ಬನ್ನೂರು: ಮೈಸೂರು-ಮಳವಳ್ಳಿ ಮುಖ್ಯರಸ್ತೆ ದಾಟುತ್ತಿದ್ದ ವೇಳೆ ಎರಡು ವರ್ಷದ ಹೆಣ್ಣು ಚಿರತೆ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬನ್ನೂರು ಹೋಬಳಿಯ ಬಸವನಹಳ್ಳಿ- ಚಾಮನಹಳ್ಳಿ ಮಧ್ಯೆ ನಡೆದಿದೆ.
ಒಂದು ತಾಯಿ ಎರಡು ಮರಿ ಚಿರತೆಗಳು ಗುರುವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ತಾಯಿ ಚಿರತೆ ಮತ್ತು ಇನ್ನೊಂದು ಮರಿ ಚಿರತೆ ಓಡಿಹೋಗಿದ್ದು, ಈ ಹೆಣ್ಣು ಚಿರತೆ ಬೈಕ್‌ಗೆ ಸಿಕ್ಕಿ ಮೃತಪಟ್ಟಿದೆ. ಈ ವೇಳೆ ಗಾಬರಿಗೊಂಡ ಬೆಂಡರವಾಡಿ ಗ್ರಾಮದ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಕೂಡಲೇ ಅವರನ್ನು ಬನ್ನೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಬೈಕ್ ಸವಾರರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅರಣ್ಯ ಅಧಿಕಾರಿ ಮಂಜುನಾಥ್ ಅವರು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ, ಹೆಣ್ಣು ಚಿರತೆ ಸಾವದಪ್ಪಿದ್ದು, ತಮ್ಮ ವಶಕ್ಕೆ ಪಡೆದು ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಬನ್ನೂರು ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಅರಣ್ಯ ಅಧಿಕಾರಿಗಳು ಈ ಚಿರತೆಗಳನ್ನು ಸೆರೆ ಹಿಡಿದು ದಟ್ಟಾರಣ್ಯಕ್ಕೆ ಬಿಡಬೇಕು ಎಂದು ಬಸವನಹಳ್ಳಿ ಗ್ರಾಮದ ಮಹೇಶ್ ಎಂಬುವರು ಒತ್ತಾಯಿಸಿದ್ದಾರೆ.