು ಗರಗಸದ ಬಾಯಿಗೆ ಸಿಕ್ಕತ್ತಾಗುತ್ತಿದೆ.
ಇನ್ನು ಮೈಸೂರು ಜಿಲ್ಲೆಯಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಇಂತಹ ಪ್ರಕರಣಗಳಲ್ಲಿ ಈವರೆಗೆ 50 ನಿರ್ವಾಹಕರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ನಿಗಮದ ಈ ನಿಯಮ ನಿರ್ವಾಹಕರಿಗೆ ‘ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪ’ವಾಗಿ ಪರಿಣಮಿಸುತ್ತಿದೆ.
ಆತಂಕದಲ್ಲೇ ಕೆಲಸ ಮಾಡುತ್ತಿರುವ ರ್ವಾಹಕರು : ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ನೂಕು ನುಗ್ಗಲಿನ ನಡುವೆ ನಿರ್ವಾಹಕರು ಟಿಕೆಟ್ ವಿತರಿಸುವುದು ದುಸ್ತರವಾಗಿದೆ. ಇಂತಹದ್ದರಲ್ಲಿ ಕೆಲ ಮಹಿಳೆಯರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಟಿಕೆಟ್ ಪಡೆಯದೆ ಮೂಕರಂತೆ ಕುಳಿತು ಪ್ರಯಾಣಿಸುತ್ತಾರೆ. ಈ ವೇಳೆ ತಪಾಸಣಾ ಅಧಿಕಾರಿಗಳು ಬಂದರೆ ಅದರ ಸಂಪೂರ್ಣ ಹೊಣೆಯನ್ನು ನಿರ್ವಾಹಕರು ಹೊರಬೇಕಾಗಿದೆ ಇದು ಯಾವ ನ್ಯಾಯ?
ಪ್ರಯಾಣ ದರ ಆಧರಿಸಿ ನಿರ್ವಾಹಕರಿಗೆ ಶಿಕ್ಷೆ: ಇನ್ನು KSRTC ಎಕ್ಸ್‌ಪ್ರೆಸ್ ಬಸ್‌ನಲ್ಲಿ 125 ರೂ.ಗೂ ಹೆಚ್ಚಿನ ಟಿಕೆಟ್ ಮೌಲ್ಯ ಹಾಗೂ ಸಾಮಾನ್ಯ ಬಸ್‌ನಲ್ಲಿ 100ರಿಂದ 124 ರೂ. ಟಿಕೆಟ್ ಮೌಲ್ಯ ಇರುವ ಪ್ರಯಾಣ ದರದ ಟಿಕೆಟ್ ಪಡೆಯದ ಅಥವಾ ನೀಡದ ಪ್ರಕರಣವನ್ನು ‘ಅಸಾಧಾರಣ ಕೆಂಪು ಗುರುತಿನ ಪ್ರಕರಣ’ ಎಂದು ಪರಿಗಣಿಸಿ ನಿರ್ವಾಹಕರಿಗೆ ಅಮಾನತು ಶಿಕ್ಷೆ ನೀಡಲಾಗುತ್ತಿದೆ.
ಕೆಲವು ಜಿಲ್ಲೆಗಳ ತಡೆರಹಿತ ಬಸ್‌ನಲ್ಲಿ 56 ರಿಂದ 61 ರೂ. ಮೌಲ್ಯದ ಟಿಕೆಟ್ ಹಾಗೂ ಸಾಮಾನ್ಯ ಬಸ್‌ನಲ್ಲಿ 51ರಿಂದ 57 ರೂ. ಮೌಲ್ಯದ ಟಿಕೆಟ್ ನೀಡದ ಅಥವಾ ಪಡೆಯದ ಪ್ರಕರಣವನ್ನು ಕೆಂಪು ಗುರುತಿನ ಪ್ರಕರಣ’ ಎಂದು ಗುರುತಿಸಿ ಕಂಡಕ್ಟರ್ ಕರ್ತವ್ಯ ನಿರ್ವಹಿಸುವ ಮಾರ್ಗವನ್ನು ಬದಲಾವಣೆ ಮಾಡಿ ಶಿಕ್ಷೆ ನೀಡಲಾಗುತ್ತಿದೆ.
ಟಿಕೆಟ್ ನೀಡದ ಪ್ರಕರಣಗಳಲ್ಲಿ ಶಿಸ್ತುಕ್ರಮ: ಶಕ್ತಿ ಯೋಜನೆಯು ನಿಗಮಕ್ಕೆ ಲಾಭದಾಯಕವಾಗಿದೆ. ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಟಿಕೆಟ್ ಪಡೆಯದ ಸಂದರ್ಭದಲ್ಲಿ ಅಥವಾ ಯಾವುದೋ ಕಾರಣದಿಂದ ನಿರ್ವಾಹಕರು ಟಿಕೆಟ್ ನೀಡದೇ ಇದ್ದಾಗ ತಪಾಸಣೆ ವೇಳೆಯಲ್ಲಿ ಸಿಕ್ಕಿಬಿದ್ದರೆ ಅಂತಹ ನಿರ್ವಾಹಕರ ಮೇಲೆ ಶಿಸ್ತು ಕ್ರಮ ಕೂಡ ಕೈಗೊಂಡಿದ್ದೇವೆ. ಶಕ್ತಿ ಯೋಜನೆ ಪ್ರಯೋಜನ ಪಡೆಯುವ ಮಹಿಳೆಯರು ಟಿಕೆಟ್ ಕೇಳಿ ಪಡೆದರೆ ಯಾರಿಗೂ ಸಮಸ್ಯೆ ಆಗುವುದಿಲ್ಲ ಎಂದು ಮೈಸೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ ಹೇಳಿದ್ದಾರೆ.
ಮಹಿಳೆಯರಿಗೆ ಅನುಕೂಲ: ಇನ್ನು ಈ ಯೋಜನೆ ಜಾರಿಯಿಂದ ತುಂಬಾ ಅನುಕೂಲವಾಗಿದೆ. ಬಸ್ ರಶ್ ಇದ್ದಾಗ ನಾವೇ ಟಿಕೆಟ್ ಕೇಳಿ ಪಡೆದರೆ ಕಂಡಕ್ಟರ್‌ಗಳಿಗೆ ಎದುರಾಗುವ ಸಮಸ್ಯೆ ತಪ್ಪಿಸಬಹುದು. ಅಲ್ಲದೇ ಬಸ್ ಚಾಲಕರೂ ಕೂಡ ಮಾನವೀಯತೆಯಿಂದ ವರ್ತಿಸಬೇಕು. ಏಕೆಂದರೆ ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಶಿವಪುರ ಬಸ್ ನಿಲ್ದಾಣದಲ್ಲಿ ಮಹಿಳೆಯರು ಬಸ್‌ಗೆ ಕಾಯುತ್ತಿದ್ದಾಗ ಕೆಲವು ಚಾಲಕರುಬಸ್ ನಿಲ್ಲಿಸದೇ ಹೋಗುತ್ತಾರೆ. ಇದರಿಂದ ಕಚೇರಿಗಳಿಗೆ ಹೋಗುವ ಮಹಿಳೆಯರು ಹಾಗೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಾರೆ ಎಂದು ಯೋಜನೆ ಫಲಾನುಭವಿ ಭಾಗ್ಯಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಮಹಿಳೆಯರು ಟಿಕೆಟ್ ಕೇಳಿ ಪಡೆದರೆ ಸಮಸ್ಯೆ ಆಗುವುದಿಲ್ಲ. ಬಸ್‌ನಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದಾಗ ಟಿಕೆಟ್ ನೀಡುವಾಗ ಕೆಲವು ಪ್ರಯಾಣಿಕರಿಗೆ ಟಿಕೆಟ್ ನೀಡಿದ್ದೇವೆ ಎಂದು ಭಾವಿಸಿ ಅಥವಾ ಕಣ್ಣಪ್ಪಿನಿಂದ ಮರೆಯುವ ಸಾಧ್ಯತೆ ಇದೆ. ಅಲ್ಲದೇ ಬಸ್‌ಗಳಲ್ಲಿ ಟಿಕೆಟ್ ಕೇಳಿ ಪಡೆಯಿರಿ ಎಂಬ ಸೂಚನಾಫಲಕ ಕೂಡ ಇದೆ. ಹಾಗಾಗಿ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೇಳಿ ಪಡೆದರೆ ನಮಗೆ ಯಾವ ಸಮಸ್ಯೆಯೂ ಆಗುವುದಿಲ್ಲ ಎಂದು ನಿರ್ವಾಹಕ ಮಹೇಶ್ ಹೇಳಿದ್ದಾರೆ.