ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಾರಿಗೆ ಸಿಬ್ಬಂದಿಯೇ ಚಾಕು ಇರಿಯಲು ಯತ್ನಿಸಿರುವ ಘಟನೆ ನಗರದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ಚಾಕುವಿನಿಂದ ದಾಳಿ ಮಾಡಿರುವ ಸಾರಿಗೆ ಸಿಬ್ಬಂದಿಯನ್ನು ಜೂನಿಯರ್ ಅಸಿಸ್ಟೆಂಟ್ ರಿತೇಶ್ ಎಂದು ಗುರುತಿಸಲಾಗಿದೆ. ಘಟನೆಯಿಂದ ಗಾಯಗೊಂಡಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಿಸಿ ಮೇಲೆ ಮಾಡಿದ ರಿತೇಶ್ ಬಳಿಕ ಸ್ಥಳದಿಂದ ಪರಾರಿಯಾಗಿರುವುದಾಗಿದ್ದಾನೆ. ಸದ್ಯ ಚಾಕುವಿನಿಂದ ದಾಳಿ ಮಾಡುತ್ತಿದ್ದಾಗ ಕೈ ಅಡ್ಡ ಕೊಟ್ಟಿದ್ದರಿಂದ ಭಾರೀ ಅನಾಹುತ ತಪ್ಪಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಡಿಸಿ ಜಗದೀಶ್ ಕುಮಾರ್ ಅವರ ಎಡಗೈನ ಎರಡು ಬೆರಳುಗಳಿಗೆ ಗಾಯವಾಗಿದೆ.
ರಿತೇಶ್ ಹಾಜರಾತಿ ಸರಿಯಿಲ್ಲ ಎಂದು ಕುಟುಂಬವರನ್ನು ಕರೆಸಿ ಜಗದೀಶ್ ಕುಮಾರ್ ಅವರು ಕೌನ್ಸೆಲಿಂಗ್ ಮಾಡಿದ್ದರು. ಕುಟುಂಬದವರ ಮನವಿಯ ಮೇರೆಗೆ ಚಿಕ್ಕಮಗಳೂರಿನಿಂದ ಬೇಲೂರಿಗೆ ರಿತೇಶ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದರಿಂದ ಕುಪಿತಗೊಂಡಿದ್ದ ರಿತೇಶ್, ಗುರುವಾರ ಸಂಜೆ 7.30ರ ವೇಳೆಗೆ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ.
ಚಿಕ್ಕಮಗಳೂರು ಸರ್ಕಾರಿ ಬಸ್ ನಿಲ್ದಾಣದ ಒಳಗೆಯೇ ಈ ಘಟನೆ ನಡೆದಿರುವುದು ಅಧಿಕಾರಿಗಳಿಗೆ ಆಘಾತ ಉಂಟು ಮಾಡಿದೆ. ಚಾಕುವಿನಿಂದ ಹಲ್ಲೆ ನಡೆಸಿದ ಬಳಿಕ ರಿತೇಶ್ ನಾಪತ್ತೆಯಾಗಿದ್ದು, ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.