ಬೆಂಗಳೂರು: ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗೂ ಬಿಎಂಟಿಸಿ & ಕೆಎಸ್ಆರ್‌ಟಿಸಿ ವತಿಯಿಂದ ಆಯೋಜಿಸಿದ್ದ, ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ನಡೆಯಿತು.
ಸಂಯಮ, ಶಿಸ್ತು ಮತ್ತು ಶಾಂತಿಗೆ ಹೆಸರಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಇತರೆ ಹತ್ತಾರು ಕಂಪನಿಗಳ ನಿವೃತ್ತ ನೌಕರರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನಿವೃತ್ತರ ಆಕ್ರೋಶದ ಕಟ್ಟೆ ಒಡೆದಿತ್ತು. ಈ ಪ್ರತಿಭಟನೆಗೆ ಸಮರೋಪಾದಿಯಲ್ಲಿ ಜನಸಾಗರವೇ ನೆರೆದಿತ್ತು.
ನಿವೃತ್ತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಚೇರಿ ಆವರಣದಲ್ಲಿ ಅಧಿಕಾರಿಗಳ ವಿರುದ್ಧ ಕೂಗಿದ ಧಿಕ್ಕಾರದ ಘೋಷಣೆ ಮಾರ್ದನಿಸಿತು. ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು ಎಲ್ಲ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೋರಾಟದ ರೂಪುರೇಷೆ ಬಗ್ಗೆ ತಿಳಿಸಿದರು.
ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯ ಸಂಯೋಜಕ ರಮಕಾಂತ ನರಗುಂದ ಮಾತನಾಡಿ, ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವಿದ್ದು, ಅದರಂತೆ ಅವರು ಹೆಚ್ಚುವರಿ ಪಿಂಚಣಿ ಪಡೆಯಲು ಅವಕಾಶವಿದ್ದು, ಕನಿಷ್ಠ ಹೆಚ್ಚುವರಿ ಪಿಂಚಣಿ ಪಡೆಯಲು ಯಾವುದೇ ಕೋರ್ಟ್ ಆದೇಶವಿರುವುದಿಲ್ಲ. ಅದಕ್ಕಾಗಿ ನಾವು ನಮ್ಮ ಹೋರಾಟವನ್ನು ಮುಂದುವರಿಸಿ, ಎಲ್ಲರಿಗೂ ನ್ಯಾಯ ದೊರಕಿಸಲು ಎನ್ಎಸಿ ಸಂಕಲ್ಪ ಮಾಡಿದೆ ಎಂದರು.
ಕಾರ್ಯಾಧ್ಯಕ್ಷ ನಂಜುಂಡೇಗೌಡ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಇಂದು ದೇಶಾದ್ಯಂತ ಹಮ್ಮಿಕೊಂಡಿರುವ “ನಿಧಿ ಅಪ್ಕೆ ನಿಕಟ್” ಕಾರ್ಯಕ್ರಮ ಕೇವಲ ವ್ಯರ್ಥ ಪ್ರಯತ್ನವಾಗಿದ್ದು, ಇದರಿಂದ ನಿವೃತ್ತರಿಗೆ ಯಾವುದೇ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರ ಇದೇ ಆಗಸ್ಟ್ 24ರಂದು ತನ್ನ ಸಂಪುಟ ಸಭೆಯಲ್ಲಿ ಪಿಂಚಣಿ ಯೋಜನೆ ರೂಪಿಸಿದ್ದು, ಈ ಯೋಜನೆಯಲ್ಲಿ ಇಪಿಎಸ್ ನಿವೃತ್ತರನ್ನು ಕಡೆಗಣಿಸಿ, ಕೇಂದ್ರ ಸರ್ಕಾರದ ನೌಕರರಿಗೆ ಎಲ್ಲ ಪಿಂಚಣಿ ಸೌಲಭ್ಯವನ್ನು ನೀಡಿರುವುದು ಅತ್ಯಂತ ಖಂಡನಿಯಾ ಎಂದರು.
ಇನ್ನು ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ತೀವ್ರ ಗೊಳಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, ಎಲ್ಲ ನಿವೃತ್ತರು ಒಗ್ಗಟ್ಟು ಪ್ರದರ್ಶಿಸಬೇಕು ಇನ್ನೂ ಅಸಂಖ್ಯಾತ ಸಂಖ್ಯೆಯಲ್ಲಿ ಪ್ರತಿಭಟನಾ ಸಭೆಗೆ ಆಗಮಿಸಬೇಕು ಎಂದರು.
ಎನ್ಎಸಿ ಅಧ್ಯಕ್ಷ ಜಿಎಸ್‌ಎಮ್ ಸ್ವಾಮಿ ಮಾತನಾಡಿ, ಅಧಿಕಾರಿಗಳು ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ದೇಶಾದ್ಯಂತ ಇರುವ ಎಲ್ಲ ಇಪಿಎಫ್ಒ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಕೇಂದ್ರ ಸರ್ಕಾರ ಹಾಗೂ ಇಪಿಎಫ್ಓ ಅಧಿಕಾರಿಗಳನ್ನು ಬಗ್ಗು ಬಡಿಯಲು ತಾವೆಲ್ಲರೂ ಸಜ್ಜಾಗಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷ ಸುಬ್ಬಣ್ಣ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದು, ಇಪಿಎಸ್ ನಿವೃತ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಪಿಂಚಣಿ ಲೆಕ್ಕಾಚಾರದ ತಕ್ತೆ(caliculation) ನೀಡುತ್ತಿಲ್ಲ ಎಂದು ತಮ್ಮ ಆಕ್ರೋಶ (akrosha) ವ್ಯಕ್ತಪಡಿಸಿದರು.
ಒಳಿಕ ಇಪಿಎಫ್ಒ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತಿದ್ದು, ಜಂಟಿ ಆಯ್ಕೆ ಪತ್ರದಲ್ಲಿನ ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸಿ, ಅರ್ಹ ನಿವೃತ್ತರಿಗೆ ಹೆಚ್ಚುವರಿ ಪಿಂಚಣಿ ನೀಡಬೇಕೆಂದು ಮನವಿ ಮಾಡಿದರು. ಮನವಿ ಪತ್ರ ಸ್ವೀಕರಿಸಿದ ಇಪಿಎಫ್ಒ ಅಧಿಕಾರಿಗಳಿಗೆ ಈ ವರೆಗಿನ ಎಲ್ಲ ಬೆಳವಣಿಗೆಗಳನ್ನು ತಿಳಿಸುವಂತೆ ಮುಖಂಡರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಬ್ಬಿಬ್ಬಾದರು.
ಪದಾಧಿಕಾರಿಗಳಾದ ನಾಗರಾಜು, ರುಕ್ಮೇಶ್ ಹಾಗೂ ಮನೋಹರ್ ಪ್ರತಿಭಟನೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿಕೊಟ್ಟರು. ಪ್ರತಿಭಟನೆಯಲ್ಲಿ ನೂರಾರು ನಿವೃತ್ತರು ಆಗಮಿಸಿ ಹೊರಾಟ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದು ಇಳಿ ವಯಸ್ಸಿನವರ ಹೋರಾಟ ನೋಡುತ್ತಿದ್ದ ನಾಗರಿಕರು ಅಧಿಕಾರಿಗಳು ಮತ್ತು ಸರ್ಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದದ್ದು ಕಂಡ ಬಂತು.