ತಿ.ನರಸೀಪುರ: ಜಮೀನಿನಲ್ಲಿ ಚಿರತೆ ಒಂದು ಮೇಕೆ ಮರಿಯನ್ನು ಕೊಂದು ಅರೆಬರೆ ತಿಂದು ಬಿಟ್ಟು ಹೋಗಿರುವ ಘಟನೆ ತಾಲೂಕಿನ ಕೇತುಪುರ ಗ್ರಾಮದ ಸಮೀಪ ನಡೆದಿದೆ.
ತಾಲೂಕಿನ ಸೋಸಲೆ ಹೋಬಳಿಯ ಕೇತುಪುರ ಹಾಗೂ ಉಕ್ಕಲಗೆರೆ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಸಮೀಪ ಮಧ್ಯ ಇರುವ ಚಿನ್ನಸ್ವಾಮಿ ಎಂಬುವರ ಜಮೀನಿನ ಬಳಿ ಶುಕ್ರವಾರ ಸಂಜೆ ಚಿನ್ನಸ್ವಾಮಿ ಕುಟುಂಬದವರ ಎದುರೆ 15ರಿಂದ 20 ಸಾವಿರ ರೂ. ಮೌಲ್ಯದ ಮೇಕೆ ಮರಿಯನ್ನು ಚಿರತೆ ಎಳೆದುಕೊಂಡು ಹೋಗಿದೆ. ಅದನ್ನು ಕಂಡು ಕಿರುಚಿ ಕೊಂಡಾಗ ಅರೆಬರೆ ತಿಂದು ಓಡಿಹೋಗಿದೆ.
ಒಂದು ವರ್ಷದ ಹಿಂದೆ ಉಕ್ಕಲಗೆರೆಯ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಸಮೀಪ ಎಂ.ಎಲ್.ಹುಂಡಿ ಗ್ರಾಮದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮಂಜುನಾಥ್ ಮೇಲೆ ದಾಳಿ ಮಾಡಿ ಚಿರತೆ ಕೊಂದು ಹಾಕಿತ್ತು. ಆ ಘಟನೆ ನಡೆದ ಸಮೀಪದ ಸ್ಥಳದಲ್ಲಿ ಮತ್ತೆ ಈ ಘಟನೆ ಜರುಗಿರುವುದು ಸುತ್ತಮುತ್ತಲ ಗ್ರಾಮಗಳ ಜನತೆಯಲ್ಲಿ ಆತಂಕ ಮೂಡಿಸಿದೆ.
ಇನ್ನು ಇಟ್ಟಿಗೆ ಕೂಲಿ ಕಾರ್ಮಿಕರು ಓಡಾಡಲು, ರೈತರು ದನಕರುಗಳನ್ನು ಮೇಯಿಸಲು ಜಮೀನಿಗೆ ಹೋಗುವುದು ಕಷ್ಟಕರವಾಗಿದೆ ಎಂದು ರೈತ ಸಂಘದ ಮುಖಂಡ ಕಳ್ಳಿಪುರ ಮಹದೇವಸ್ವಾಮಿ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಉಕ್ಕಲಗೆರೆಯ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಬಳಿ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ ಎನ್ನುತ್ತಾರೆ. ಆದರೆ ಅಲ್ಲಿ ಯಾರೂ ಇರುವುದಿಲ್ಲ ಎಂದು ಮಹದೇವಸ್ವಾಮಿ ದೂರಿದ್ದಾರೆ.
ಅರಣ್ಯ ಇಲಾಖೆಯ ಮಂಜುನಾಥ್ ಮಾತನಾಡಿ, ಲೋಕೇಶ್ ಹಾಗೂ ಸುಂದರರಾಜ್ ನೇತೃತ್ವದ ತಂಡ ಶುಕ್ರವಾರ ರಾತ್ರಿಯೇ ಚಿನ್ನಸ್ವಾಮಿ ಯವರ ಜಮೀನಿಗೆ ಭೇಟಿ ನೀಡಿ ಬೋನು ಇಟ್ಟಿದೆ ಎಂದು ತಿಳಿಸಿದ್ದಾರೆ.
ಇನ್ನು ಚಿನ್ನಸ್ವಾಮಿಯವರು ಕೇತುಪುರ ಗ್ರಾಮದಿಂದ ಬೆಟ್ಟದ ಸಮೀಪಕ್ಕೆ ಹೊಂದಿಕೊಂಡಿರುವಂತೆ ಮನೆ ಮಾಡಿಕೊಂಡಿರುವುದರಿಂದ ಜಾಗೃತರಾಗಿ ಸ್ವಲ್ಪ ದಿನಗಳ ಮಟ್ಟಿಗೆ ಗ್ರಾಮದಲ್ಲಿ ವಾಸಿಸುವಂತೆ ಸಲಹೆ ನೀಡಲಾಗಿದೆ ಎಂದರು.