ಬೆಂಗಳೂರು: ನಿವೃತ್ತ ನೌಕರರ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ನಾಳೆ (ಸೆ.27) ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಸಂಘ, ಚಿಕ್ಕಬಳ್ಳಾಪುರ ವತಿಯಿಂದ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಗೆ ನೀಡುವ ಅವರು, ಸೆಪ್ಟಂಬರ್ 27 ರಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಪಿಎಸ್ ಪಿಂಚಣಿದಾರರ ನ್ಯಾಯಯುತ ಪಿಂಚಣಿ ಹಕ್ಕಿಗಾಗಿ ನಮ್ಮ ಹೋರಾಟವನ್ನು ಪ್ರಾರಂಭಿಸಿ ದಶಕಗಳೇ ಕಳೆದಿದ್ದು, ಈ ವರವಿಗೂ ಯಾವುದೇ ಪ್ರಗತಿ ಕಾಣದೇ ಇರುವುದು ಅತ್ಯಂತ ಶೋಚನೀಯ. ದೇಶಾದ್ಯಂತ ಸುಮಾರು 1700 ಕಂಪನಿಗಳ ಅಂದರೆ, ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಕಾರ್ಖಾನೆಗಳ ಲಕ್ಷಾಂತರ ನಿವೃತ್ತ ನೌಕರರು ತಮ್ಮ ಬದುಕಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದರೂ ಸಹ ಯಶಸ್ಸು ಮಾತ್ರ “ಮರೀಚಿಕೆ!!!”. ದುರಾದೃಷ್ಟವೋ ಏನೋ ಅಮಾಯಕ ಜೀವಗಳು ಇಳಿವಯಸ್ಸಿನಲ್ಲಿ ನೆಲೆ ಕಾಣದೆ ಕಮರಿ ಹೋಗುತ್ತಿವೆ.
ಇನ್ನು ಇಪಿಎಫ್ಒ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿ, ಸೆ.27 ರಂದು “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮವನ್ನು ದೇಶಾದ್ಯಂತ ಇರುವ ಎಲ್ಲ ಪಿಎಫ್ ಕಚೇರಿ ಆವರಣದಲ್ಲಿ ನಡೆಸುತ್ತಿದ್ದು, ನಿವೃತ್ತರ ಎಲ್ಲ ಕುಂದುಕೊರತೆಗಳನ್ನು ಈಡೇರಿಸುತ್ತೇವೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಈ ರೀತಿಯ ಪ್ರಕಟಣೆ ಹೊರಡಿಸುತ್ತಲೇ ಇರುತ್ತಾರೆ ಆದರೆ ಈವರೆಗೂ ನಿವೃತ್ತ ಯಾವುದೇ ಸಮಸ್ಯೆ ಬಗೆಹರಿದಿಲ್ಲ ಎಂದು ಕಿಡಿಕಾರಿದ್ದಾರೆ.
ನವೆಂಬರ್ 04, 2022 ರಂದು ಸರ್ವೋಚ್ಚ ನ್ಯಾಯಾಲಯವು ಇಪಿಎಸ್ ನಿವೃತ್ತರ ಪರ ನೀಡಿರುವ ತೀರ್ಪನ್ನು ಇನ್ನೂ ಏಕೆ? ಅನುಷ್ಠಾನಗೊಳಿಸಿಲ್ಲ!!!. ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆಯನ್ನು ಕೇಂದ್ರ ಸಂಪುಟ ಸಭೆಯಲ್ಲಿ ಮಂಡಿಸಿ, ಬಗೆಹರಿಸಿಕೊಡುತ್ತೇವೆ ಎಂದು ಕೇಂದ್ರ ಕಾರ್ಮಿಕ ಸಚಿವರು ತಿಳಿಸಿ 20 ದಿನ ಕಳೆದರೂ ಇನ್ನೂ ಏಕೆ? ಬಗೆಹರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಎಲ್ಲ ಪ್ರಶ್ನೆಗಳಿಗೆ ಇಪಿಎಫ್ಒ ಅಧಿಕಾರಿಗಳು ಉತ್ತರಿಸಬೇಕು. ಏನೇ ಆಗಲಿ ಯಾರು ಧೃತಿಗೆಡಬಾರದು. ಜುಲೈ 31 ಹಾಗೂ ಆಗಸ್ಟ್ 1 ರಂದು ನವದೆಹಲಿಯಲ್ಲಿ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ಜರುಗಿದ ಇಪಿಎಸ್ ನಿವೃತ್ತರ ಬೃಹತ್ ಪ್ರತಿಭಟನೆಗೆ ಸಂಬಂಧಿಸಿದಂತೆ ನಿವೃತ್ತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮದ ಬಗ್ಗೆ ಆಗ್ರಹಿಸಿ, ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ (minister for labour & employment) ಸಚಿವ ಮನ್ಸೂಖ್ ಮಾಂಡವಿಯ ಅವರಿಗೆ ಉಲ್ಲೇಖಿಸಿರುವ ಮನವಿ ಪತ್ರವನ್ನು ನೀಡಲಾಗುವುದು.
2014ಕ್ಕೆ ಮೊದಲು ಅಥವಾ ನಂತರ ನಿವೃತ್ತರಾದವರು ಎಂದು ತಾರತಮ್ಯ ಮಾಡದೆ ಎಲ್ಲ ನಿವೃತ್ತರಿಗೂ ನ್ಯಾಯ ಸಮ್ಮತ ಪಿಂಚಣಿ ನೀಡಬೇಕು. ನಮ್ಮ ಎಲ್ಲ ಮನವಿ ಪತ್ರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಉತ್ತರಿಸಬೇಕು!!!. ಎಲ್ಲ ಇಪಿಎಸ್ ನಿವೃತ್ತರು ಎಚ್ಚೆತ್ತುಕೊಂಡು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಹಾಗೂ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಹಾಗೂ ಇತರೆ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ನಮ್ಮ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 27, 2024 ರಂದು ಬೆಳಗ್ಗೆ 11 ಗಂಟೆಗೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಪ್ರತಿಭಟನೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕೆಂದು ತಿಳಿಸಿದ್ದಾರೆ.