ಕೃಷ್ಣರಾಜಪೇಟೆ: ಸ್ವಚ್ಛ ಭಾರತ ಅಭಿಯಾನ ಹಾಗೂ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಕೃಷ್ಣರಾಜಪೇಟೆ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ನ್ಯಾಯಾಧೀಶರು ಹಾಗೂ ವಕೀಲರು ಕೈಯಲ್ಲಿ ಪೊರಕೆಗಳು ಹಾಗೂ ಕುಡುಗೋಲು ಹಿಡಿದು ಕಸ ಗುಡಿಸಿ, ಗಿಡಗೆಂಟೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.
ಕೈಯಲ್ಲಿ ಪೊರಕೆಗಳು ಹಾಗೂ ಕುಡುಗೋಲುಗಳನ್ನು ಹಿಡಿದು ಗಿಡಗಂಟೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ, ನ್ಯಾಯಾಲಯದ ಆವರಣದಲ್ಲಿ ಬಿದ್ದಿದ್ದ ಕಸವನ್ನು ಗುಡಿಸಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಹಿರಿಯ ಶ್ರೇಣಿ ನ್ಯಾಯಾಧೀಶ ಸುಧೀರ್ ಮತ್ತು ಅಪರ ಸಿವಿಲ್ ನ್ಯಾಯಾಧೀಶರಾದ ದೇವರಾಜು, ಶಕುಂತಲಾ ಮತ್ತು ಅರ್ಪಿತ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂಬ ಸಂದೇಶ ಸಾರಿದರು.
ಇನ್ನು ನಾವು ವಾಸ ಮಾಡುವ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು ರೋಗರುಜಿನೆಗಳು ಬರದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ ಹಿರಿಯ ಶ್ರೇಣಿ ನ್ಯಾಯಾಧೀಶ ಸುಧೀರ್, ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸುವ ಮೂಲಕ ಪರಿಸರ ಜಾಗೃತಿ ಮೆರೆಯಬೇಕು. ಮನೆಗೆರಡು ಮರ ಊರಿಗೊಂದು ತೋಪು ಎಂಬ ಹಿರಿಯರ ನಾಣ್ಣುಡಿಯನ್ನು ನನಸು ಮಾಡಿ ಸಾಕಾರಗೊಳಿಸುವ ದಿಕ್ಕಿನಲ್ಲಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ರವಿಶಂಕರ್, ಪ್ರಧಾನ ಕಾರ್ಯದರ್ಶಿ ರಾಜೇಗೌಡ ಹಾಗೂ ಪುರಸಭೆ ಮುಖ್ಯ ಅಧಿಕಾರಿ ರಾಜು ಕೆ.ವಠಾರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ವಲಯ ಅರಣ್ಯಾಧಿಕಾರಿ ಅನಿತಾ ಪ್ರವೀಣ್, ಹಿರಿಯ ಆರೋಗ್ಯ ಪರಿವೀಕ್ಷಕ ಅಶೋಕ್, ಪರಿಸರ ಇಂಜಿನಿಯರ್ ಅರ್ಚನಾ ಆರಾಧ್ಯ, ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಿ ಗಿಡಮರಗಳನ್ನು ನೆಟ್ಟು ಸಂಭ್ರಮಿಸಿದರು.
ವರದಿ ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ