ಬೆಂಗಳೂರು: ಸಸ್ಯಕಾಶಿ ಲಾಲ್ಬಾಗ್ನಲ್ಲಿ ಇಪಿಎಸ್ ಪಿಂಚಣಿದಾರರ 81ನೇ ಮಾಸಿಕ ಸಭೆ ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.
ಸಭೆಗೆ ನೂರಾರು ನಿವೃತ್ತರು ಆಗಮಿಸಿ, ಸುಂದರ ಪರಿಸರದಲ್ಲಿ ಲಾಲ್ ಬಾಗ್ ನಡಿಗೆದಾರರ ಜೊತೆ ಹೆಜ್ಜೆ ಹಾಕುತ್ತಾ, ತುಂತುರು ಮಳೆಯ ನಡುವೆ, ತಮ್ಮ ಹಳೆಯ ಸಹಪಾಟಿಗಳನ್ನು ಕಂಡೊಡನೆ ಎಲ್ಲಿಲ್ಲದ ನವೊಲ್ಲಾಸದಿಂದ, ಉಭಯ ಕುಶಲೊಪರಿ ವಿಚಾರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ, ಡೋಲಪ್ಪನವರು ಎಲ್ಲ ಇಪಿಎಸ್ ನಿವೃತ್ತರು, ಸಂಘದ ಪದಾಧಿಕಾರಿಗಳು ಹಾಗೂ ಚಿಕ್ಕಬಳ್ಳಾಪುರದ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರನ್ನು ಸ್ವಾಗತಿಸಿ, ನಮ್ಮ ಹೋರಾಟದ ಸಂಪೂರ್ಣ ಚಿತ್ರಣವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.
ಸೆ.27-2024 ರಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಇಪಿಎಸ್ ನಿವೃತ್ತರು ನಡೆಸಿದ ಅಭೂತಪೂರ್ವ ಪ್ರತಿಭಟನೆ ಬಗ್ಗೆ ಕಾರ್ಯಾಧ್ಯಕ್ಷ ನಂಜುಂಡೇಗೌಡ ಸಭೆಯಲ್ಲಿ ಪ್ರಸ್ತಾಪಿಸಿದಾಗ, ನೆರೆದಿದ್ದ ನಿವೃತ್ತರೆಲ್ಲರೂ ಹರ್ಷ ವ್ಯಕ್ತಪಡಿಸಿದರು.
ಮುಂದುವರಿದಂತೆ ಇದೆ ಅಕ್ಟೋಬರ್ 13ರ ಭಾನುವಾರದಂದು ಬೆಳಗ್ಗೆ 10 ಗಂಟೆಗೆ ನಮ್ಮ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯು ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜರುಗಲಿದ್ದು, ಶ್ರೀ ಸೌಮ್ಯನಾಥ ಸ್ವಾಮೀಜಿಯವರ ಆಶೀರ್ವಚನಗಳೊಂದಿಗೆ ಪ್ರಾರಂಭವಾಗಲಿದೆ.
ಹಿರಿಯ ವಕೀಲ ವಿ.ಎಸ್. ನಾಯಕ್ ಅವರು ಉದ್ಘಾಟನಾ ಭಾಷಣ ಮಾಡಲಿದ್ದು, ನ್ಯಾಯಾಲಯ ಇಪಿಎಸ್ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಪರಿಣಿತರಿದ್ದು, ಸಾವಿರಾರು ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, ಈ ವಾರ್ಷಿಕ ಮಹಾಸಭೆಗೆ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ನಂಜುಂಡೇಗೌಡ ಮನವಿ ಮಾಡಿದರು,
ಅಶೋಕ ರಾವುತ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಇಪಿಎಸ್ ಚಣಿದಾರರ ಹೋರಾಟ ಅಂತಿಮ ಘಟ್ಟ ತಲುಪಿದ್ದು, ನಮ್ಮ ಮುಖಂಡರು ಕೇಂದ್ರ ವಿತ್ತ ಸಚಿವರು ಹಾಗೂ ಕಾರ್ಮಿಕ ಖಾತೆ ಸಚಿವರೊಂದಿಗೆ ನಡೆಸಿರುವ ಮಾತುಕತೆ ಫಲಪ್ರದವಾಗುವ ಸಂಭವವಿದೆ ಎಂದು ಉಪಾಧ್ಯಕ್ಷ ಆರ್. ಸುಬ್ಬಣ್ಣ ಸಭೆಯಲ್ಲಿ ಪ್ರಸ್ತಾಪಿಸಿದರು.
ಇಪಿಎಸ್ ಪಿಂಚಿಣಿದಾರರು ತಮ್ಮ ಅರ್ಜಿಯನ್ನು ಪಿಎಫ್ ಕಚೇರಿಗೆ ಅಂತರ್ಜಾಲದ ಮೂಲಕ ಸಲ್ಲಿಸಿದ್ದು, ತಮ್ಮ ಸೇವಾ ವಿವರ, ನೀಡಿರುವ ದೇಣಿಗೆ, ಜಂಟಿ ಆಯ್ಕೆ ಪತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಅಪೂರ್ಣ ಮಾಹಿತಿ ಇದ್ದಲ್ಲಿ, ಅದನ್ನು ಸರಿಪಡಿಸಲು ಅವಕಾಶವಿದ್ದು, ಈ ಬಗ್ಗೆ ನಿವೃತ್ತರು ಗೊಂದಲಕ್ಕೀಡಾಗುವುದು ಬೇಡ ಎಂದು ಸಲಹೆ ನೀಡಿದರು.
ನಮ್ಮ ಸಂಘದ ಪದಾಧಿಕಾರಿಗಳಾದ ರುಕ್ಮಿಶ್ ಹಾಗೂ ನಾಗರಾಜು ಅವರು ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಡೋಲಪ್ಪನವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು. ಸಭೆಯ ನಿರ್ಣಯಗಳ ಬಗ್ಗೆ ಸದಸ್ಯರು ತಮ್ಮ ಹರ್ಷ ವ್ಯಕ್ತಪಡಿಸಿದರು.