ಬನ್ನೂರು: ಪರಿಶಿಷ್ಟ ಸಮುದಾಯದವರು ನಿಧನರಾದರೆ ಸ್ಮಶಾನಕ್ಕೆ ಹೋಗಲು ರಸ್ತೆ ಇಲ್ಲದೆ ಪರದಾಡುವ ಸ್ಥಿತಿ ಪ್ರತಿಬಾರಿಯೂ ನಿರ್ಮಾಣವಾಗುತ್ತಿದೆ. ಹೀಗಾಗಿ ನಮಗೆ ಸ್ಮಶಾನಕ್ಕೆ ಹೋಗಲಯ ಶಾಶ್ವತ ರಸ್ತೆ ಬೇಕು ಎಂದು ಆಗ್ರಹಿಸಿ ಪಟ್ಟಣದ ಕಾವೇರಿ ಸರ್ಕಲ್ ಬಳಿ ಮೈಸೂರು- ಮಳವಳ್ಳಿ ಮುಖ್ಯರಸ್ತೆಯಲ್ಲೇ ಶವವಿಟ್ಟು ರಸ್ತೆ ತಡೆದು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಪರಿಶಿಷ್ಟ ಸಮುದಾಯದ ವ್ಯಕ್ತಿಗಳು ನಿಧನರಾದಾಗ ಅವರ ಅಂತ್ಯಕ್ರಿಯೆ ಮಾಡಲು ಸ್ಮಶಾನಕ್ಕೆ ಹೋಗುವುದಕ್ಕೆ ರಸ್ತೆ ರಸ್ತೆ ಇಲ್ಲ. ಇದರಿಂದ ಮೂಲಭೂತ ಸೌಕರ್ಯಗಳಲ್ಲೊಂದಾದ ರಸ್ತೆಯನ್ನೇ ಕಲ್ಪಿಸದೆ ಜಿಲ್ಲಾಡಳಿತ ಚಿರನಿದ್ರೆಗೆ ಜಾರಿದೆ ಎಂದು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯ ಕಾವೇರಿ ಸರ್ಕಲ್‌ನಲ್ಲಿ ಶವ ಹೂಳುತ್ತೇವೆ ಎಂದು ಅಂತ್ಯಕ್ರಿಯೆಗೆ ಮುಂದಾದರು.
ಪ್ರತಿಭಟನೆ ಕುರಿತು ಪುರಸಭಾ ಸದಸ್ಯ ಶಿವಣ್ಣ ಮಾತನಾಡಿ, 40 ವರ್ಷದಿಂದ ಸ್ಮಶಾನ ರಸ್ತೆಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ನಾವು ಪಾರ್ಥಿವ ಶರೀರವನ್ನು ಹೊತ್ತುಕೊಂಡು ಖಾಸಗಿಯವರ ಜಮೀನಿನ ಮೇಲೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ಎಷ್ಟೋ ಬಾರಿ ಜಮೀನು ಮಾಲೀಕರಿಗೂ ನಮಗೂ ಗಲಾಟೆಯಾಗಿದೆ. ನಾವು ಸತ್ತವರನ್ನು ಹೂಳಲು ತುಂಬಾ ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ಹೇಳಿದರು.
ಇನ್ನು ಈ ಅಮಾನವೀಯ ಪರಿಸ್ಥಿತಿ ಎದುರಾಗಿದ್ದು, ಈ ಬಗ್ಗೆ ಬಿಜೆಪಿ ಸರಕಾರದ ಎಲ್ಲ ಮಂತ್ರಿಗಳಿಗೂ ಸಹ ಮನವಿ ಮಾಡಿದ್ದೆವು. ಆದರೂ ಪ್ರಯೋಜನವಾಗಲಿಲ್ಲ. ಪ್ರಸ್ತುತ ಸಚಿವ ಮಹದೇವಪ್ಪ ಅವರಿಗೆ ಮನವಿ ಪತ್ರ ನೀಡಿದ ಮೇಲೆ ಅವರು 20 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ.
ಆದರೆ, ಅಧಿಕಾರಿಗಳು ಜಮೀನಿನ ಮಾಲೀಕರಿಗೆ ನೋಟಿಸ್ ಕೊಟ್ಟು, ಅವರಿಗೆ ಹಣ ಬಿಡುಗಡೆ ಮಾಡಿ ಜಮೀನನ್ನು ವಶಕ್ಕೆ ಪಡೆದು ರಸ್ತೆ ನಿರ್ಮಾಣ ಮಾಡದೆ ದಲಿತರೆಂಬ ಕಾರಣಕ್ಕಾಗಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಿಂದ ಸುಮಾರು 2 ಗಂಟೆಗೋ ಹೆಚ್ಚು ಕಾಲ ರಸ್ತೆಯಲ್ಲಿ ಕಿಲೋಮೀಟರು ಗಟ್ಟಲೆ ವಾಹನಗಳು ನಿಂತಿಲೆ ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.