ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನಿವೃತ್ತ ಅಧಿಕಾರಿಗಳು ಮತ್ತು ನೌಕರರಿಗೆ ಬರಬೇಕಿರುವ 2020 ಜನವರಿ 1ರಿಂದ ಹೆಚ್ಚಳವಾಗಿರುವ ವೇತನ ಹಿಂಬಾಕಿ ಒಂದು ವಾರದೊಳಗೆ ಎಲ್ಲ ನಿವೃತ್ತ ಬ್ಯಾಂಕ್ ಖಾತೆ ಸೇರಲಿದೆ.
ಕಳೆದ ಒಂದೂವರೆ ವರ್ಷದಿಂದಲೂ ಸರ್ಕಾರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಾರಿಗೆ ಆಡಳಿತ ಮಂಡಳಿಗಳಿಗೆ ನೌಕರರ ಸಂಘಟನೆಗಳು 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸುತ್ತಲೇ ಬಂದಿದ್ದವು. ಈ ಹಿನ್ನೆಲೆಯಲ್ಲಿ ನಿವೃತ್ತ ನೌಕರರಿಗೆ ಅರಿಯರ್ಸ್ ಕೊಡುವುದಕ್ಕೆ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸಚಿವ ರಾಮಲಿಂಗಾರೆಡ್ಡಿ ಅವರು 1.1.2020ರ ವೇತನ ಅರಿಯರ್ಸ್ ನಿವೃತ್ತ ನೌಕರರಿಗೂ ಸಹ ಪರಿಷ್ಕರಣೆ ಮಾಡಲು ಒಪ್ಪಿದ್ದು ತ್ವರಿತವಾಗಿ ಆದೇಶವನ್ನು ಹೊರಡಿಸಲಾಗುವುದೆಂದು ಈ ಹಿಂದಿನಿಂದಲೂ ಆಶ್ವಾಸನೆ ನೀಡುತ್ತಲೇ ಬಂದಿದ್ದರು. ಆದರೆ, ಇಲ್ಲಿಯವರೆಗೂ ಕೊಡುವುದಕ್ಕೆ ಸಾಧ್ಯವಾಗಿರಲಿಲ್ಲ.
ಈ ನಡುವೆ ಹಾಲಿ ಸೇವೆಯಲ್ಲಿರುವ ನೌಕರರಿಗೆ ಅರಿಯರ್ಸ್ ಕೊಡುವ ಬಗ್ಗೆ ಯಾವುದೆ ಮಾಹಿತಿ ಹೊರಬಿದ್ದಿಲ್ಲ. ಆದರೆ, 2020ರ ಜನವರಿ 1ರಿಂದ ಶೇ.15ರಷ್ಟು ವೇತನ ಹೆಚ್ಚಳವಾಗಿದ್ದು ಅಂದಿನಿಂದಲೇ ಈ ವೇತನ ಹೆಚ್ಚಳದ ಹಿಂಬಾಕಿಯನ್ನು ಕೊಡಲಾಗುತ್ತಿದೆ. ನಿವೃತ್ತರಾದ ನೌಕರರು ಮತ್ತು ಅಧಿಕಾರಿಗಳಿಗೆ ಅವರು ನಿವೃತ್ತಿ ಹೊಂದಿದ ಇಂದಿನ ದಿನದವರೆಗೂ ಅದು ಜಮೆಯಾಗಲಿದೆ.
ಈ ಹಿಂದೆಯೇ ಈ 2020ರ ವೇತನ ಹೆಚ್ಚಳದ ಶೇ.15ರಷ್ಟು ಅರಿಯರ್ಸ್ ಕೊಡದೆ ಮತ್ತೆ 2024ರ ವೇತನ ಹೆಚ್ಚಳಕ್ಕೆ ಮುಂದಾದರೆ ನಾವು ಬಿಡುವುದಿಲ್ಲ ಎಂದು ಬಹುತೇಕ ಎಲ್ಲ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದರು. ಇದರ ಜತೆಗೆ ವೇತನ ಹೆಚ್ಚಳದ ಸೌಲಭ್ಯವನ್ನು ಈವರೆಗೂ ಪಡೆಯದ 2020 ಜನವರಿ 1ರಿಂದ 2023 ಫೆಬ್ರವರಿ 28ರ ನಡುವೆ ನಿವೃತ್ತ ನೌಕರರು ಮತ್ತು ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗುವುದಕ್ಕೂ ತೆರೆ ಮರೆಯಲ್ಲಿ ಮಾಹಿತಿ ಕಲೆಹಾಕುತ್ತಿದ್ದರು.
ಆದರೆ, ಅದಕ್ಕೆಲ್ಲ ಪೂರ್ಣ ವಿರಾಮ ಹೇಳುವುದಕ್ಕೆ ನಾಲ್ಕೂ ನಿಗಮಗಳ ಆಡಳಿತ ಮಂಡಳಿ ನಿರ್ಧಿಸಿದ್ದು, ಈ ನಿಟ್ಟಿನಲ್ಲಿ ಒಂದು ವಾರದೊಳಗೆ ಎಲ್ಲ ನಿವೃತ್ತ ನೌಕರರಿಗೂ ಅರಿಯರ್ಸ್ ನೀಡಲಿದೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಮಾಡಿದ ಎಡವಟ್ಟಿನಿಂದ ಇಂದಿನ ಕಾಂಗ್ರೆಸ್ ಸರ್ಕಾರ ಕೂಡ ಸಾರಿಗೆ ಅಧಿಕಾರಿಗಳು ಮತ್ತು ನೌಕರರಿಗೆ ಕಾಲ ಕಾಲಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಹಿಂದೆ ಬೀಳುತ್ತಿದ್ದು, ಇದು ಸಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ.