ಮದ್ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ, ನೋಡೋಣ ಮುಟ್ಟಿ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ.
ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿ, ಜಯೇಂದ್ರ, ಅಶೋಕ್ ಅವರೇ ಸುಮ್ಮನೆ ಪಾದಯಾತ್ರೆ ಮಾಡುವುದಲ್ಲ. ನಮ್ಮ ಪ್ರಶ್ನೆಗಳಿಗೆ ಉತ್ತರಕೊಟ್ಟು ಹೆಜ್ಜೆ ಹಾಕಿ. ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ ಎಂಬುದು ನಿಮಗೆ ಸಹಿಸಲು ಆಗುತ್ತಿಲ್ಲ. ಬಡವರಿಗೆ ಕೆಲಸ ಮಾಡುವ ಅವಕಾಶ ಬಿಜೆಪಿ, ಜೆಡಿಎಸ್ಗೆ ಸಿಗದ ಕಾರಣಕ್ಕೆ ಕೈ, ಕೈ ಹೊಸಕಿಕೊಳ್ಳುತ್ತಿದ್ದಾರೆ ಎಂದರು.
ನನ್ನ ಅಜ್ಜಯ್ಯನ ಸುದ್ದಿಗೆ ಬರಬೇಡ. ಅಜ್ಜಯ್ಯನ ಶಕ್ತಿ ಏನು ಎಂಬುದು ನಿನಗೇನು ಗೊತ್ತು? ಅವರ ಶಕ್ತಿ ನನಗೆ ಮಾತ್ರ ಗೊತ್ತು. ಏತಕ್ಕಾಗಿ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದೆ. ನೀವು ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿದ ನಂತರ ಏನಾಯಿತು ಎಂಬುದನ್ನು ನೀವೇ ಚರ್ಚೆ ಮಾಡಿಕೊಳ್ಳಿ ಎಂದರು.
ಶಿವಕುಮಾರ್ ಅಪ್ಪ ಅಮ್ಮನಿಗೆ ಹುಟ್ಟಿಲ್ಲ ಎಂದು ಹೇಳಿದ್ದ ಕುಮಾರಸ್ವಾಮಿ ಸಾತನೂರಿಗೆ ಬಂದು ಕ್ಷಮೆ ಕೇಳಿದ್ದ. ಅಂದೇ ಯಾರಿಗೂ ಹೆದರದ ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗ ಇಂದು ಹೆದರುತ್ತೇನೆಯೆ? ನಿಮ್ಮ ಪಾದಯಾತ್ರೆಗಳಿಗೆಲ್ಲ ಹೆದರುವ ಮಗ ನಾನಲ್ಲ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ನಾವು ನಿಮ್ಮ ಪೆನ್ ಡ್ರೈವ್ ವಿಚಾರಕ್ಕೆ ಬಂದಿದ್ದೇವೆಯೇ, ನೀನುಂಟು ನಿಮ್ಮ ಅಣ್ಣ, ತಮ್ಮಂದಿರು ಉಂಟು, ನಿನ್ನ ಕುಟುಂಬ ಉಂಟು. ಪೆನ್ ಡ್ರೈವ್ ಹಿಂದೆ ಮಹಾನಾಯಕ, ಉಪಮುಖ್ಯಮಂತ್ರಿ ಇದ್ದಾರೆ ಎಂದು ಹೇಳಿದ್ದೀರಿ. ಈ ಮಾತಿಗೆ ಬದ್ಧನಾಗಿ ಇರಬೇಕಿತ್ತು. ನೀವು ನನ್ನ ಬಗ್ಗೆ ಮಾತನಾಡಲಿಲ್ಲ ಎಂದರೆ ನಿನಗೆ ನಿದ್ರೆ ಬರುವುದಿಲ್ಲ ಎನ್ನುವುದು ತಿಳಿದಿದೆ. ಇದು ಇವತ್ತಿನದಲ್ಲ, 1985 ರಿಂದ ನಿಮ್ಮ ಕುಟುಂಬದ ಹಾಗೂ ನನ್ನ ನಡುವೆ ತಿಕ್ಕಾಟ ನಡೆಯುತ್ತಿದೆ ಎಂದು ಹೇಳಿದರು.
ಈಗ ಪಾದಯಾತ್ರೆಯಲ್ಲಿ ಎರಡು ಹೆಜ್ಜೆ ಹಾಕಿ ಹೇಳಿಕೆ ನೀಡಿ ಏಕೆ ಓಡಿ ಹೋಗುತ್ತಾ ಇದ್ದಿಯಾ, ಅವನು ಯಾರೋ ಪ್ರೀತಂಗೌಡ ನನ್ನ ಕುಟುಂಬದ ಮರ್ಯಾದೆ ತೆಗೆದಿದ್ದಾನೆ ಎಂದು ಹೇಳಿದೆ. ಆದರೆ, ಇದಕ್ಕೂ ಮೊದಲು ರೇವಣ್ಣನದ್ದೇ ಬೇರೆ ಕುಟುಂಬ ನನ್ನದೇ ಬೇರೆ ಕುಟುಂಬ, ನಾವು ಭಾಗವಾಗಿದ್ಧೇವೆ ಎಂದು ಹೇಳಿದ್ದೇ. ಈಗ ಎಲ್ಲಿಂದ ಬಂತು ಕುಟುಂಬ, ನಾವು ನಿನ್ನ ಕುಟುಂಬದ ವಿಚಾರಕ್ಕೆ ಕೈ ಹಾಕುವುದಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ಬಿಜೆಪಿಯ ದೇವರಾಜೇಗೌಡನಿಂದ ಪತ್ರ ಬರೆಸಿದವನು ನೀನೆ ಅಲ್ಲವೇ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ, ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಡೆದಿರುವ ಎಪಿಎಂಸಿಯಿಂದ 47 ಕೋಟಿ ಲೂಟಿ. ಭೋವಿ ಅಭಿವೃದ್ದಿ ನಿಗಮದಲ್ಲಿ 87 ಕೋಟಿ, ದೇವರಾಜು ಅರಸು ಟ್ರಕ್ ಟರ್ಮಿನಲ್ 50 ಕೋಟಿ, ಗಂಗಾ ಕಲ್ಯಾಣ ಯೋಜನೆಯಲ್ಲಿ 430 ಕೋಟಿ, ಕೊರೋನಾ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದರು.
ಪಿಎಸ್ ಐ ಹಗರಣ, ಪರಶುರಾಮ ಪ್ರತಿಮೆ ಹಗರಣ, ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆಯಲ್ಲಿ 700 ಕೋಟಿಗೂ ಹೆಚ್ಚು ಅಕ್ರಮ ಹಣದ ದಾಖಲೆಗಳು ದೊರೆಯಿತು. ಅಂಗನವಾಡಿಯ ಮಕ್ಕಳ ಮೊಟ್ಟೆ ಹಗರಣ. ಕುಮಾರಸ್ವಾಮಿ ಅವರ ಗಣಿ ಹಗರಣದ ಬಗ್ಗೆ ಆನಂತರ ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದ ಸಾರಥಿಯಾಗಿ ನನ್ನ ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದಿದೆ. ನಿನ್ನ ಅಧ್ಯಕ್ಷತೆಯಲ್ಲಿ ಗೆದಿದ್ದು ಕೇವಲ 19 ಸ್ಥಾನಗಳು ಮಾತ್ರ. ಈಗ ಎರಡು ಸೀಟು ಗೆದ್ದು, ಬಿಜೆಪಿಯವರನ್ನು ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದೀಯಾ. ನಿನ್ನ ಮಗ ಹಾಗೂ ಜಿ.ಟಿ.ದೇವೇಗೌಡರು ಪಾದಯಾತ್ರೆಗೆ ಹೋಗುವುದಿಲ್ಲ ಎಂದು ಏಕೆ ಹೇಳಿದ್ದರು ಎಂದು ವ್ಯಂಗ್ಯವಾಡಿದರು.
ಇನ್ನು 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೆಗೆಯುತ್ತೇವೆ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರೇ ಕೇಳಿ, ಬ್ರಿಟಿಷರ ಕೈಯಲ್ಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ. ಸರ್ಕಾರ ಒಡೆದುಹಾಕಲು ಇದೇನು ಮಡಕೆಯೇ ಕಾಂಗ್ರೆಸ್ ಹೋರಾಟಕ್ಕೆ ನಿನ್ನ ಕ್ಷೇತ್ರದ ಹೆಬ್ಬಾಗಿನಲ್ಲೇ ಇರುವ ಶಿವಪುರ ಸತ್ಯಾಗ್ರಹ ಸೌಧವೇ ಸಾಕ್ಷಿ.
ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇವುಗಳನ್ನು ನಿಲ್ಲಿಸಬೇಕು ಎನ್ನುವ ಹುನ್ನಾರ ಮಾಡಿಕೊಂಡು ಬಿಜೆಪಿ, ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ. ಕುಮಾರಸ್ವಾಮಿ, ವಿಜಯೇಂದ್ರ ಯಡಿಯೂರಪ್ಪ, ಆರ್.ಅಶೋಕ್ ಎಲ್ಲರೂ ಸೇರಿ ಗ್ಯಾರಂಟಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಪತ್ನಿ ಮಾಡಬಾರದು ತಪ್ಪು ಮಾಡಿದಂತೆ ಬಿಂಬಿಸಲಾಗುತ್ತಿದೆ. ಪಾರ್ವತಮ್ಮ ಅವರಿಗೆ ಅವರ ಅಣ್ಣ ಅರಿಶಿಣ, ಕುಂಕುಮಕ್ಕೆ ಎಂದು ಮೂರು ಎಕರೆ ಜಮೀನು ನೀಡಿದ್ದಾರೆ. ಅದನ್ನು ಮುಡಾ ಒತ್ತುವರಿ ಮಾಡಿಕೊಂಡ ಕಾರಣಕ್ಕೆ ಪರಿಹಾರವಾಗಿ ಸೈಟು ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ವೇದಿಕೆಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ್, ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಶಿವಾನಂದ ಪಾಟೀಲ್, ಕೆ ಎನ್ ರಾಜಣ್ಣ, ಡಾ ಎಂ ಸಿ ಸುಧಾಕರ್, ಮಧು ಬಂಗಾರಪ್ಪ, ಶಾಸಕ ಕದಲೂರು ಉದಯ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ದೆಹಲಿಯ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತಿತರರಿದ್ದರು.