ತಿಪಟೂರು: ಗಣೇಶ ಹಬ್ಬದ ದಿನ ರಜೆ ಸಿಗದ ಕಾರಣ ತಡವಾಗಿ ಬರುತ್ತೇವೆ ಎಂದು ಚಾಲನಾ ಸಿಬ್ಬಂದಿಯೊಬ್ಬರು ಹಿಂದಿನ ದಿನವೆ ಹೇಳಿ ಹೋಗಿದ್ದರೂ ಕೂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದ ತಿಪಟೂರು ಘಟಕದ ಸಂಚಾರ ನಿರೀಕ್ಷಕಿ (TI) ರೂಪ 174 ಕಿಮೀ ರದ್ದು ಪಡಿಸಿದ್ದೀರೆಂದು ಡ್ಯೂಟಿಗೆ ಹೋಗುವ ಮುನ್ನವೇ ಅಪರಾಧ ಜ್ಞಾಪನ ಪತ್ರ ನೀಡುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ.
ಅಲ್ಲದೆ ಸಂಚಾರಿ ನಿರೀಕ್ಷಕಿ ರೂಪ ಅವರು ಸೆ.6ರಂದು ಬೆಳಗ್ಗೆ 7.30ಕ್ಕೆ ಡ್ಯೂಟಿಗೆ ಬರುತ್ತೇವೆಂದು ಸಹಿ ಮಾಡಿ ಹೋಗಿದ್ದೀರಿ ಆದರೆ ನೀವು ಬೆಳಗ್ಗೆ 7.30ಕ್ಕೆ ಬದಲು ಮಧ್ಯಾಹ್ನ 1.45ಕ್ಕೆ ಬಂದಿದ್ದೀರಿ ಎಂದು ಹೇಳಿ ಈ ಆರೋಪಣ ಪತ್ರ ನೀಡಿದ್ದಾರೆ. ಆದರೆ, ಈಕೆಗೆ ಸೆ.6ರಂದೆ ನಾವು ಗಣೇಶ ಹಬ್ಬವಿರುವುದರಿಂದ ನೀವು ರಜೆ ಕೊಡದ ಕಾರಣ ತಡವಾಗಿ ಬರುತ್ತೇವೆ ಎಂದು ಹೇಳಿ ಹೋಗಿದ್ದಾರೆ.
ಆದರೆ ಮಾರನೆ ದಿನ ಅಂದರೆ ಸೆ.7ರಂದು ಬೆಳಗ್ಗೆ ಬದಲಿಗೆ ಮಧ್ಯಾಹ್ನ ಬಂದಿದ್ದೀರಿ ಎಂದು ಹೇಳಿ ಹೋಗಿದ್ದರೂ ಕೂಡ ಮೆಮೋ ಕೊಟ್ಟಿದ್ದಾರೆ ಅಂದರೆ ಇವರು ನೌಕರರನ್ನು ಯಾವ ರೀತಿ ಹಿಂಸಿಸುತ್ತಿದ್ದಾರೆ ಎಂಬುವುದು ತಿಳಿಯುತ್ತದೆ. ಏಕೆ ನೌಕರರು ಹಬ್ಬ ಮಾಡುವುದು ಬೇಡವೆ ಎಂಬ ಪ್ರಶ್ನೆಯನ್ನು ಪ್ರಜ್ಞಾವಂತರು ಎತ್ತಿದ್ದಾರೆ.
ಗಣೇಶ ಹಬ್ಬವಿದ್ದರಿಂದ ಚಾಲಕರು ತಡವಾಗಿ ಬಂದು ಮಾರ್ಗ ಕಾರ್ಯಾಚರಣೆ ಮಾಡಲು ಹೊರಟಾಗ ಈ ಮೆಮೋ ನೀಡಿದ್ದಾರೆ. ಆದರೆ, ತಡವಾಗಿ ಬಂದಿದ್ದೀರಿ ಎಂದು ರಜೆ ಪಡೆದು ಕಳುಹಿಸಬಹುದಿತ್ತಲ್ಲವೇ? ಇದನ್ನು ಮಾಡದೆ ಅವರು ಡ್ಯೂಟಿಗೆ ಹೋಗುತ್ತಿದ್ದರೂ ಅವರಿಗೆ ಡಿಪೋನಲ್ಲೇ ಮೆಮೋಕೊಟ್ಟು ಅದನ್ನು ಮೇಲಧಿಕಾರಿಗಳಿಗೆ ವರದಿ ಮಾಡಲಾಗಿದೆ ಎಂದು ಸಹಿ ಕೂಡ ಪಡೆದಿದ್ದಾರೆ.
ಅಧಿಕಾರಿಗಳ ಈ ನಡೆಯಿಂದ ನೌಕರರು ಒತ್ತಡದಲ್ಲಿ ಡ್ಯೂಟಿ ಮಾಡಬೇಕಾಗಿದೆ. ಅಲ್ಲದೆ ಈ ಒತ್ತಡದಿಂದ ಈಗಾಗಲೇ ಹಲವಾರು ಅಪಘಾತಗಳು ಕೂಡ ಸಂಭವಿಸುತ್ತಿದ್ದು ಇದಕ್ಕೆ ಪರಿಹಾರ ನೀಡಬೇಕಾದ ಉನ್ನತ ಮಟ್ಟದ ಅಧಿಕಾರಿಗಳು ಮೌನವಹಿಸಿರುವುದು ಇನ್ನಷ್ಟು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.
ಇನ್ನು ಚಾಲನಾ ಸಿಬ್ಬಂದಿಗಳು ತಮ್ಮ ಕುಟುಂಬದವರ ಜೊತೆ ನೆಮ್ಮದಿಯಾಗಿ ಹಾಗೂ ಸಂತೋಷವಾಗಿ ಯಾವುದಾದರೂ ಹಬ್ಬಗಳನ್ನು ಮಾಡುವುದು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಸಾರಿಗೆ ನಿಗಮಗಳಲ್ಲಿ ನಿರ್ಮಾಣವಾಗಿದೆ. ಸಂಸ್ಥೆಯ ನಿಯಮಾವಳಿಗಳ ಪ್ರಕಾರ 5 ಹಬ್ಬದ ರಜೆ ಪಡೆಯಲು ಅವಕಾಶವಿದ್ದರೂ ಸಂಚಾರ ಶಾಖೆಯವರ ದಬ್ಬಾಳಿಕೆಯಿಂದ ಅದು ಸಾಧ್ಯವಾಗದ ಪರಿಸ್ಥಿತಿ ಬಂದಿದೆ.
ಈ ಪ್ರಕರಣದಲ್ಲಿ ಗಮನಿಸಿದರೆ ಚಾಲಕ ನಿರ್ವಾಹಕರು ಮಾರ್ಗಕ್ಕೆ ಹೋಗುವ ಮುಂಚೆಯೇ ತಡವಾಗಿದೆ ಎಂದು ಮೆಮೋಕೊಡಲು ಅವಕಾಶವಿದೆ. ಆದರೆ ಸಂಚಾರ ಶಾಖೆಯ ಸಿಬ್ಬಂದಿಗಳು ವಾಹನ ಕಾರ್ಯಾಚರಣೆ ಮಾಡುವ ಮುಂಚೆಯೇ ಕಿಲೋ ಮೀಟರ್ ರದ್ದತಿ ಎಂದು ಮೆಮೋ ನೀಡುವುದು ಯಾವ ನಿಯಮದಲ್ಲಿ ಇದೆ ಎಂದು ನನಗೆ ತಿಳಿಯದಾಗಿದೆ.
ಆ ಸಿಬ್ಬಂದಿಗಳು ಯಾವುದಾದರೂ ವೇಗದೂತ ಕಾರ್ಯಾಚರಣೆ ಮಾಡಿ ಮಾರ್ಗದ ಕಿಲೋ ಮೀಟರ್ ಅನ್ನು ಸಂಪೂರ್ಣ ಗೊಳಿಸಬಹುದಿತ್ತು. ಅದಕ್ಕಾಗಿ ಸಂಚಾರ ಶಾಖೆಯವರು ಉತ್ತಮ ಗಾಡಿ ನೀಡಿ ಅವರ ಮನವೊಲಿಸಿ ಕಿಲೋ ಮೀಟರ್ ರದ್ದಾಗದಂತೆ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು.
ಆದರೆ ಅವರಿಗೆ ಬೇಕಾಗಿರುವುದು ಅದಲ್ಲ ಚಾಲಕ ಮತ್ತು ನಿರ್ವಾಹಕರು ನಾವು ಹೇಳಿದಂತೆ ಕೇಳಬೇಕು ಅವರು ನಮ್ಮ ಗುಲಾಮರ ರೀತಿಯಲ್ಲಿರಬೇಕು. ನಾವು ರಾಜರ ರೀತಿ, ನಾವು ಹೇಳಿದಂತೆ ಕೇಳದಿದ್ದರೆ ಯಾವುದಕ್ಕೆ ಬೇಕಾದರೂ ನಮಗೆ ಮೆಮೋ ನೀಡುವ ಅಧಿಕಾರವಿದೆ ಎಂಬ ಅಮಾನವೀಯ ವರ್ತನೆ ಬೆಳೆಸಿಕೊಂಡಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಇಲ್ಲಿ ಮುಖ್ಯವಾಗಿ ಈ ರೀತಿ ಮಾಡುವುದಕ್ಕೆ ಟಿಐ ಅವರಿಗೆ ಮೇಲಧಿಕಾರಿಗಳ ಬೆಂಬಲವಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಈ ಮೊದಲಿನಿಂದಲೂ ಹಬ್ಬದ ದಿನಗಳಲ್ಲಿ ಕಿಲೋಮೀಟರ್ ರದ್ದಾಗುವುದು ಸರ್ವೇಸಾಮಾನ್ಯ, ಅದಕ್ಕಾಗಿ ಅಧಿಕಾರಿಗಳು ಹೊಂದಾಣಿಕೆಯಿಂದ ಚಾಲನಾ ಸಿಬ್ಬಂದಿಗಳು ಹಬ್ಬ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು.
ಆದರೆ ಈಗ ಬಹುತೇಕ ಅಧಿಕಾರಿಗಳು ಲಂಚವೆಂಬ ಎಂಜಲಿನಲ್ಲಿ ಬಿದ್ದು ಹೊರಳಾಡುತ್ತಿರುವುದರಿಂದ ಚಾಲನಾ ಸಿಬ್ಬಂದಿಗಳಿಗೆ ಇನ್ನಿಲ್ಲ ಕಿರುಕುಳ ಕೊಡುತ್ತಿದ್ದಾರೆ. ಇದನ್ನು ಪ್ರಶ್ನಿಸಬೇಕಾದ ಸಂಘಟನೆಗಳ ಮುಖಂಡರು ಅಧಿಕಾರಿಗಳ ಪರ ನಿಂತಿರುವುದು ಇನ್ನು ಹಲವು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.
ಇನ್ನು ಹಬ್ಬದ ದಿನಗಳಂದು ಸಾಮಾನ್ಯ ಸಾರಿಗೆಗಳಲ್ಲಿ ಜನರ ಸಂಚಾರ ಅತಿ ವಿರಳವಾಗಿರುವುದರಿಂದ ಮಾರ್ಗಗಳಿಗಾಗಿ ಹೆಚ್ಚಿನ ಒತ್ತಡವಿರುವುದಿಲ್ಲ. ಅದನ್ನು ಅರ್ಥಮಾಡಿಕೊಳ್ಳದ ಸಂಚಾರ ಶಾಖೆಯವರು ಅಧಿಕಾರ ದರ್ಪವನ್ನು ಉಪಯೋಗಿಸಿ ಮೆಮೋ ನೀಡುತ್ತಿರುವುದು ಸಿಬ್ಬಂದಿಗಳು ಘಟಕಗಳಲ್ಲಿ ಕೆಲಸ ಮಾಡುವಂತಹ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ.
ಅವರ ಮುಖ್ಯ ಉದ್ದೇಶ ಚಾಲನಾ ಸಿಬ್ಬಂದಿಗಳಿಗೆ ಕಿರುಕುಳ ನೀಡಿದರೆ ನಮಗೆ ಹೊಂದಾಣಿಕೆ ಮಾಡಿಕೊಂಡು ಲಂಚ ನೀಡುತ್ತಾರೆ ಎಂಬುದೇ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಯಾವುದೇ ಘಟಕಗಳಲ್ಲಿ ಕಿರುಕುಳ ನೀಡುವುದು ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಇಟ್ಟಂತೆ ಎಂದು ಇಡೀ ನೌಕರರೇ ಹೇಳುವ ಮಾತು. ಇದು ಅಧಿಕಾರಿಗಳಿಗೆ ತಿಳಿದಿರುವ ಸತ್ಯವಾಗಿದೆ.
ಈ ಹಿಂದೆ ಇದೇ ತಿಪಟೂರು ಘಟಕದಲ್ಲಿ ತಡವಾಗಿ ಕಾರ್ಯಾಚರಣೆಗೊಂಡಿರುವ ಎಷ್ಟು ಮಾರ್ಗಗಳಿಗೆ ಸಂಚಾರಿ ನಿರೀಕ್ಷಕಿಯವರು ಕಿಲೋಮೀಟರ್ ರದ್ದತಿಗಾಗಿ ಮೆಮೋ ನೀಟ್ಟಿದ್ದಾರೆ. ಅದನ್ನು ಪರಿಶೀಲಿಸುವುದು ಒಳ್ಳೆಯದು. ಮುಖ್ಯವಾಗಿ ಈ ಮಾರ್ಗದ ಚಾಲಕರು ಯಾವುದೇ ಅಧಿಕಾರಿಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳದಿರುವುದು ಅವರು ಮೆಮೋ ಪಡೆಯಲು ಕಾರಣವಾಗಿದೆ.
ಅವರಿಗೆ ಬೇಕಾದರೆ ಅವರ ಹೊಂದಾಣಿಕೆ ಇರುವ ಸಿಬ್ಬಂದಿಗಳಿಗೆ ಮಾರ್ಗ ಮಧ್ಯದಲ್ಲೇ ಇಳಿಯಲು ಅವಕಾಶ ಮಾಡಿ ಅವರಿಗೆ ಹಾಜರಾತಿಯನ್ನು ನೀಡಿ ಅವರ ಕೆಲಸವನ್ನು ಮಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತಾರೆ. ನಿನ್ನೆಯೂ ಕೂಡ ಕೆಲವರಿಗೆ ಹಬ್ಬಕ್ಕಾಗಿ ಮಾರ್ಗ ಮಧ್ಯದಲ್ಲಿ ಇಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರಾರಿಗೂ ಸಹ ಕಿ.ಮೀ ರದ್ದತಿಗಾಗಿ ಮೆಮೋ ನೀಡಿಲ್ಲ.
ಇಲ್ಲಿ ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುವ ಅಂಶವೇನೆಂದರೆ, ಅವರಿಗೆ ಹೊಂದಾಣಿಕೆ ಇದ್ದರೆ ಚಾಲನಾ ಸಿಬ್ಬಂದಿ ಏನೇ ಮಾಡಿದರು ಅವರ ಪರೋಕ್ಷ ಬೆಂಬಲವಿರುತ್ತದೆ. ಹೊಂದಾಣಿಕೆ ಇಲ್ಲದಿದ್ದರೆ ಕುಂಟು ನೆಪ ಹೇಳಿಕೊಂಡು ಮೆಮೋ ನೀಡುತ್ತಾರೆ.. ಇದನ್ನು ಗಮನಿಸಿದರೆ ಎಲ್ಲಿಗೆ ಬಂತು ಕೆಎಸ್ಆರ್ಟಿಸಿ ಅಧಿಕಾರಿಗಳ ದರ್ಪ, ದಬ್ಬಾಳಿಕೆ, ಕಿರುಕುಳ ಎಂಬುದನ್ನು ಪ್ರತಿಯೊಬ್ಬರು ಗಮನಿಸಬೇಕಿದೆ. ಅಲ್ಲದೆ ಮೇಲಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಅಗತ್ಯವಿದೆ ಎಂದು ಲೋಕೇಶ್ ಒತ್ತಾಯಿಸಿದ್ದಾರೆ.