- 6-7 ತಿಂಗಳಿಂದ ನೌಕರರ ಎಲ್‌ಐಸಿ ಪಾಲಿಸಿಗೆ ಹಣ ಕಟ್ಟದ ಸಾರಿಗೆ ಸಂಸ್ಥೆಗಳು: ಪಾಲಿಸಿಗಳು ಲ್ಯಾಪ್ಸ್ ಆತಂಕದಲ್ಲಿ ನೌಕರರು!!
ಬೆಂಗಳೂರು: ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ನೌಕರರ ಜೀವ ವಿಮಾ ಪಾಲಿಸಿಗೆ (ಎಲ್‌ಐಸಿ) ಕಳೆದ 2024ರ ಜನವರಿಯಿಂದ ಹಣ ತುಂಬದೆ ಹಲವು ನೌಕರರ ಪಾಲಿಸಿಗಳು ಲ್ಯಾಪ್ಸ್ ಆಗಿವೆ. ಇನ್ನು ಕೆಲವು ಪಾಲಿಸಿಗಳು ಲ್ಯಾಪ್ಸ್ ಆಗುವ ಹಂತದಲ್ಲಿವೆ. ಹೀಗಾಗಿ ನೌಕರರ ವೇತನದಲ್ಲಿ ಹಣ ಕಟ್ ಮಾಡಿ ಎಲ್‌ಐಸಿ ಪಾಲಿಸಿಗೆ ಪಾವತಿಸದ ಬಗ್ಗೆ ನೌಕರರು ದೂರು ಕೊಟ್ಟರೆ ಪಾವತಿಸದ ಅಧಿಕಾರಿಗಳನ್ನು ಅಮಾನತು ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಎಲ್‌ಐಸಿ ಮಾಡಿಸಿರುವ ನೌಕರರ ವೇತನದಲ್ಲಿ ಹಣ ಕಟ್ ಮಾಡಿಕೊಂಡಿರುವ ಸಾರಿಗೆ ನಿಗಮಗಳು 6-7 ತಿಂಗಳಿನಿಂದ ಎಲ್‌ಐಸಿ ಪಾಲಿಸಿಗೆ ಹಣ ತುಂಬದೆ ಬಾಕಿ ಉಳಿಸಿಕೊಂಡಿವೆ. ಆದರೆ ನೌಕರರ ವೇತನದಲ್ಲಿ ಪ್ರತಿ ತಿಂಗಳು ಕಟ್ ಮಾಡಿಕೊಂಡಿವೆ. ಇದರಿಂದ ನೌಕರರ ಎಲ್‌ಐಸಿ ಪಾಲಿಸಿಗಳು ಲ್ಯಾಪ್ಸ್ ಆಗುತ್ತಿದೆ. ಮತ್ತೊಂದೆಡೆ ಮೆಚುರ್ ಆಗಿರುವ ಪಾಲಿಸಿಯ ಹಣ ಪಡೆಯುವಾಗ 4-5 ತಿಂಗಳಿಂದ ಹಣ ಬಂದಿಲ್ಲ.
ಹೀಗಾಗಿ ನಾವು ಆ 4-5 ತಿಂಗಳ ಹಣ ಕೊಡಲು ಸಾಧ್ಯವಿಲ್ಲ. ಮೆಚುರ್ ಆಗಿರುವ ದಿನಾಂಕದವರೆಗೆ ಎಷ್ಟು ಹಣ ಬಂದಿದಿಯೋ ಅದನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದು ಉಳಿದ ಹಣ ಕಟ್ಟದಿರುವ ಬಗ್ಗೆ ನಿಮ್ಮ ಅಧಿಕಾರಿಗಳನ್ನೇ ಕೇಳಬೇಕು ಎಂದು ಎಲ್‌ಐಸಿ ಕಚೇರಿಯ ಅಧಿಕಾರಿಗಳು ಹೇಳಿ ಕಳುಹಿಸುತ್ತಿದ್ದಾರೆ.
ಇದರಿಂದ ಬಹುತೇಕ ಎಲ್‌ಐಸಿ ಪಾಲಿಸಿ ಮಾಡಿಸಿಕೊಂಡಿರುವ ನೌಕರರ ವೇತನದಲ್ಲಿ ಕಟ್ ಮಾಡಿಕೊಂಡಿರುವ ಹಣವನ್ನು ಸಮಯಕ್ಕೆ ಸರಿಯಾಗಿ ಸಾರಿಗೆ ನಿಗಮಗಳ ಕಳ್ಳ ಅಧಿಕಾರಿಗಳು ಪಾವತಿಸದಿರುವುದರಿಂದ ನೌಕರರಿಗೆ ಕೋಟ್ಯಂತರ ರೂಪಾಯಿ ಲಾಸ್ ಆಗುತ್ತಿದೆ. ಇದು ಗೊತ್ತಿದ್ದರೂ ಕೂಡ ಕೆಲ ಕಳ್ಳ ಅಧಿಕಾರಿಗಳು ಪಾಲಿಸಿಗೆ ತುಂಬ ಬೇಕಿರುವ ಹಣವನ್ನು 6-7 ತಿಂಗಳ ಕಾಲ ಬೇರೆಡೆ ಹೂಡಿ ತಾವು ಜೇಬು ತುಂಬಿಸಿಕೊಳ್ಳುವ ಮೂಲಕ ನೌಕರರಿಗೆ ಮೊಸ ಮಾಡುತ್ತಿದ್ದಾರೆ.
ಅಲ್ಲದೆ ಈ ಬಗ್ಗೆ ಘಟಕಗಳಲ್ಲಿ ಕೇಳಿದರೆ ಮೇಲಧಿಕಾರಿಗಳು ಹೇಳಿದಂತೆ ಮಾಡುತ್ತಿದ್ದೇವೆ ಅವರು ಹಣ ಪಾವತಿಸುವ ಬಗ್ಗೆ ನಮಗೆ ಹೇಳಿಲ್ಲ. ಹೀಗಾಗಿ ನೀವು ಬೇಕಿದ್ದರೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ಹೋಗಿ ಕೇಳಬಹುದು ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ. ಇದರಿಂದ ಭವಿಷ್ಯದ ಕನಸು ಕಂಡು ಎಲ್‌ಐಸಿ ಪಾಲಿಸಿ ಮಾಡಿಸಿಕೊಂಡ ನೌಕರರಿಗೆ ತಲಾ ಒಬ್ಬೊಬ್ಬರಿಗೂ ಸಾವಿರಾರು ರೂಪಾಯಿಗಳ ನಷ್ಟವಾಗುತ್ತಿದೆ. ಇದನ್ನು ಕೇಳುವವರು ಯಾರು? ಎಂಬ ತಲೆ ಬಿಸಿಯಲ್ಲಿ ನೌಕರರಿದ್ದಾರೆ.
ಇದಕ್ಕೆ ಪರಿಹಾರ ಎಂಬುಂತೆ ಸಾರಿಗೆ ಸಚಿವರು ಹೇಳಿಕೆ ನೀಡಿದ್ದು, ಎಲ್‌ಐಸಿ ಪಾಲಿಸಿಗಾಗಿ ವೇತನದಲ್ಲಿ ಕಟ್ ಮಾಡಸಿದರೂ ಅದನ್ನು ಎಲ್‌ಐಸಿಗೆ ಪಾವತಿಸದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕ್ಕೆ ಒತ್ತಾಯಿಸಿದರೆ ಎಲ್‌ಐಸಿಗೆ ಪಾವತಿ ಮಾಡಬೇಕಾದ ಅಧಿಕಾರಿಯ ವಿರುದ್ಧ ನಾವು ಸೂಕ್ತ ಕ್ರಮ ತೆಗೆದುಕೊಂಡು ಅವರನ್ನು ಅಮಾನತು ಮಾಡುತ್ತೇವೆ. ಹೀಗಾಗಿ ಈ ರೀತಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ನೌಕರರು ದೂರು ಕೊಡಬೇಕು. ಇಲ್ಲದಿದ್ದರೆ ನಮಗೇನು ಗೊತ್ತಾಗುತ್ತದೆ ಅಲ್ವ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿಜಯಪಥಕ್ಕೆ ತಿಳಿಸಿದ್ದಾರೆ.
ಹೀಗಾಗಿ ಸರಿಯಾದ ಸಮಯಕ್ಕೆ ಎಲ್‌ಐಸಿ ಪಾಲಿಸಿಗೆ ವೇತನದಲ್ಲಿ ಕಟ್ ಮಾಡಿಕೊಂಡಿರುವ ಹಣವನ್ನು ಪಾವತಿಸದ ಅಧಿಕಾರಿಗಳ ವಿರುದ್ಧ ಯಾವುದೇ ದಾಕ್ಷಿಣ್ಯ ತೋರದೆ ನೌಕರರು ದೂರು ದಾಖಲೀಸಬೇಕಾಗಿದೆ. ಈ ಮೂಲಕ ಸರಿಯಾದ ಸಮಯಕ್ಕೆ ಪಾಲಿಸಿಗೆ ಹಣ ತುಂಬುವುದರಿಂದ ಪಾಲಿಸಿ ಮೆಚುರ್ ಆದ ವೇಳೆ ಹೆಚ್ಚು ಹಣ ಸಿಗುವ ಜತೆಗೆ ಅಪಘಾತ ಇತರ ಸಮಸ್ಯೆಗಳಾದಾಗಲು ಪಾಲಿಸಿ ಯಾವುದೇ ತೊಂದರೆ ಇಲ್ಲದೆ ಕೈ ಸೇರಲಿದೆ.