ಬೆಂಗಳೂರು: ಈಗಿನ ಪರಿಸ್ಥಿತಿಯಲ್ಲಿ ಸಾರಿಗೆ ನೌಕರರು ಕೆಲಸಕ್ಕೆ ತಕ್ಕಂತೆ ವೇತವಿಲ್ಲದೆ ಬಹಳ ನಲುಗಿದ್ದು ಬಹಳ ಚಿಂತಾಕ್ರಾಂತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಬಿಎಂಟಿಸಿ ಅಧ್ಯಕ್ಷ ರುದ್ರೇಶ್ ಎಸ್.ನಾಯಕ ನೊಂದು ನುಡಿದರು.
ಇಂದು (ಆ.30) ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಗೌರವ ಅಧ್ಯಕ್ಷ ಗೋವಿಂದರಾಜು, ರಾಜ್ಯಾಧ್ಯಕ್ಷರಾದ ಬೈರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ ಗಮನಕ್ಕೆ ಏರಿದೆ. ಇಂತಹ ಸಂದರ್ಭಗಳಲ್ಲಿ ಸಂಘಟನೆಯ ಮುಖಂಡರನ್ನು ನೋಡಿದರೆ ಅಸಹ್ಯ ಅನ್ನಿಸುತ್ತದೆ. ಕಾರಣ ನಮ್ಮ ಸಂಘಟನೆಯನ್ನು ಸೇರಿ ಯಾವುದೇ ಸಂಘಟನೆಗಳು ಸಾರಿಗೆ ನೌಕರರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ನೌಕರರಿಗೆ ವೇತನ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಅವರ ಬಗ್ಗೆ ಇವರು ಇವರ ಬಗ್ಗೆ ಅವರು ಬರೀ ಕೆಸರೆರಚಾಟದಲ್ಲಿ ತೊಡಗಿದ್ದು ಅಲ್ಲದೆ ಬೇಡದ ವಿಚಾರದಲ್ಲಿದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಿಂದ ಸಾರಿಗೆ ನಿಗಮಗಳ ನೌಕರರು ಕೊರಗುತ್ತಿದ್ದಾರೆಯೇ ವಿನಃ ಯಾವುದೇ ಕೆಲಸ ಕಾರ್ಯಗಳನ್ನು ಆಗುತ್ತಿಲ್ಲ.
ಇಂದಿನ ಈ ಪರಿಸ್ಥಿತಿಯಲ್ಲಿ ಆ ಸಂಘಟನೆ ವೇತನ ಜಾಸ್ತಿ ಮಾಡಿಸುತ್ತೆ ಈ ಸಂಘಟನೆ ವೇತನ ಜಾಸ್ತಿ ಮಾಡಿಸುತ್ತೆ ಎಂದು ನೌಕರರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ನಾವುಗಳು ನಡೆದುಕೊಳ್ಳುತ್ತಿರುವುದು ಏನು? ಬರಿ ಆರೋಪ ಪ್ರತ್ಯರೋಪವೇ? ಆದ್ದರಿಂದ ನಮ್ಮ ಸಂಘಟನೆಯಿಂದ ಯಾರು ಬಲಿಷ್ಟ ಸಂಘಟನೆ ಎಂದು ಕರೆಯಲ್ಪಡುವ ನಾಯಕರಿಗೆ ಒಂದು ಮನವಿ.
ನೀವುಗಳು ಏಳನೇ ವೇತನ ಮಾಡಿಸುತ್ತೀರೋ ಸರಿಸಮಾನ ವೇತನ ಮಾಡಿಸುತ್ತಿರೋ ಇಲ್ಲ ವೇತನ ಪರಿಷ್ಕರಣೆ ಮಾಡಿಸುತ್ತಿರೋ ಮಾಡಿಸಿ. ನಾವು ಅದನ್ನು ಸಂಪೂರ್ಣ ಸಹಕಾರದೊಂದಿಗೆ ಬೆಂಬಲಿಸುವ ಕೆಲಸ ಮಾಡುತ್ತೇವೆ. ನೀವು ಸರ್ಕಾರ ಮತ್ತು ಉನ್ನತ ಅಧಿಕಾರಿಗಳ ಮನವೊಲಿಸಿ ಆದಷ್ಟು ಬೇಗ ವೇತನ ಜಾಸ್ತಿ ಮಾಡಿಸುವ ಕೆಲಸ ಮಾಡಿ.
ಅದನ್ನು ಬಿಟ್ಟು ಆ ಸಮಾವೇಶ ಈ ಸಮಾವೇಶ ಪೂರ್ವಭಾವಿ ಸಿದ್ಧತೆ ಸಹಕಾರ ಸಂಘಗಳ ಚುನಾವಣೆಗಳು ಈ ರೀತಿಯಲ್ಲಿ ನಡೆದುಕೊಂಡು ಮುನ್ನಡೆದರೇ ಯಾವ ಸಂಘಟನೆಯ ಮುಖಂಡರಿಗೂ ನೌಕರರು ಇನ್ನೂ ಮುಂದೆ ಮನ್ನಣೆ ಸಿಗುವುದಿಲ್ಲ ಎಂದು ಘಂಟಾಘೋಷವಾಗಿ ಹೇಳುತ್ತೇನೇ ಎಂದು ಹೇಳಿದರು.
ಸಂಘದ ರಾಜ್ಯಾಧ್ಯಕ್ಷ ಬೈರೇಗೌಡ ಮಾತನಾಡಿ, ಸಂಸ್ಥೆಯಲ್ಲಿ ನೌಕರರ ಬಗ್ಗೆ ಒಳ್ಳೆಯ ಕಾಳಜಿ ಇರುವ ಅಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳು ಹಲವಾರು ಮಂದಿ ಇದ್ದಾರೆ. ಆದರೆ, ನಾವು ಅವರ ಮನಸ್ಸನ್ನು ಬದಲಾಯಿಸಿ ದ್ವೇಷ ಅಸೂಯೆ ಉಂಟಾಗಲು ಕಾರಣರಾಗುತ್ತಿದ್ದೇವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಾರಿಗೆ ನೌಕರರ ಸಮಸ್ಯೆಗಳನ್ನು ಆಲಿಸಿ ಪ್ರಾಮಾಣಿಕವಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸೋಣ ಎಂದು ಎಲ್ಲ ಆಡಳಿತ ಮಂಡಳಿಯ ನಿರ್ದೇಶಕರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಕಾರ್ಯಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ಪಿ.ಎಂ.ಪ್ರಕಾಶ್, ಖಜಾಂಚಿ ಎ.ಸಿ.ಮಂಜಣ್ಣ, ನಿರ್ದೇಶಕರಾದ ಹೇಮಚಂದ್ರ, ಮುತ್ತಣ್ಣನಾಯಕ, ಮಹದೇವಸ್ವಾಮಿ, ಮೈಸೂರು ಬಸವರಾಜು, ಮಹಿಳಾ ನಿರ್ದೇಶಕರಾದ ರಾಮಲಕ್ಷ್ಮಮ್ಮ ಮತ್ತಿತರರು ಇದ್ದರು.
ಖಂಡಿತ ನೀವು ಹೇಳುವುದರಲ್ಲಿ ಅರ್ಥ ಇದೆ. ಈ ಮೊದಲು ಸರ್ಕಾರಿ ನೌಕರರನ್ನಾಗಿ ಮಾಡಲು ನಡೆದ ಹೋರಾಟದಲ್ಲಿ ಭಾಗಿಯಾದ ಬಹುತೇಕ ನಾಯಕರು ಅಲ್ಲಿ ಏನೂ ಸಿಗಲಿಲ್ಲವೋ ಏನೋ ಪರಸ್ಪರ ಕಿತ್ತಾಡಿಕೊಂಡಿದ್ದ ನಾಯಕರುಗಳೆಲ್ಲ ಒಂದಾಗಿವೆ, ಸರ್ಕಾರಿ ನೌಕರರನ್ನಾಗಿ ಮಾಡೇ ತೀರುವೆ ಎಂದಿದ್ದ ನಾಯಕಶಿಖಾಮಣಿ ಈಗ ಪತ್ತಿನ ಸಹಕಾರ ಸಂಘಗಳ ಚುನಾವಣೆಯಲ್ಲಿ ಬ್ಯುಸಿ ಆಗಿದೆ, ಇದರ ಮದ್ಯೆ ನೌಕರರು ಸತ್ತು ಸುಣ್ಣ ಆಗ್ತಿದ್ದಾರೆ, 40%ಕೇಳಿ 10%ಒಪ್ಪಿಕೊಳ್ಳುವ ನಾಯಕರು ಇನ್ನೂ ಅದೇ ಧಾಟಿಯಲ್ಲಿಯೇ ಇದ್ದಾರೆ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸರಿಸಮಾನ ವೇತನ ಸೇರಿಸಿದ್ದೇವೆ ಎಂದ ನಾಯಕ ಬಾಯಿಬಿಡುತ್ತಿಲ್ಲ, ಇನ್ನು ನೌಕರರನ್ನು ಆ ದೇವರೇ ಕಾಪಾಡಬೇಕು