ಹರಿಯಾಣ: ಎಂಎಸ್‌ಪಿ ಖಾತ್ರಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಹರಿಯಾಣದಲ್ಲಿ ಘೋಷಣೆ ಮಾಡಿದೆ.
ಶನಿವಾರದಿಂದ ಹರಿಯಾಣ ಚುನಾವಣಾ ಹಿನ್ನೆಲೆಯಲ್ಲಿ. ಕಿಸಾನ್ ಮಹಾಪಂಚಾಯತ್ ಸಮಾವೇಶ ನಡೆಸಲು ಸಾಧ್ಯವಿಲ್ಲ ಎಂದು ಪೊಲೀಸರು ರೈತರಿಗೆ ತಿಳಿಸಿದರು ಹಾಗೂ ಸಮಾವೇಶದ ಸ್ಥಳದಲ್ಲಿ ಹಾಕಲಾಗಿದ್ದ ಶಾಮಿಯಾನ ಮೈಕಳನ್ನು ಕಿತ್ತುಹೊಯ್ದರು. ಅದನ್ನು ರೈತ ಮುಖಂಡರು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ಸಂದೇಶ ನೀಡಿದ್ದಾಋೆ.
ಸಮಾವೇಶ ನಡೆಸಲು ಹಾಕಿದ್ದ ಟೆಂಟುಗಳನ್ನ ಕಿತ್ತಾಕಿ ಮೈಕಳನ್ನು ಕಿತ್ತೆಸೆದ ಪೊಲೀಸರು ಬೆಳಗ್ಗೆ 9 ಒಳಗೆ ಸಮಾವೇಶ ನಡೆಸಲು ಆಸ್ಪದ ನೀಡದಿದ್ದರೆ. ರೈತರು ರಾಜ್ಯದ್ಯಂತ ಎಲ್ಲ ರಸ್ತೆಗಳನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಸಮಾವೇಶ ನಡೆಸಲು ಅವಕಾಶ ಕಲ್ಪಿಸಿತು.
ಆದರೆ ಪಕ್ಕದ ರಾಜ್ಯದ ಪಂಜಾಬ್ ರೈತರಿಗೆ ಸಮಾವೇಶಕ್ಕೆ ಬರಲು ಅವಕಾಶ ನೀಡಲಿಲ್ಲ. ಆಗ ಮತ್ತಷ್ಟು ಸಂಖ್ಯೆಯ ರೈತರು ತಂಡೋಪ ತಂಡವಾಗಿ ಸಮಾವೇಶ ಸ್ಥಳಕ್ಕೆ ಬಂದರು. ಇದರಿಂದ ರೈತಶಕ್ತಿ ಇಮ್ಮಡಿ ಗೊಳಿಸಿತು.
ಈ ಸಮಾವೇಶದಲ್ಲಿ ಮಾತನಾಡಿದ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು ಕೇಂದ್ರ ಸರ್ಕಾರಕ್ಕೆ ರೈತರ ಕೂಗು ಕೇಳುತ್ತಿಲ್ಲ ಎಂದು ಕಿಡಿಕಾರಿದರು.
ಅಲ್ಲದೆ ಶ್ರೀಮಂತರು ಬಂಡವಾಳ ಶಾಹಿಗಳು ಕಣ್ಣು ಸನ್ನೆಯಲ್ಲಿ ಸೂಚನೆ ನೀಡಿದರೆ ಸಾಕು ಕಾನೂನುಗಳು ಜಾರಿಯಾಗುತ್ತವೆ. ಸಾಲಮನ್ನ ವಾಗುತ್ತದೆ. ಇದು ಪ್ರಜಾ ಪ್ರಭುತ್ವ ಸರ್ಕಾರ ಎನ್ನುವುದು ನಾಚಿಕೆ ತರುವಂತ ವಿಚಾರ. ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ರೈತರು ಸ್ವಲ್ಪ ಬಿಸಿ ಮುಟ್ಟಿಸಿದರು ಎಚ್ಚೆತ್ತಿಲ್ಲ. ಈಗ ಹರಿಯಾಣ ಚುನಾವಣೆಯಲ್ಲಿ ಸರಿಯಾದ ಪಾಠವನ್ನೆ ಕಲಿಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.
ಪಂಜಾಬ್ ಹರಿಯಾಣ ರೈತರ ರೀತಿಯಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಹೋರಾಟ ನಡೆದರೆ ರೈತ ದ್ರೋಹಿ ನೀತಿಗಳನ್ನು ಬದಲಾಯಿಸಬಹುದು. ಇಲ್ಲದಿದ್ದರೆ ರೈತ ಕುಲವೇ ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ಸಂಘಟನೆಯ ಮುಖ್ಯಸ್ಥ ಜಗಜಿತ್ ಸಿಂಗ್ ದಲೆವಾಲ ಮಾತನಾಡಿ, ಇಂದಿನ ಸಮಾವೇಶವನ್ನು ತಪ್ಪಿಸಲು ಚುನಾವಣಾ ನೆಪದಲ್ಲಿ ಪೊಲೀಸರ ಬಲ ಪ್ರಯೋಗ ನಡೆಸಿದರು. ಆದರೆ, ರೈತಶಕ್ತಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಿ ಸಮಾವೇಶ ನಡೆಸುತ್ತಿದ್ದೇವೆ. ಇಡೀ ದೇಶದ ರೈತರು ನಮ್ಮ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಹರಿಯಾಣದ ಉಚ್ಚಾನದಲ್ಲಿ ನಡೆದ ರಾಷ್ಟ್ರೀಯ ರೈತ ಸಮಾವೇಶದಲ್ಲಿ ಹರಿಯಾಣ ರೈತ ಮುಖಂಡ ಅಭಿಮನ್ಯುಕೊಹಾರ್ ಲಕ್ವೀನ್ದರ್ ಸಿಂಗ್ ಸೇರಿದಂತೆ ಲಕ್ಷಾಂತರ ರೈತರು ಭಾಗವಹಿಸಿದ್ದರು. ಈ ವೇಳೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿ. ರೈತರ ಸಂಪೂರ್ಣ ಸಾಲಮನ್ನಾ. ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ.
ಬೆಳೆ ವಿಮೆ ಪದ್ಧತಿ ತಿದ್ದುಪಡಿ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬ ಇತ್ಯಾದಿ ಒತ್ತಾಯಗಳ ಬಗ್ಗೆ ಹೋರಾಟ ಪ್ರಬಲಗೊಳಿಸಲು ಎಲ್ಲ ರಾಜ್ಯಗಳ ರೈತ ಮುಖಂಡರು ತೀರ್ಮಾನಿಸಿದರು.