ಶಿರಸಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರಲ್ಲಿ ಒಬ್ಬ ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿರುವ ಘಟನೆ ಶಿರಸಿ ಸಮೀಪ ಕಾನೂಗೋಡು ಬಳಿ ನಡೆದಿದೆ.
ಕಾನೂಗೋಡು ಸಮೀಪ ಸಂಸ್ಥೆಯ ಶಿವಮೊಗ್ಗ ವಿಭಾಗದ ಸಾಗರ ಘಟಕದ ಬಸ್ ಎಡಭಾಗದಲ್ಲೇ ಹೋಗುತ್ತಿದ್ದಾಗ ಎದುರಿನಿಂದ ಬಲಭಾಗಕ್ಕೆ ಏಕಾಏಕಿ ಬಂದ ಕಾರು ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ಅವಘಡಲ್ಲಿ ಕಾರು ಚಲಾಯಿಸುತ್ತಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ 54 ವರ್ಷದ ಚಂದ್ರಶೇಖರ್ ಪಲ್ಲೆ ಅವರು ಸಣ್ಣಪುಟ್ಟ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ಅಪಘಾತ ಸಂಭವಿಸಿದ ಕಾರಿನಲ್ಲೇ ಇದ್ದ ಕಾರು ಮಾಲೀಕ ಚಂದ್ರಶೇಖರ್ ಪಲ್ಲೆ ಅವರ ಪತ್ನಿ ಸುಜಾತ (47) ಅವರಿಗೂ ಸಣ್ಣಪುಟ್ಟ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ವಿವರ: ಸಾಗರ ಘಟಕದ ಸಾರಿಗೆ ಬಸ್ ಇಂದು ಮಧ್ಯಾಹ್ನ ಸುಮಾರು 1:15ಎಲ್ಲಿ ಶಿರಸಿ ಕಾನೂಗೋಡು ಸಮೀಪ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಬಸ್‌ಗೆ ಡಿಕ್ಕಿಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಗಂಡ- ಹೆಂಡತಿ ಇಬ್ಬರಿಗೂ ಪೆಟ್ಟಾಗಿದೆ.
ಬಳಿಕ ಡ್ರೈವಿಂಗ್ ನಲ್ಲಿದ್ದ ಚಂದ್ರಶೇಖರ್ ಪಲ್ಲೆ ಮೃತಾಪಟ್ಟಿದ್ದಾರೆ. ಈ ಇಬ್ಬರು ಸಹ ಡಯಾಲಿಸಿಸ್‌ಗೆ ಶಿರಸಿ ಆಸ್ಪತ್ರೆಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಈ ಅಪಘಾತದಲ್ಲಿ ಬಸ್ ಚಾಲಕನ ತಪ್ಪಿಲ್ಲ ಬಸ್ಸು ಸಂಪೂರ್ಣ ಎಡ ಭಾಗದಲ್ಲೇ ಚಲಿಸುತ್ತಿತ್ತು ಅಪಘಾತ ಸಂಭವಿಸುತ್ತದೆ ಎಂದು ಚಾಲಕ ರೋಡ್ ಬಿಟ್ಟು ಎಡಭಾಗಕ್ಕೆ ಬಸ್ ತೆಗೆದುಕೊಂಡರೂ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಕಾರು ಚಾಲಕ ಚಂದ್ರಶೇಖರ್ ಪಲ್ಲೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಡ್ರೈವಿಂಗ್ ಮಾಡಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಇತ್ತ ಕಾರು ಚಾಲನೆ ಮಾಡಿಕೊಂಡು ಹೋಗುವುದು ಬೇಡ ಎಂದು ಪತ್ನಿ ಹೇಳಿದರೂ ಪರವಾಗಿಲ್ಲ ನಿಧಾನಕ್ಕೆ ಹೋಗೋಣ ಎಂದು ಕಾರು ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.
ಈ ಸಂಬಂಧ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.