ಬೆಂಗಳೂರು: 01.01.2020 ರಿಂದ ಜಾರಿಯಾಗಬೇಕಿದ್ದ ವೇತನ ಪರಿಷ್ಕರಣೆ 01.03.2023ರಂದು ಶೇ.15ರಷ್ಟು ಜಾರಿಯಾಗಿದೆ. ಆದರೆ 38 ತಿಂಗಳುಗಳ ಹಿಂಬಾಕಿಗೋಸ್ಕರ ಈಗಾಗಲೇ ಅನೇಕ ಮನವಿಯನ್ನು ಸಲ್ಲಿಸಿದ್ದು, ಈವರೆಗೂ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಹೀಗಾಗಿ ನೌಕರರಿಗೆ ಈ ಕೂಡಲೇ ಕೊಡಿಸಿಕೊಡಬೇಕೆಂದು ಕರ್ನಾಟಕ ಭಾರತೀಯ ಮದ್ದೂರ್ ಸಂಘಕ್ಕೆ ಸಂಯೋಜಿತ ಕರ್ನಾಟಕ ರಸ್ತೆ ಸಾರಿಗೆ ಮದ್ದೂರ್ ಸಂಘ ಒಕ್ಕೂಟ ಆಗ್ರಹಿಸಿದೆ.
ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಗುರುವಾರ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸಿದ್ದು, ಕೂಡಲೇ ನಾಲ್ಕೂ ನಿಗಮಗಳ ಅಧಿಕಾರಿಗಳು/ ನೌಕರರಿಗೆ ಬರಬೇಕಿರುವ 38 ತಿಂಗಳ ವೇತನ ಹಿಂಬಾಕಿಯನ್ನು ಕೊಡಬೇಕು ಎಂದು ಒಕ್ಕೂದ ಪದಾಧಿಕಾರಿಗಳು ಒತ್ತಾಯಿಸಿದರು.
ಇನ್ನು ಸಚಿವರಾದ ತಾವು ಕರ್ನಾಟಕ ಸರ್ಕಾರದಲ್ಲಿ 2ನೇ ಬಾರಿಗೆ ಸಾರಿಗೆ ಸಚಿವರಾಗಿರುವುದಕ್ಕೆ ಸಂಘದ ಒಕ್ಕೂಟಕ್ಕೂ ಸಂತಸವಾಗಿದೆ. ಜತೆಗೆ ಸಾರಿಗೆ ಇಲಾಖೆಗೆ ಮತ್ತು ಸಾರಿಗೆ ಸಂಸ್ಥೆಗೆ ತಮ್ಮ ಅನುಭವದಿಂದ ನೌಕರರಿಗೆ ಮತ್ತು ಇಲಾಖೆಗೆ ಉತ್ತಮ ವಾತಾವರಣವನ್ನು ಸೃಷ್ಟಿಸಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ತರಲು ಹಾಗೂ ನೌಕರರಿಗೆ ಸೌಲಭ್ಯಗಳನ್ನು ನೀಡಲು ತಾವು ಬದ್ಧರಾಗಿರುತ್ತೀರಿ ಎಂದು ಸಂಘವು ನಿರೀಕ್ಷಿಸುತ್ತಿದೆ.
ಈ ನಮ್ಮ ಆಶಾದಾಯಕ ಭಾವನೆಗೆ ನೀವು ಸ್ಪಂದಿಸುತ್ತೀರಿ ಎಂದು ಭಾವಿಸಿದ್ದು, ತಾವು ಸಾರಿಗೆ ನೌಕರರಿಗೆ ಅತಿ ಮುಖ್ಯವಾಗಿ ಬರಬೇಕಾದ ಸವಲತ್ತುಗಳನ್ನು ಕೊಡಲು ಹಿಂದೆಮುಂದೆ ನೋಡಬಾರದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ಮಹದೇವಯ್ಯ ಸಂಘದ ಪರವಾಗಿ ಒತ್ತಾಯಿಸಿದ್ದಾರೆ.
ಇನ್ನು ಈ ಮೊದಲೇ ಹೇಳಿರುವಂತೆ 38 ತಿಂಗಳ ವೇತನ ಹಿಂಬಾಕಿ ಹಾಗೂ 01.01.2024ರ ವೇತನ ಪರಿಷ್ಕರಣೆ ಆಗಬೇಕಿದ್ದು, ತಿಂಗಳಾದರೂ ಈವರೆಗೂ ಮಾಡಿಲ್ಲ. ಹೀಗಾಗಿ ಕೂಡಲೇ ವೇತನ ಪರಿಷ್ಕರಣೆ ಜಾರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೆ ಈ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ಕೂಡಲೇ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ಎಂಡಿ ಕೂಡ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಮುಖ್ಯವಾದ ಎರಡೂ ಬೇಡಿಕೆಗಳನ್ನು ತತ್‌ಕ್ಷಣ ಈಡೇರಿಸಿ ನೌಕರರ ನಂಬಿಕೆಗೆ ಪಾತ್ರರಾಗುತ್ತೀರಿ ಎಂದು ಸಂಘವು ನಿರೀಕ್ಷಿಸುತ್ತಿದೆ. 01.01.2020ರ ವೇತನ ಪರಿಷ್ಕರಣೆ ಬರಬೇಕಾದ ಬಾಕಿ ಹಣವನ್ನು ಇಲ್ಲಿಗೆ 55 ತಿಂಗಳಾದರೂ 38 ತಿಂಗಳು ಬಾಕಿ ಹಣ ನೀಡಿಲ್ಲ.
ಆದರೆ, ಸಾರ್ವಜನಿಕರಿಗೆ ಹಾಗೂ ಮಾಧ್ಯಮದಲ್ಲಿ ಸಾರಿಗೆ ಸಂಸ್ಥೆ ಲಾಭದಲ್ಲಿದೆ ಎಂದು ಹೇಳುತ್ತಿದ್ದೀರಿ. ಸಂಸ್ಥೆ ಲಾಭದಲ್ಲಿ ಇದೆ ಎಂದು ನೀವೇ ಹೇಳುತ್ತಿರುವುದರಿಂದ ಈ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು, ಇಲ್ಲದಿದ್ದರೆ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಜತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.