ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್ ಚಲಿಸುತ್ತಿದ್ದಾಗಲೇ ಮುಂಬದಿ ಚಕ್ರ ಕಳಚಿದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಸಮೀಪ ನಡೆದಿದೆ.
ಇಂದು ಬಾಚಹಳ್ಳಿ-ಗುಂಡ್ಲುಪೇಟೆ ಮಾರ್ಗದಲ್ಲಿ ಸಂಚರಿಸುವ ಗುಂಡ್ಲುಪೇಟೆ ಘಟಕಕ್ಕೆ ಸೇರಿದ ಬಸ್ ಇದಾಗಿದ್ದು, ಕೋಡಹಳ್ಳಿ ಸಮೀಪ ಬಸ್‌ನ ಮುಂಬದಿ ಚಕ್ರದ ರಾಡ್ ಕಟ್ಟಾಗಿ ಅವಘಡ ಸಂಭವಿಸಿದೆ. ಈ ವೇಳೆ ಬಸ್‌ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ, ಪ್ರಯಾಣಿಕರು ಸೇರಿ 55ಕ್ಕೂ ಅಧಿಕ ಮಂದಿ ಇದ್ದರು. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್‌ಗಳನ್ನು ನಿರ್ವಹಣೆ ಮಾಡುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಹಳೇ ಡಕೋಟಾ ಬಸ್‌ಗಳನ್ನು ಗ್ರಾಮಾಂತರ ಪ್ರದೇಶಕ್ಕೆ ನಿಯೋಜನೆ ಮಾಡಿದ್ದಾರೆ ಎಂದು ಪ್ರಯಾಣಿಕರು ಸ್ಥಳೀಯರು ಸಾರಿಗೆ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದರು.
ಶಕ್ತಿ ಯೋಜನೆ ದೂರಿದ ಜನ: ಹೆಣ್ಣುಮಕ್ಕಳಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಬಸ್‌ಗಳು ಇಂತಹ ದುಸ್ಥಿತಿ ತಲುಪಿವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಬಸ್‌ಗಳು ಹಾಳಾಗುತ್ತಿವೆ. ಬಸ್‌ಗಳ ಸರಿಯಾದ ನಿರ್ವಹಣೆಯೂ ಇಂತಹ ಪರಿಸ್ಥಿತಿ ಎದುರಾಗಲು ಕಾರಣವಾಗಿದೆ. ಮಾರ್ಗ ಮಧ್ಯದಲ್ಲೇ ಹೆಚ್ಚಿನ ಬಸ್‌ಗಳು ಕೆಟ್ಟುನಿಲ್ಲುತ್ತಿವೆ ಎಂದು ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವು ಕಾರಣ ಎಂದು ಕಿಡಿಕಾರಿದ್ದಾರೆ.