600ರಿಂದ 800 ಮಂದಿ ಅಧಿಕಾರಿಗಳಿಗಾಗಿ 1.07 ಲಕ್ಷ ನೌಕರರಿಗೆ ಅನ್ಯಾಯ ಮಾಡಲು ಹೊರಟಿರುವುದು ನ್ಯಾಯವೇ?
ಸರ್ಕಾರಿ ನೌಕರರ 6ನೇ ವೇತನ ವ್ಯವಸ್ಥೆಗೆ ಹೋಲಿಸಿದಾಗ ದರ್ಜೆ 1 ಮತ್ತು 2ರ ಸಾರಿಗೆ ನಿಗಮಗಳ ಅಧಿಕಾರಿ ವರ್ಗ ಸರ್ಕಾರಿ ನೌಕರರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚು ವೇತನ ಪಡೆಯುತ್ತಿದ್ದರು. ನಂತರದ ದರ್ಜೆ 3ರ ಮೇಲ್ವಿಚಾರಕ ವರ್ಗ ಸರ್ಕಾರಿ ನೌಕರರೊಡನೆ ಹೋಲಿಸಿದರೆ ಅಲ್ಪ ಪ್ರಮಾಣದಲ್ಲಿ ಕಡಿಮೆ ವೇತನ ಪಡೆಯುತ್ತಿದ್ದರು.
ಅದೇ ರೀತಿ ದರ್ಜೆ 3ರ ಕಾರ್ಮಿಕ ವರ್ಗ ಸರ್ಕಾರಿ ನೌಕರರಿಗಿಂತ ಭಾರೀ ಪ್ರಮಾಣದಲ್ಲಿ ಕಡಿಮೆ ವೇತನ ಪಡೆಯುತ್ತಿದ್ದಾರೆ. ಇನ್ನು 4ನೇ ದರ್ಜೆ ನೌಕರರ ಸ್ಥಿತಿ ಅಯೋಮಯ. ಸಮಾನ ವೇತನದ ಪ್ರಶ್ನೆ ಬಂದಾಗ ಅದಕ್ಕೆ ಏಕೈಕ ಮಾನದಂಡ ನೌಕರಿಗೆ ನಿಗದಿತ ವಿದ್ಯಾರ್ಹತೆ.
ತಾಂತ್ರಿಕ ಸಿಬ್ಬಂದಿಗಳಾದ ತಾಂತ್ರಿಕ ಸಹಾಯಕ ‘ಎ’ ಮತ್ತು ತಾಂತ್ರಿಕ ಸಹಾಯಕ ‘ಬಿ’ ಇವರಿಗೆ 10+2 ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಆದರೆ, ಅವರ ವೇತನ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವೇತನಕ್ಕಿಂತ ಕಡಿಮೆ. ಇನ್ನು ಸಹಾಯಕ ಕುಶಲಕರ್ಮಿಗಳ ವಿದ್ಯಾರ್ಹತೆ 10+3ಕ್ಕೆ ನಿಗದಿ ಮಾಡಲಾಗಿದೆ. ಇವರ ವೇತನ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವೇತನಕ್ಕೆ ಸರಿಸಮಾನ.
ಆದರೆ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವಿದ್ಯಾರ್ಹತೆ 10ನೇ ತರಗತಿ. ಆಗೆಯೇ ಅಟೆಂಡರ್ ಮತ್ತು ಭದ್ರತಾ ಸಿಬ್ಬಂದಿಗಳ ವಿದ್ಯಾರ್ಹತೆ 10ನೇ ತರಗತಿ. ಆದರೆ ಅವರ ವೇತನ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವೇತನಕ್ಕಿಂತ ಕಡಿಮೆ. ಆಗಿದ್ದರೆ ನಿಜವಾಗಿಯೂ ಅನ್ಯಾಯ ವಾಗಿರುವುದು ಯಾರಿಗೆ ಎಂಬುವುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.