NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಮಂಡ್ಯ: ಬಸ್‌ನ ಟೈಯರ್‌ ಒಡೆದು ಹೋದರೆ ನಾನೇಕೆ ಹೊಣೆಗಾರನಾಗಬೇಕು- ಡಿಎಂಗೆ 14 ಪ್ರಶ್ನೆ ಕೇಳಿರುವ ಚಾಲಕ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ಚಲಿಸುತ್ತಿದ್ದಾಗ ಟೈಯರ್‌ ಬಸ್ಟ್‌  (Tire burst) ಅಂದರೆ ಒಡೆದು ಹೋಗಿರುವುದಕ್ಕೆ ಚಾಲಕನನ್ನು ಹೊಣೆ ಮಾಡುವುದಾಗಿ ಅಧಿಕಾರಿಗಳು ಮೆಮೋ ಕೊಡುವುದು ಎಷ್ಟು ಸರಿ ಎಂಬ ಪ್ರಶ್ನೆ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದ್ದರು ಅದನ್ನೆ ಮತ್ತೆ ಮತ್ತೆ ಅಧಿಕಾರಿಗಳು ಮಾಡುತ್ತಿರುತ್ತಾರೆ.

ಚಲಿಸುತ್ತಿರುವಾಗ ಬಸ್‌ ಟೈಯರ್‌ ಒಡೆದು ಹೋದರೆ ಅದಕ್ಕೆ ನಮ್ಮನ್ನು ಏಕೆ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸುತ್ತೀರಿ ಇದನ್ನು ನಾನು ಒಪ್ಪುವುದಿಲ್ಲ ಎಂದು ಮಂಡ್ಯ ವಿಭಾಗದ ಮಳವಳ್ಳಿ ಘಟಕದ ಘಟಕ ವ್ಯವಸ್ಥಾಪಕರು ಚಾಲಕರೊಬ್ಬರಿಗೆ ಕೊಟ್ಟಿರುವ ದೋಷಾರೋಪಣಾ ಪತ್ರಕ್ಕೆ (ಮೆಮೋಗೆ)  ಆ ಚಾಲಕ ಲಿಖಿತ ಉತ್ತರ ನೀಡಿದ್ದು ಅಲ್ಲದೆ ಹಲವಾರು ದಾಖಲೆ ರೂಪದ ಉತ್ತರಗಳನ್ನು ಡಿಎಂ ಅವರಿಂದ ಬಯಸಿದ್ದಾರೆ,

ಸ್ವಾಮಿ ಡಿಎಂ ಸಾಹೇಬರೆ ನೀವು ನನಗೆ ಕೊಟ್ಟಿರುವ ಜ್ಞಾಪನಾ ಪತ್ರಕ್ಕೆ ಸಂಬಂಧಿಸಿದಂತೆ ಖಾವಂದರುಗಳಾದ ತಮ್ಮ ಬಳಿ ಈ ಲಿಖಿತ ಉತ್ತರದ ಮೂಲಕ ವಿನಯ ಪೂರ್ವಕವಾಗಿ ತಿಳಿಯಪಡಿಸುತ್ತಾ ಕೇಳಿಕೊಳ್ಳುವುದೇನೆಂದರೆ, ನೀವು ನನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿರುತ್ತವೆ. ನಾನು ಯಾವುದೋ ದುರುದ್ದೇಶದಿಂದಾಗಲಿ, ಬೇಜವಾಬ್ದಾರಿತನದಿಂದಾಗಲಿ ಕರ್ತವ್ಯ ನಿರ್ವಹಿಸಿರುವುದಿಲ್ಲ. ನಾನು ಸಂಸ್ಥೆಯ ಒಬ್ಬ ಜವಾಬ್ದಾರಿಯುತ ನೌಕರನಾಗಿ ಸಂಸ್ಥೆಗೆ ಸೇವೆ ಸಲ್ಲಿಸುತ್ತಿದ್ದೇನೆ.

ತಾವುಗಳು ನಾನೇ ಸ್ವತಃ ಟೈಯರನ್ನು ಒಡೆದು ಹಾಕಿರುವ ರೀತಿಯಲ್ಲಿ ಬಿಂಬಿಸಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ನನ್ನ ತೇಜೋವಧೆ ಮಾಡುತ್ತಿರುವುದು ನನ್ನ ಮನಸ್ಸಿಗೆ ಹಾಗೂ ನನ್ನ ಕರ್ತವ್ಯಕ್ಕೆ ತುಂಬಾ ಧಕ್ಕೆಯನ್ನುಂಟು ಮಾಡಿದೆ. ನಾನು ಯಾವುದೇ ಕಾರಣಕ್ಕೂ ಟೈಯರನ್ನು ಒಡೆದು ಹಾಕಿರುವುದಿಲ್ಲ. ಆ ಟೈಯರು ತಾಂತ್ರಿಕ ದೋಷದಿಂದ ಒಡೆದು ಹೋಗಿರುತ್ತದೆ.

ಈ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಶಿಸ್ತುಕ್ರಮ ಏಕೆ ಕೈಗೊಳ್ಳಬಾರದು ಎಂದು ತಾವುಗಳು ದೋಷಾರೋಪಣ ಪತ್ರವನ್ನು ಜಾರಿ ಮಾಡಿರುತ್ತೀರಿ. ನೀವು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ನಾನು ಸಮಂಜಸವಾದ ಉತ್ತರವನ್ನು ಸಲ್ಲಿಸಲು ತಮ್ಮಿಂದ ಟೈಯರಿಗೆ ಸಂಬಂಧಿಸಿದ ಕೆಲವೊಂದು ಪ್ರಮುಖ ಮಾಹಿತಿಗಳು ಅತ್ಯವಶ್ಯಕವಾಗಿ ಬೇಕಾಗಿರುವುದರಿಂದ ಖಾವಂದರೂಗಳಾದ ತಾವುಗಳು ಈ ಕೆಳಕಂಡ ಮಾಹಿತಿಗಳನ್ನು ನನಗೆ ಕೊಡಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

1. ಸಾರಿಗೆ ಸಂಸ್ಥೆಯ ವಾಹನಗಳಿಗೆ ಯಾವ ಕಂಪನಿಯ ಟೈಯರನ್ನು ನೀವು ನಿಯಮಿತವಾಗಿ ಬಳಸುತ್ತಿದ್ದೀರಿ ಎಂಬುವುದರ ಬಗ್ಗೆ ದೃಢೀಕೃತ ಮಾಹಿತಿ ಪ್ರತಿ.

2. ನೀವು ಬಳಸುತ್ತಿರುವ ಟೈಯರಿನ ಕಂಪನಿಯವರು ನಮ್ಮ ಟೈಯರು ಇಂತಿಷ್ಟೇ ಕಿಲೋಮೀಟರ್ ಕ್ರಮಿಸುತ್ತದೆ ಯಾವುದೇ ಕಾರಣಕ್ಕೂ ಬ್ರಸ್ಟ್ ಆಗುವುದಿಲ್ಲವೆಂದು, ಒಡೆದು ಹೋಗುವುದಿಲ್ಲವೆಂದು ಪ್ರಮಾಣಿಕರಿಸಿ ನೀಡಿರುವ ಪ್ರಮಾಣ ಪತ್ರದ ದೃಢೀಕೃತ ನಕಲು ಪ್ರತಿ.

3. ನೀವು ಯಾವ ಒಂದು ಆಧಾರದ ಮೇಲೆ ವಾಹನಕ್ಕೆ ಅಳವಡಿಸಿರುವ ಟೈಯರು ಇಂತಿಷ್ಟೇ ಕಿಲೋಮೀಟರ್ ಕ್ರಮಿಸಬೇಕು ಎಂದು ತೀರ್ಮಾನಿಸಿ ಪ್ರಾಮಾಣಿಕರಿಸಿರುವ ಪ್ರಮಾಣ ಪತ್ರದ ದೃಢೀಕೃತ ನಕಲು ಪ್ರತಿ.

4. ಸಂಸ್ಥೆಯ ವಾಹನದಲ್ಲಿ ಒಂದು ಬಾರಿಗೆ ಎಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯಲು ಅವಕಾಶವಿರುತ್ತದೆ ಎಂಬುದರ ಬಗ್ಗೆ ದೃಢೀಕೃತ ಮಾಹಿತಿ.

5. ಕಂಪನಿಯವರು ನೀಡಿರುವ ಟೈಯರು ಅಂದರೆ ಸಂಸ್ಥೆಯ ವಾಹನಕ್ಕೆ ಅಳವಡಿಸಿರುವ ಟೈಯರು ಎಷ್ಟು ಭಾರವನ್ನು ತಡೆಯುತ್ತದೆ ಎಂದು ಪ್ರಮಾಣಿಕರಿಸಿ ನೀಡಿರುವ ಪ್ರಮಾಣ ಪತ್ರದ ನಕಲು ಪ್ರತಿ.

6. ಟೈಯರು ಯಾವ ಯಾವ ಸಂದರ್ಭಗಳಲ್ಲಿ ಒಡೆದು ಹೋಗುತ್ತದೆ ಎಂದು ಕಂಪನಿಯವರು ನೀಡಿರುವ ಹಾಗೂ ಸಂಸ್ಥೆಯ ತಾಂತ್ರಿಕ ವರ್ಗದವರು ನಿರ್ಧರಿಸಿರುವ ಮಾಹಿತಿಯ ದೃಢೀಕೃತ ನಕಲು ಪ್ರತಿ.

7. ವಾಹನದ ಟೈಯರು ಯಾವ ಕಾರಣದಿಂದ ಒಡೆದು ಹೋಗಿರುತ್ತದೆ ಮತ್ತು ಕಲ್ಲು ಹೊಡೆದೆ ಒಡೆದು ಹೋಗಿರುತ್ತದೆ ಎಂದು ತಾವುಗಳು ಹೇಗೆ ನಿರ್ಧರಿಸಿರುತ್ತೀರಿ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ.

8. ಸದರಿ ವಾಹನಕ್ಕೆ ಯಾವ ದಿನಾಂಕದಂದು ಟೈಯರ್ ಅಲೈಮೆಂಟ್ ಮಾಡಿರುತ್ತೀರಿ ಎಂಬುದರ ಬಗ್ಗೆ ದೃಢೀಕೃತ ಮಾಹಿತಿ.

9. ಈ ವಾಹನಕ್ಕೆ ಟೈಯರ್ ಅಲೈಮೆಂಟ್ ಮಾಡಿರುವ ಬಗ್ಗೆ ಇರುವ ಮಾಹಿತಿಯ ದೃಢೀಕೃತ ನಕಲು ಪ್ರತಿ.

10. ಈ ವಾಹನಕ್ಕೆ ಆ ದಿನಾಂಕದಂದು ಎಷ್ಟು ಗಾಳಿಯನ್ನು ತುಂಬಲಾಗಿತ್ತು ಎಂಬುದರ ಬಗ್ಗೆ ದೃಢೀಕೃತ ಮಾಹಿತಿ.

11. ಸಂಸ್ಥೆಯ ವಾಹನದ ಟೈಯರು ಬಸ್ಟ್  (Tire burst) ಆದರೆ, ಒಡೆದು ಹೋದರೆ ಸಂಸ್ಥೆಯ ಚಾಲಕರೇ ನೇರ ಹೊಣೆಗಾರರು ಎಂದು ಕೇಂದ್ರ ಕಚೇರಿಯವರು ಹೊರಡಿಸಿರುವ ಆದೇಶದ ದೃಢೀಕೃತ ನಕಲು ಪ್ರತಿ.

12. ಟೈಯ‌ರ್ ಒಡೆದು ಹೋಗಿರುವ ಬಗ್ಗೆ ತಪಾಸಣೆ ಮಾಡಿದ ದಿನವೇ ಏಕೆ ನನ್ನ ಗಮನಕ್ಕೆ ತಂದಿರುವುದಿಲ್ಲ ಎಂಬುದರ ಬಗ್ಗೆ ತಾಂತ್ರಿಕ ವರ್ಗದವರಿಂದ ಮಾಹಿತಿ ಪಡೆದಿರುವ ದೃಢೀಕೃತ ನಕಲು ಪ್ರತಿ.

13. ಟೈಯರ್ ಒಡೆದಿರುವ ಬಗ್ಗೆ ತಡವಾಗಿ ನನ್ನ ಗಮನಕ್ಕೆ ತಂದಿರುವ ಬಗ್ಗೆ ಕಾರಣ ಏನು ಎಂಬುದರ ಬಗ್ಗೆ ದೃಢೀಕೃತ ಮಾಹಿತಿ.

14. ಅಪರಾಧ ನಡೆದ ಎಷ್ಟು ದಿನಗಳ ಒಳಗೆ ಚಾಲಕರಿಗೆ ಮಾಹಿತಿ ನೀಡಬೇಕು ಎಂದು ಇರುವ ಸುತ್ತೋಲೆಯ ದೃಢೀಕೃತ ನಕಲು ಪ್ರತಿ.

ಈ ಎಲ್ಲ ದಾಖಲೆಗಳನ್ನು ತಾವುಗಳು ನನಗೆ ಕೊಡಿಸಿಕೊಟ್ಟ ಮೂರು ದಿನದ ಒಳಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತ ಸೂಕ್ತ ಉತ್ತರವನ್ನು ಸಲ್ಲಿಸಲು ನಾನು ಬದ್ಧನಿರುತ್ತೇನೆ. ಈ ಪ್ರಕರಣದಲ್ಲಿ ನಾನು ಕೇಳಿರುವ ದಾಖಲೆಗಳನ್ನು ನನಗೆ ಕೊಡಿಸಿಕೊಡದೆ ಯಾವುದೇ ಕಾರಣಕ್ಕೂ ಈ ಪ್ರಕರಣದಲ್ಲಿ ನನ್ನನ್ನು ಅಪರಾಧಿ ಎಂದು ತೀರ್ಮಾನಿಸಿ ಯಾವುದೇ ಶಿಸ್ತು ಕ್ರಮ ಕೈಗೊಳ್ಳಬಾರದೆಂದು ವಿನಂತಿಸಿಕೊಳ್ಳುತ್ತೇನೆ.

ಅಲ್ಲದೆ ಈ ಪ್ರಕರಣದ ಬಗ್ಗೆ ತನಿಖೆ ಮಾಡಿಸಿ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಖಾವಂದರೂಗಳಾದ ತಾವುಗಳು ಪರಿಶೀಲಿಸಿ ಆರೋಪದಿಂದ ನನ್ನನ್ನು ಮುಕ್ತನನ್ನ ಮಾಡಿ ಈ ಪ್ರಕರಣದಲ್ಲಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಮತ್ತೊಮ್ಮೆ ಪ್ರಾರ್ಥಿಸಿಕೊಳ್ಳುತ್ತೇನೆ.

ಇಂತಿ ತಮ್ಮ ವಿಧೇಯ ಚಾಲಕ ಮಳವಳ್ಳಿ ಘಟಕ ( ಈ ಎಲ್ಲ ಮಾಹಿತಿ ಕೇಳಿರುವ ಚಾಲಕನ ಹೆಸರು ಮತ್ತು ವಿಳಾಸ ಒಳಗೊಂಡ ಪ್ರತಿ ವಿಜಯಪಥ ಕಚೇರಿಯಲ್ಲಿ ಲಭ್ಯವಿದೆ. ಆದರೆ ಕೆಲ ನಿಯಮಗಳ ಪರಿಣಾಮ ಅವರ ಹೆಸರನ್ನು ಬಹಿರಂಗಪಡಿಸುತ್ತಿಲ್ಲ)

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್