ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ಒಟಿಎಸ್ ವ್ಯವಸ್ಥೆಯಲ್ಲಿ ನೀಡಲಾಗಿದ್ದ ಸಮಯವನ್ನು ಮತ್ತೆ 15 ದಿವಸಗಳ ಕಾಲ ವಿಸ್ತರಣೆ ಮಾಡುವಂತೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಬಿಬಿಎಂಪಿ ವ್ಯಾಪ್ತಿಯಲ್ಲಿನ 2.87 ಲಕ್ಷ ಆಸ್ತಿಗಳಿಂದ 831 ಕೋಟಿ ತೆರಿಗೆ ಬಾಕಿ ಇದೆ . ಬೆಂಗಳೂರಿನ ನಾಗರಿಕರು ಆಸ್ತಿ ತೆರಿಗೆಯನ್ನು ಕಟ್ಟಲು ವಲಯಗಳನ್ನು ಘೋಷಿಸುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಇದೆ.
ಬಿಬಿಎಂಪಿ ಪುನರ್ ನಿಗದಿ ಮಾಡಿರುವ ಬೇಡಿಕೆ ಪತ್ರದಲ್ಲಿಯೂ ಸಾಕಷ್ಟು ಗೊಂದಲಗಳಿರುವ ಕಾರಣದಿಂದ ಆಸ್ತಿ ತೆರಿಗೆ ಕಟ್ಟಲು ನಾಗರಿಕರುಗಳಿಗೆ ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ ಮತ್ತೆ 15 ದಿವಸಗಳ ಕಾಲ ಓ ಟಿ ಎಸ್ ಯೋಜನೆಯನ್ನು ವಿಸ್ತರಣೆ ಮಾಡಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರುಗಳ ಜೊತೆ ಕಂದಾಯಾಧಿಕಾರಿಗಳು ಖುದ್ದಾಗಿ ಚರ್ಚಿಸಬೇಕು ಹಾಗೂ ಗೊಂದಲಗಳನ್ನು ಪರಿಹಾರ ಮಾಡಬೇಕು. ಬೆಂಗಳೂರಿನ ನಾಗರಿಕರು ತಮ್ಮ ಜೀವಿತಾವಧಿಯಲ್ಲಿ ಕಷ್ಟಪಟ್ಟು ಉಳಿಸಿದ ಹಣದಿಂದ ಕಟ್ಟಿರುವ ಆಸ್ತಿಗಳನ್ನು ಯಾವುದೇ ಕಾರಣಕ್ಕೂ ಅಟ್ಯಾಚ್ (ಋಣ ಭಾರ) ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.