ಮೈಸೂರು: ಮಳೆಯಿಂದ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂಜನಗೂಡು ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶವಾದ ಬೊಕ್ಕಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಪ್ರವಾಹದಿಂದ ಹಾನಿ ಆಗಿರುವ ಬೆಳೆ ನಾಶ ಹಾಗೂ ಮನೆಗಳಿಗೆ ನೀರು ನುಗ್ಗಿ ಹಾನಿ ಆಗಿರುವ ಕುರಿತು ಪರಿಶೀಲನೆ ನಡೆಸಿದರು.
ನಂತರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮವನ್ನು ವಿಚಾರಿಸಿದರು. ಶಾಲೆಯ ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಪ್ರವಾಹ ಉಂಟಾಗಿ ರೈತರ ಬೆಳೆ ಹಾಗೂ ಮನೆ ಹಾನಿ ಉಂಟಾಗಿದೆ. ಮೈಸೂರು ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಕಡಿಮೆ ಪ್ರಮಾಣದ ಹಾನಿ ಆಗಿದೆ. ಎನ್ ಡಿ ಆರ್ ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು. 46 ಮನೆಗಳಿಗೆ ನೀರು ಬಂದಿದೆ.
ಕಾಳಜಿ ಕೇಂದ್ರದಲ್ಲಿ 446 ಜನ ಸೌಲಭ್ಯ ಪಡೆಯುತ್ತಿದ್ದಾರೆ. 80 ಕುಟುಂಬಗಳು ಪ್ರವಾಹದಿಂದ ಪೀಡಿತರಾಗಿದ್ದಾರೆ. ಈ 80 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದರು.