ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ( ಮುಡಾ) ಅವ್ಯವಹಾರ ಆರೋಪ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಹಗರಣ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳು ಮುಗಿಬಿದ್ದಿರುವ ನಡುವಲ್ಲೇ ಸಿಎಂ ಬೆಂಬಲಕ್ಕೆ ಶೋಷಿತ ವರ್ಗಗಳ ಒಕ್ಕೂಟ ನಿಂತಿದೆ.
ಇಂದು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಾಜಭವನ ಚಲೋಗೆ ಕರೆ ನೀಡಲಾಗಿದ್ದು, ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ರೈಲು, ಬಸ್ ಮಾರ್ಗವಾಗಿ ಫ್ರೀಡಂಪಾರ್ಕ್ ತಲುಪಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಗಳಿದ್ದು, ಪರ್ಯಾಯ ಮಾರ್ಗಗಳ ಬಳಸುವಂತೆ ಪೊಲೀಸರು ಮನವಿ ಮಾಡಿದ್ದರು.
ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 1 ಲಕ್ಷಕ್ಕೂ ಅಧಿಕ ಜನ ಆಗಮಿಸಿದ್ದು, ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‌ವರೆಗೆ ಮೊದಲು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 11.30ಕ್ಕೆ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ, ಬಳಿಕ ರಾಜಭವನ ಚಲೋ ನಡೆಸಲಾಯಿತು.
ಪ್ಪತಿಭಟನೆ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಸಾರ್ವಜನಿಕರಿಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ. ಶೇಷಾದ್ರಿ ರಸ್ತೆಯ ಸುತ್ತಮುತ್ತ ಸಂಚಾರ ಸಲಹೆಯನ್ನು ನೀಡಿದ್ದಾರೆ, ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಶೇಷಾದ್ರಿ ರಸ್ತೆಯನ್ನು (ಖೋಡೆ ಸರ್ಕಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ) ಬಳಸದಂತೆ ಹಾಗೂ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಲಹೆ ನೀಡಿದ್ದರು.
ಇನ್ನು ಪ್ರತಿಭಟನೆಗೆ ಬರುವ ಬಸ್ಸುಗಳು ಮೇಖ್ರಿ ವೃತ್ತದ ಬಳಿ ಅರಮನೆ ಮೈದಾನದ ಗೇಟ್ ನಂ.1, 2 ಮತ್ತು 3ರಲ್ಲಿ ನಿಲ್ಲಿಸಬೇಕು. ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಫ್ರೀಡಂ ಪಾರ್ಕ್‌ನಲ್ಲಿರುವ MLCP ಪಾರ್ಕಿಂಗ್ ಸ್ಥಳದಲ್ಲಿ ಪೇ ಮತ್ತು ಪಾರ್ಕ್ ಆಧಾರದ ಮೇಲೆ ನಿಲ್ಲಿಸಬೇಕು ಎಂದು ತಿಳಿಸಿದ್ದರು.