ಬೆಂಗಳೂರು: ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಮತದಾರರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ರಾಜ್ಯದ ಯಾವುದೇ ಯೋಜನೆಗೆ ಕೇಂದ್ರ ಸರ್ಕಾರ ಒಂದೇ ಒಂದು ಪೈಸೆಯನ್ನು ಕೊಟ್ಟಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ರಾಜ್ಯವನ್ನು ಕಡೆಗಣಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ದಾಸರಿ, ರಾಜ್ಯಕ್ಕೆ ಏನು ಸಿಗುತ್ತದೆ ಎಂದು ಕಾದಿದ್ದ ಮತದಾರನಿಗೆ ನಿರ್ಮಲಾ ಸೀತಾರಾಮನ್ ಅವರು ಚೊಂಬು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಕಳಸಾ ಬಂಡೂರಿ ಯೋಜನೆ, ಮಹದಾಯಿ ಯೋಜನೆ, ಎತ್ತಿನಹೊಳೆ ಯೋಜನೆ, ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆಯಂತಹ ಪ್ರಮುಖ ನೀರಾವರಿ ಯೋಜನೆಗಳಿಗೆ ಒಂದೇ ಒಂದು ಪೈಸೆಯನ್ನು ಕೊಟ್ಟಿಲ್ಲ. ಬೆಂಗಳೂರಿನ ಮೆಟ್ರೋ ಕಾಮಗಾರಿ, ರೈಲ್ವೆ ಯೋಜನೆಗಳಿಗೂ ಏನೂ ಕೊಟ್ಟಿಲ್ಲ, ಸಬ್ ಅರ್ಬನ್ ರೈಲು ಯೋಜನೆಗೆ 350 ಕೋಟಿ ರೂಪಾಯಿಯನ್ನು ಭಿಕ್ಷೆ ಎನ್ನುವ ರೀತಿ ಕೊಟ್ಟಿದ್ದಾರೆ.
ಇನ್ನು ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಎಷ್ಟು ಹಣ ಹರಿದು ಹೋಗಿದೆ. ಅವರಿಗೆ ಅಷ್ಟು ಹಣ ತೆಗೆದುಕೊಳ್ಳುವ ಸಾಮರ್ಥ್ಯ ಇದ್ದರೆ, ರಾಜ್ಯದಿಂದ ಗೆದ್ದಿರುವ 19 ಮಂದಿ ಎನ್‌ಡಿಎ ಸಂಸದರು ನಾಲಾಯಕ್‌ಗಳಾಗಿದ್ದಾರೆ, ಅವರಿಗೆ ಒಂದು ರೂಪಾಯಿ ತರಲು ಆಗಿಲ್ಲ ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್‌ನಲ್ಲಿ ಕೊಟ್ಟಿಲ್ಲದೇ ಇದ್ದರೂ ರಾಜ್ಯಕ್ಕೆ ಹಣ ಬರುತ್ತೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ, ರಾಜ್ಯಕ್ಕೆ ಬೇಕಾಗುವಷ್ಟು ಹಣವನ್ನು ಏನು ನಿಮ್ಮ ಮನೆಯಿಂದ ತಂದುಕೊಡುತ್ತೀರಾ ಎಂದು ಪ್ರಶ್ನಿಸಿದರು.
ಇನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ಅನ್ಯಾಯ ಮಾಡಿದೆ. ಜಿಎಸ್‌ಟಿ, ಆದಾಯ ತೆರಿಗೆ ಕಟ್ಟುವುದರಲ್ಲಿ ರಾಜ್ಯ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಇಷ್ಟೆಲ್ಲ ಹಣ ರಾಜ್ಯದಿಂದ ಕೇಂದ್ರಕ್ಕೆ ಹೋದರೂ, ರಾಜ್ಯಕ್ಕೆ ಅವರು ಏನನ್ನೂ ಕೊಟ್ಟಿಲ್ಲ. ಕೇಂದ್ರ ಮಾಡಿರುವ ಮೋಸವನ್ನು ಜನರಿಗೆ ತಿಳಿಸುತ್ತೇವೆ ಎಂದು ಮೋಹನ್ ದಾಸರಿ ಹೇಳಿದರು.
ಆಮ್ ಆದ್ಮಿ ಪಾರ್ಟಿ ಬೆಂಗಳೂರು ಘಟಕದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ರಾಜ್ಯಕ್ಕೆ ನೆರೆ ಬಂದಾಗ ನಾವು ಬೇಡಿಕೊಂಡರು ಹಣ ಬಿಡುಗಡೆ ಮಾಡಲಿಲ್ಲ, ಈಗ ಬೇರೆ ರಾಜ್ಯಗಳಿಗೆ ವಿಪತ್ತು ನಿಧಿ ಎಂದು 11,000 ಕೋಟಿ ಬಿಡುಗಡೆ ಮಾಡಿದ್ದಾರೆ ಇದು ಖುರ್ಚಿ ಉಳಿಸಿಕೊಳ್ಳುವ ಬಜೆಟ್. ಯಾವ ರಾಜ್ಯದ ಮತದಾರರು ಬಿಜೆಪಿಯನ್ನು ತಿರಸ್ಕಾರ ಮಾಡಿದ್ದಾರೋ ಅವರಿಗೆ ಹೆಚ್ಚಿನ ಲಾಭವಾಗಿದೆ, ಕನ್ನಡಿಗರು ಇನ್ನಾದರೂ ಈ ಬಗ್ಗೆ ಎಚ್ಚೆತ್ತು ಪಾಠ ಕಲಿಸಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿಗಳಾದ ಅಶೋಕ್ ಮೃತ್ಯುಂಜಯ ,ಶಶಿಧರ್ ಆರಾಧ್ಯ, ಜಗದೀಶ್ ಬಾಬು, ವಿಶ್ವನಾಥ್, ಅನಿಲ್ ನಾಚಪ್ಪ, ಪುಷ್ಪ ಕೇಶವ್, ಜೋಶ್ವ, ಇರ್ಷಾದ್ ಖಾನ್, ಮೌನೇಶ್, ಸರವಣ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.