ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ವರ್ಷಕ್ಕೊಮ್ಮೆ ಕೊಡುವ ಸಮವಸ್ತ್ರಕ್ಕೆ 3-4 ದಶದ ಹಳೆ ನಿಯಮದಂತೆ ಒಂದು ಜತೆ ಸಮವಸ್ತ್ರಕ್ಕೆ ಕೇವಲ 742, 750, 731 ಹಾಗೂ ಮಹಿಳಾ ಸಿಬ್ಬಂದಿಗೆ 2 ಸೀರೆ ಮತ್ತು ಎರಡು ರವಿಕೆಗೆ ಕೇವಲ 1707 ರೂಪಾಯಿ ಹಾಗೂ ಕೂಲಿ 100 ರೂಪಾಯಿ ಕೊಡುತ್ತಿದ್ದಾರೆ.
ಸಾರಿಗೆ ನಿಗಮಗಳಲ್ಲಿ ಮಾನಗೆಟ್ಟ ಅಧಿಕಾರಿಗಳು ಇದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಯಾವುದು ನಿದರ್ಶನ ಬೇಕಿಲ್ಲ ಎನಿಸುತ್ತದೆ. ನೋಡಿ ಒಂದು ಶರ್ಟ್ ಹೊಲಿಸಲಿಕ್ಕೆ 350ರಿಂದ 500 ರೂಪಾಯಿ ಆಗುತ್ತದೆ. ಇನ್ನು ಒಂದು ಪ್ಯಾಂಟ್ ಹೊಲಿಸಲಿಕ್ಕೆ 600 ರೂ.ಗಳಿಂದ 2000 ರೂ.ಗಳವರೆಗೂ ಆಗುತ್ತದೆ. ಸಮವಸ್ತ್ರ ಹೊಲಿಸುವುದಕ್ಕೇ ಕನಿಷ್ಠವೆಂದರೂ ಸುಮಾರು 1050 ರೂಪಾಯಿ ಆಗುತ್ತದೆ.
ಅಂದಮೇಲೆ ಇವರು ಬಟ್ಟೆಗೂ ಸೇರಿ ಕೋಡುವ 742 + 350 ರೂ.ಗಳು ಯಾವುದಕ್ಕೆ ಸಾಲುತ್ತದೆ. ಈ ಬಗ್ಗೆ ಸಂಬಂಧಟ್ಟ ಅಧಿಕಾರಿಗಳು ಕಾಲ ಕಾಲಕ್ಕೆ ಆರ್ಥಿಕ ಪರಿಸ್ಥಿತಿ ಬದಲಾದಂತೆ ನೌಕರರಿಗೆ ಕೊಡುವ ಅದೂ ಕೂಡ ವರ್ಷಕ್ಕೆ ಒಂದುಬಾರಿ ಕೊಡುವ ಸಮವಸ್ತ್ರಕ್ಕೆ 30-40 ವರ್ಷದ ಹಳೆ ಪದ್ಧತಿಯಂತೆಯೇ ಕೊಡಿಸುತ್ತಿದ್ದಾರೆ ಎಂದರೆ ಇವರು ಎಂಥ ನಸುಗುನ್ನಿಕಾಯಿ ಮಂದಿ ಎಂದು ಹೇಳದೆ ಬೇರೆ ವಿಧಿಯಿಲ್ಲ.
ಮೊನ್ನೆ ಅಂದರೆ 31-07-2024ರಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಸಮವಸ್ತ್ರಕ್ಕೆ ಬಟ್ಟೆ ಖರೀದಿ ಹಾಗೂ ಹೊಲಿಗೆಗೆ ಅದೂಕೂಡ ಎರಡು ಜತೆ ಸಮವಸ್ತ್ರಕ್ಕೆ ಒಟ್ಟಾರೆ ಸುಮಾರು 1100 ರೂ.ಗಳನ್ನು ನಿಗದಿ ಮಾಡಿ ಬಟ್ಟೆ ಬದಲಿಗೆ ಹಣವನ್ನು ಪಾವತಿಸಲು ಸಿಬ್ಬಂದಿ ಮತ್ತು ಜಾಗೃತ ದಳದ ನಿರ್ದೇಶಕರು ಆದೇಶ ಮಾಡಿದ್ದಾರೆ. ಅವರು ಆದೇಶ ಮಾಡಿರುವುದು ಸರಿ. ಆದರೆ, ಈ 1100 ರೂ.ಗಳಿಂದ ಬಟ್ಟೆ ತೆಗೆದುಕೊಳ್ಳುವುದೋ ಅಥವಾ ಹೊಲಿಸಿಕೊಳ್ಳುವುದೋ ಗೊತ್ತಾಗುತ್ತಿಲ್ಲ. ಇನ್ನು ಇವರು ಕೊಡುವ ಹಣಕ್ಕೆ ಒಂದು ಜತೆ ಸಮವಸ್ತ್ರದ ಬಟ್ಟೆಯೂ ಬರುವುದಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ತೀರ ಕಳಪೆ ಗುಣಮಟ್ಟದ ಬಟ್ಟೆ ಖರೀದಿಸಿ ಅದರಲ್ಲಿ ಒಂದ್ ಜತೆ ಪ್ಯಾಂಟು-ಶರ್ಟ್ ಹೊಲಿಸಲು ಹೋದರೂ ಕೂಡ ಕನಿಷ್ಠವೇದರೂ 2300 ರೂ.ಗಳಿಂದ 2500 ರೂ.ಗಳಾದರೂ ಬೇಕೇಬೇಕು. ಹಾಗೆಯೆ ಮಹಿಳಾ ಸಿಬ್ಬಂದಿಯ ಒಂದು ರವಿಕೆ ಹೊಲಿಯಲಿಕ್ಕೆ 350 ರಿಂದ 450 ಬೇಕೆಬೇಕು. ಇನ್ನು 2 ಸಾವಿರಕ್ಕಿಂತ ಕಡಿಮೆ ಸೀರೆ ಬರೋದಿಲ್ಲ ಒಂದು ವೇಳೆ ಕಡಿಮೆ ಬೆಲೆಗೆ ಸಿಗುವ ಸೀರೆ ಸಿಗುತ್ತದ ಎಂದಾದರೆ ಅದು ಒಂದು ವಾರಕೂಡ ಹಾಕಲಿಕ್ಕೆ ಯೋಗ್ಯವಾಗಿರುವುದಿಲ್ಲ.
ಹೌದು! ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕರು 2024-25ನೇ ಸಾಲಿಗೆ ಅನ್ವಯವಾಗುವಂತೆ ಸಾರಿಗೆ ನಿಗಮದ ಸಿಬ್ಬಂದಿಯ ಸಮವಸ್ತ್ರ ವಿಚಾರದಲ್ಲಿ ಬಟ್ಟೆ ಬದಲು ನಗದನ್ನೇ ಕೊಡುವ ಬಗ್ಗೆ ಆದೇಶ ಹೊರಡಿಸಿದ್ದಾರೆ. ಈ ಆದೇಶದಲ್ಲಿರುವ ದರ ನೋಡಿದರೆ ಒಂದು ರೀತಿ ನಗುವಿನ ಜತೆಗೆ ಅಸಮಾಧಾನ, ಕೋಪ ಕೂಡ ಬರುತ್ತದೆ.
ನೋಡಿ ನಾವು ಕೊಡುವುದು ಇಷ್ಟೆ ಹೆಚ್ಚಾಗಿ ಆಗುತ್ತದೆ ಎಂದರೆ ನೀವು ನಿಮ್ಮ ಕೈಯಿಂದ ಹಾಕಿ ತೆಗೆದುಕೊಂಡು ಹೊಲಿಸಿಕೊಳ್ಳಿ ಎಂದು ಹೇಳಿದಂತೆ ಇದೆ. ಇದನ್ನು ಗಮನಿಸಿದರೆ ಸಾರಿಗೆ ನೌಕರರು ಇನ್ನು ಮುಂದೆ ಸಮವಸ್ತ್ರ ಹಾಕುವ ಬದಲಿಗೆ ಆ ಹಣವನ್ನು ಪಡೆಯದೆ ತಮ್ಮ ಬಳಿ ಇರುವ ನಿತ್ಯ ಬಳಕೆಯ ಉಡುಪುಗಳನ್ನೇ ಹಾಕಿಕೊಂಡು ಡ್ಯೂಟಿಗೆ ಬರುವುದು ಒಳ್ಳೆಯದು ಎಂದು ಪ್ರತಿಯೊಬ್ಬ ನೌಕರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಸಿಬ್ಬಂದಿ ಮತ್ತು ಜಾಗೃತ ದಳದ ನಿರ್ದೇಶಕರು ಹೊರಡಿಸಿರುವ ಆದೇಶದ ಸುತ್ತೋಲೆಯಲ್ಲಿ ಖಾಕಿ ಸೂಟಿಂಗ್ಸ್, ನೀಲಿ ಸೂಟಿಂಗ್ಸ್, ಬಿಳಿ ಸೂಟಿಂಗ್ಸ್ ನ 2 ಪ್ಯಾಂಟು 2 ಶರ್ಟ್ ಒಟ್ಟು 5.6 ಮೀಟರಿನಂತೆ ಚಾಲಕ ಮತ್ತು ನಿರ್ವಾಹಕರು ಹಾಗೂ ಮೆಕ್ಯಾನಿಕ್ (ತಾಂತ್ರಿಕ ಸಿಬ್ಬಂದಿ) ಗಳಿಗೆ ಕ್ರಮವಾಗಿ ₹742, ₹750 ಹಾಗೂ ₹731 ರೂ ಫಿಕ್ಸ್ ಮಾಡಲಾಗಿದೆ. ಹೊಲಿಸಲು ₹350 ಕೊಡುವಂತೆ ಆದೇಶ ಮಾಡಿದ್ದಾರೆ.
ಇತ್ತ ಮಹಿಳಾ ಸಿಬ್ಬಂದಿಗೆ ಖಾಕಿ ಸೀರೆ ಮತ್ತು ರವಿಕೆಗೆ (6.20 ರಿಂದ 6.30 ಮೀ) 2 ಸೀರೆ,2 ರವಿಕೆಗೆ ಬಟ್ಟೆ ಕೊಳ್ಳಲು 1707 ರೂ. ಹಾಗೂ ಹೊಲಿಸಲು 100 ರೂ. ಫಿಕ್ಸ್ ಮಾಡಲಾಗಿದೆ. ಹಾಗೆಯೇ ನೀಲಿ ಸೀರೆ, ನೀಲಿ ರವಿಕೆಗೆ (6.20 ರಿಂದ 6.30 ಮೀ) 2 ಸೀರೆ, 2 ರವಿಕೆಗೆ ಬಟ್ಟೆ ಕೊಳ್ಳಲು 1707 ರೂ. ಹಾಗೂ ಹೊಲಿಸಲು 100 ರೂ.ಗಳನ್ನು ಕೊಡುವಂತೆ ಆದೇಶ ಮಾಡಿದ್ದಾರೆ.
ವಾಸ್ತವಾಗಿ ಮಾರುಕಟ್ಟೆಯಲ್ಲಿರುವ ದರಕ್ಕೂ ಸುತ್ತೋಲೆಯಲ್ಲಿರುವ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇವರು ಕೊಡುವ ಹಣದಲ್ಲಿ ಬಟ್ಟೆ ಖರೀದಿಸಲು ಸಹ ಸಾಧ್ಯವಿಲ್ಲ. ಇನ್ನು ಈ ದರ ಫಿಕ್ಸ್ ಮಾಡಿರುವುದನ್ನು ನೋಡುವುದಾದರೆ ಹಳೆಕಾಲದ ಅಜ್ಜಬಂದು ಫಿಕ್ಸ್ ಮಾಡಿದ್ದಾನೆ ಎನಿಸುವಂತಿದೆ. ಇದು ಸಾರಿಗೆ ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಈ ರೀತಿ ಅವೈಜ್ಞಾನಿಕವಾಗಿರುವ ಆದೇಶ ಮಾಡುವುದಕ್ಕೂ ಮುನ್ನ ಸಿಬ್ಬಂದಿ ಮತ್ತು ಜಾಗೃತ ದಳದ ನಿರ್ದೇಶಕರು ಕೂಡ ಒಮ್ಮೆ ಯೋಚಿಸಬೇಕಿತ್ತು. ಆದರೆ ಆ ಮೈಂಡ್‌ಗೆ ಕೆಲಸ ಮಾಡಲು ಬಿಡದೆ ಅತುರಾತುರವಾಗಿ ಆದೇಶ ಮಾಡಿಬಿಟ್ಟಿದ್ದಾರೆ.
ಈಗಲಾದರೂ ಈ ಆದೇಶವನ್ನು ವಾಪಸ್ ಪಡೆದು ಅಲ್ಲದೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಲಕಾಲಕ್ಕೆ ಅಪ್‌ಡೇಟ್ ಆಗಿ ನೌಕರರು ಒಳ್ಳೆ ಸಮವಸ್ತ್ರ ಕೊಳ್ಳುವುದಕ್ಕೆ ಅನುಕೂಲವಾಗುಂತಹ ನಿರ್ಧಾರವನ್ನು ತೆಗೆದುಕೊಂಡು ಅದನ್ನು ಒತ್ತಾಯ ಪೂರ್ವಕವಾಗಿಯೇ ಆಡಳಿತ ಮಂಡಳಿ ಮತ್ತು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬಂದ ಬಳಿಕ ಆದೇಶ ಮಾಡುವ ಮೂಲಕ ಸಂಸ್ಥೆಗೆಯ ಘನತೆ ಗೌರವಕ್ಕೆ ಧಕ್ಕೆ ಆಗುವುದನ್ನು ತಪ್ಪಿಸಿ ಎಂದು ನೌಕರರು ಒತ್ತಾಯಿಸಿದ್ದಾರೆ.