ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್ ಆವರಣದಲ್ಲಿ ಇಪಿಎಸ್ ಪಿಂಚಿಣಿದಾರರ 80ನೇ ಮಾಸಿಕ ಸಭೆ ಸೆಪ್ಟೆಂಬರ್ 1ರ ಭಾನುವಾರ ಬೆಳಗ್ಗೆ 8ಗಂಟೆಗೆ ಜರುಗಲಿದ್ದು ಸರ್ವರೂ ಆಗಮಿಸಬೇಕು ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಧ್ಯಕ್ಷ ನಂಜುಂಡೇಗೌಡ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಇಪಿಎಸ್ ಪಿಂಚಣಿದಾರರ ಹೋರಾಟ ದಿನಕಳದಂತೆ ತೀವ್ರಗೊಳ್ಳುತ್ತಿದೆ. ಕಳದೊಂದು ತಿಂಗಳಿನಿಂದ ನಡೆಸಿದ ಪ್ರತಿಭಟನೆ, ಈಗ ಒಂದು ಹಂತಕ್ಕೆ ಬಂದು ನಿಂತಿದೆ.
ಅಶೋಕ್ ರಾಹುತ್ ಅವರ ನೇತೃತ್ವದ ತಂಡ ನಿನ್ನೆ ಅಂದರೆ ಆಗಸ್ಟ್ 30 ರಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿ, ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಸಚಿವರು ಕಳೆದ ಐದು ವರ್ಷಗಳಿಂದ ಮಹಾರಾಷ್ಟ್ರದ ಬುಲ್ಡಾನದಲ್ಲಿ ಇಪಿಎಸ್ ನಿವೃತ್ತರು ನಡೆಸುತ್ತಿರುವ ಹೋರಾಟವನ್ನು ತಾನು ಗಮನಿಸಿದ್ದು, ಇದರಿಂದ ತನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಇನ್ನೆರಡು ವಾರಗಳಲ್ಲಿ ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ನಮ್ಮ ಮುಖಂಡರಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಆಗಸ್ಟ್ 28 & 29 ರಂದು ಕೇಂದ್ರ ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗೂ ರಮೇಶ್ ಕೃಷ್ಣಮೂರ್ತಿ, ಮುಖ್ಯ ಸಿಪಿಫ್ಒ ಅವರನ್ನು ದೆಹಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿ, ಚರ್ಚಿಸಿರುವುದು, ಇವೆಲ್ಲವೂ ಕೂಡ ಕನಿಷ್ಠ ಹೆಚ್ಚುವರಿ ಪಿಂಚಣಿ ಬಗ್ಗೆ ನಿವೃತ್ತರಲ್ಲಿ ಭರವಸೆ ಮೂಡಿಸಿದೆ ಎಂದರು.
ನಮ್ಮ ಮುಖಂಡರು ದೆಹಲಿಯಲ್ಲಿ ಜನ ಪ್ರತಿನಿಧಿಗಳು ಹಾಗೂ ಇಪಿಎಫ್ಒ ಅಧಿಕಾರಗಳನ್ನು ಭೇಟಿ ಮಾಡಿ, ಚರ್ಚಿಸಿದ ಎಲ್ಲ ಅಂಶಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಈ ಮಾಸಿಕ ಸಭೆಯಲ್ಲಿ ಎನ್ಎಸಿ ಮುಖ್ಯ ಸಂಯೋಜಕ ರಮಾಕಾಂತ್ ನರಗುಂದ ಹಾಗೂ ಜಿಎಸ್‌ಎಮ್ ಸ್ವಾಮಿ ತಿಳಿಸಿಕೊಡಲಿದ್ದಾರೆ.
ದೇಶಾದ್ಯಂತ ಇರುವ 78 ಲಕ್ಷ ನಿವೃತ್ತರು ನಾವೆಲ್ಲರೂ ಒಂದೇ. ಸಂಘಟನಾತ್ಮಕ ದೃಷ್ಟಿಯಿಂದ ಈ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್‌ಬಾಗ್ ಹೂತೋಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಎಲ್ಲಾ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು 01/09/2024 ರಂದು ಬೆಳಗ್ಗೆ 8 ಗಂಟೆಗೆ ಹಾಜರಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.