NEWSಕೃಷಿನಮ್ಮರಾಜ್ಯ

ಕೇಂದ್ರ – ರಾಜ್ಯ ಸರ್ಕಾರಗಳ‌ ವಿರುದ್ಧ ರೈತ ಸಂಘ- ಹಸಿರು ಸೇನೆಯಿಂದ ಪ್ರತಿಭಟನೆ ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ

ಕನಕಗಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ‌ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಪದಾಧಿಕಾರಿಗಳು, ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ನೇತೃತ್ವದಲ್ಲಿ ಸೋಮವಾರ ಪ್ರತಿಭಟಿಸಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು. ವೃತ್ತದಲ್ಲೇ ಬಹಿರಂಗ ಸಭೆ ನಡೆಸಿ, ಉಭಯ ಸರಕಾರಗಳ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದರು. ತುಂಗಭದ್ರ ಡ್ಯಾಂ ಭರ್ತಿಯಾಗಿದ್ದು, ಕೂಡಲೇ ಕನಕಗಿರಿ ತಾಲೂಕಿನ ಎಲ್ಲ ಕೆರೆ ತುಂಬಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಕೇಂದ್ರ ಸರಕಾರ ಬಜೆಟ್ ನಲ್ಲಿ ಕೃಷಿ ಕ್ಷೇತ್ರ ಮತ್ತು ಕರ್ನಾಟಕ ರಾಜ್ಯವನ್ನು ಸಂಪೂರ್ಣ ಕಡೆಗಣಿಸಿದ್ದು ಖಂಡನೀಯ. ಕೇಂದ್ರ ಕೇವಲ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಕ್ಕೆ ಮಾತ್ರ ಹೊಸ ಯೋಜನೆ ಮತ್ತು ವಿಶೇಷ ಅನುದಾನ ನೀಡಿದೆ. ಆದರೆ, ರಾಜ್ಯಕ್ಕೆ ಯಾವುದೇ ಹೊಸ ಯೋಜನೆ ನೀಡಿಲ್ಲ. ಇದನ್ನು ಸಂಘಟನೆ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನು ಸಿದ್ದರಾಮಯ್ಯ ಅವರು ೨ನೇ ಬಾರಿಗೆ ಸಿಎಂಆಗಿ ಅಧಿಕಾರ ವಹಿಸಿಕೊಂಡಾಗ ಕೃಷಿಕ ಸಮುದಾಯ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಅಧಿಕಾರ ವಹಿಸಿಕೊಂಡ ಕೇವಲ ೧ ವರ್ಷದಲ್ಲಿ ಎಲ್ಲರ ನಿರೀಕ್ಷೆ ಹುಸಿಯಾಗಿ, ರೈತ ಸಮುದಾಯ ನಿರಾಶಗೊಂಡಿದೆ. ಕೃಷಿ ಇಲಾಖೆಯ ಯಾವುದೇ ಯೋಜನೆ ರೈತರಿಗೆ ತಲುಪುತ್ತಿಲ್ಲ. ರೈತರ ಪಂಪ್‌ಸೆಟ್‌ಗೆ ಸರಕಾರವೇ ವಿದ್ಯುತ್ ಸಂಪರ್ಕ ನೀಡುತ್ತಿದ್ದ ಯೋಜನೆ ರದ್ದು ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಕನಕಗಿರಿ ಮಳೆಯಾಶ್ರಿತ ಪ್ರದೇಶವಾಗಿದ್ದು, ಕೆರೆ ತುಂಬಿಸುವ ಯೋಜನೆ ಇಲ್ಲಿಗೆ ವರದಾನ ಆಗಿದೆ. ಆದರೆ, ತುಂಗಭದ್ರ ಜಲಾಶಯ ತುಂಬಿ ಸಾಕಷ್ಟು ನೀರು, ಸಮುದ್ರ ಸೇರುತ್ತಿದ್ದರೂ ಕೆರೆಗೆ ನೀರು ಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ರೈತರ ಸಮಸ್ಯೆ ಪರಿಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ಕನಕಗಿರಿ ತಾಲೂಕು ಕೇಂದ್ರವಾಗಿ ಐದಾರು ವರ್ಷ ಕಳೆದರೂ ತಹಸೀಲ್ದಾರ್ ಕಚೇರಿ ಹೊರತಾಗಿ ಯಾವುದೇ ಇಲಾಖೆ ಪ್ರತ್ಯೇಕಗೊಂಡಿಲ್ಲ. ಈಗಲೂ ಎಲ್ಲದಕ್ಕೂ ಗಂಗಾವತಿಗೆ ಅಲೆಯಬೇಕಿದೆ.

ಇನ್ನು ಕೋಟ್ಯಂತರ ರೂ. ಖರ್ಚು ಮಾಡಿ, ಜಾರಿ ಮಾಡಿದ ಕೆರೆ ತುಂಬಿಸುವ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಕೂಡಲೇ ಸರಕಾರ ಕೆರೆ ತುಂಬಿಸಬೇಕು. ಇಲ್ಲವಾದರೆ ಸಂಘಟನೆಯಿAದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನಕಗಿರಿ ತಾಲೂಕಿಗೆ ಕೂಡಲೇ ಜೆಸ್ಕಾಂ ಎಇಇ ಕಚೇರಿ ಮಂಜೂರು ಮಾಡಿ, ತಕ್ಷಣವೇ ಕಚೇರಿ ಕಾರ್ಯಾರಂಭ ಮಾಡಿಬೇಕು. ನೀರಾವರಿ ಪಂಪ್ ಸಟ್‌ಗೆ ಪ್ರತ್ಯೇಕ ಲೈನ್ ಇಲ್ಲದ್ದರಿಂದ ಹುಲಿಹೈದರ ಭಾಗದ ಜಮೀನುಗಳಿಗೆ ೧೧ ಗಂಟೆ ನಂತರ ವಿದ್ಯುತ್ ಪೂರೈಕೆ ಆಗುತ್ತಿದೆ. ಇದರಿಂದ ರೈತರಿಗೆ ತೊಂದರೆ ಆಗಿದ್ದು, ಕೂಡಲೇ ಪ್ರತ್ಯೇಕ ಲೈನ್ ಹಾಕಿಸಬೇಕು. ಕನಕಗಿರಿ ತಾಲೂಕಿಗೆ ಕೂಡಲೇ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕೆ ಹಿರಿಯ ಸಹಾಯ ನಿರ್ದೇಶಕರ ಕಚೇರಿ ಮಂಜೂರು ಮಾಡಿ, ಕಚೇರಿ ಆರಂಭಿಸಬೇಕು.

ಕೆರೆ ತುಂಬಿಸುವ ಯೋಜನೆ ಆರಂಭ ಆದಾಗಿನಿಂದ ಲಾಯದುಣಸಿ ಕೆರೆ ತುಂಬಿಲ್ಲ. ಈ ಬಾರಿ ಕೆರೆ ತುಂಬಿಸಲು ಕ್ರಮ ವಹಿಸಬೇಕು. ನಿರಂತರ ೨ ತಿಂಗಳ ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆ ಒಣಗಿದ್ದು, ಕನಕಗಿರಿ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಗೌರವಾಧ್ಯಕ್ಷ ಜೋಗದ ದುರಗಪ್ಪ ನಾಯಕ ದಳಪತಿ, ಯುವ ಘಟಕದ ರಾಜ್ಯಾಧ್ಯಕ್ಷ ಫಯಾಜ್ ಮೈಸೂರು, ಮುಖಂಡರಾದ ಮರಿಯಪ್ಪ ಸಾಲೋಣಿ, ರಾಮಣ್ಣ ಜಾಡಿ, ಭಾರೀಮರದಪ್ಪ ನಡಲಮನಿ, ಹನುಮೇಶ ವರ್ಣಖೇಡ, ಯೋಗೇಶ ಪಿರಿಯಾಪಟ್ಟಣ, ಮೈಸೂರು ಜಿಲ್ಲಾಧ್ಯಕ್ಷ ಜಯರಾಂ, ವಿಜಯನಗರ ಜಿಲ್ಲಾಧ್ಯಕ್ಷ ಬಿ.ಎಂ. ಹುಲಗಪ್ಪ, ಹಂಪೇಶ ಹರಿಗೋಲ, ಮಹಿಳಾ ಘಟಕದ ಮುಖಂಡರಾದ ನಾಗರತ್ನ ಸೇರಿ ಇತರರು ಇದ್ದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ