- ತಡರಾತ್ರಿ 2.30ರಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗಟ್ಟಿದ ಪೊಲೀಸರು
- ಬುಧವಾರ ರಾತ್ರಿ 10ಗಂಟೆ ಸುಮಾರಿಗೆ ಬಂಧಿಸಿದ ತಮಿಳುನಾಡಿನ ವಿಳ್ಳುಪುರಂ ಠಾಣೆ ಪೊಲೀಸರು
ರಾಮನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ರಾಮನಗರ ವಿಭಾಗದ ಚನ್ನಪಟ್ಟಣ ಘಟಕದ ನಿರ್ವಾಹಕನೊಬ್ಬ ತಂಬಾಕು ಪಾಕೆಟ್‌ಗಳನ್ನು ಬಸ್ಸಿನಲ್ಲಿ ಸಾಗಿಸಿದ್ದ ಆರೋಪದಡಿ ತಮಿಳುನಾಡು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬುಧವಾರ ರಾತ್ರಿ ಸುಮಾರು 10ಗಂಟೆಯಲ್ಲಿ ಚನ್ನಪಟ್ಟಣ ಘಟಕದ ಚಾಲಕ ಕಂ ನಿರ್ವಾಹಕ ಎಸ್.ಎಂ.ಚಂದ್ರಶೇಖರ್‌ನನ್ನು ವಿಳ್ಳುಪುರಂನಲ್ಲಿ ಬಂಧಿಸಿದ ವಿಳ್ಳುಪುರಂ ಪೊಲೀಸರು ತಡೆರಾತ್ರಿ 2.30ರ ಸುಮಾರಿಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಬಳಿಕ ಜೈಲಿಗೆ ಕಳಿಸಿದ್ದಾರೆ.
ರಾಮನಗರ ವಿಭಾಗದ ಚನ್ನಪಟ್ಟಣ ಘಟಕದಿಂದ ತಮಿಳುನಾಡಿನ ವಿಳ್ಳುಪುರಂಗೆ ಕಾರ್ಯಾಚರಣೆ ಮಾಡುವ ವಾಹನದ ನಿರ್ವಾಹಕ ಚಂದ್ರಶೇಖರ್ ಕಳೆದ ಮೂರು ದಿನದ ಹಿಂದೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ 60 ರಿಂದ 70 ಸಾವಿರ ರೂ. ಮೌಲ್ಯದ ತಂಬಾಕು ಪಾಕೆಟ್‌ಗಳನ್ನು ಬಸ್ಸಿನಲ್ಲಿ ಚನ್ನಪಟ್ಟಣದಿಂದಲೇ ಪ್ಯಾಕ್ ಮಾಡಿಸಿಕೊಂಡು ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.
ಈ ಬಗ್ಗೆ ತಮಿಳುನಾಡು ಪೊಲೀಸರು ಟ್ರ್ಯಾಕ್ ಮಾಡಿ ತಂಬಾಕು ಪಾಕೆಟ್‌ಗಳ ಪಡೆದವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಂಬಾಕು ಪಾಕೆಟ್‌ಗಳನ್ನು ಪಡೆದವರು ನಿರ್ವಾಹಕ ಚಂದ್ರಶೇಖರ್ ಹೆಸರನ್ನು ಹೇಳಿದ್ದಾರೆ. ಹೀಗಾಗಿ ಬಸ್ ಬರುವುದನ್ನೇ ಕಾಯುತ್ತಿದ್ದ ಪೊಲೀಸರು ನಿನ್ನೆ ಅಂದರೆ ಬುಧವಾರ ರಾತ್ರಿ 10ಗಂಟೆ ಸಮಯದಲ್ಲಿ ತಮಿಳುನಾಡಿನ ವಿಳ್ಳುಪುರಂನಲ್ಲಿ ಅರೆಸ್ಟ್ ಮಾಡಿದ್ದಾರೆ.
ಬಳಿಕ ನಿರ್ವಾಹಕನ ಹತ್ತಿರ ಇದ್ದಂತಹ ಕ್ಯಾಶ್ ಹಾಗೂ ಇಟಿಎಂ ಮಷೀನನ್ನು ಚಾಲಕರಿಗೆ ಕೊಟ್ಟು ಅಲ್ಲಿಂದ ವಾಹನವನ್ನು ಸೀಸ್ ಮಾಡದೆ ಬಿಟ್ಟು ಕಳಿಸಿದ್ದಾರೆ. ವಾಹನ ಪೂರ್ತಿ ಆನ್ಲೈನ್ ರಿಸರ್ವೇಶನ್ ಆದ ಕಾರಣ ನಿರ್ವಾಹಕನನ್ನು ಮಾತ್ರ ವಿಳ್ಳುಪುರಂ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಈಗಾಗಲೇ ರಾಮನಗರ ವಿಭಾಗದ ಭದ್ರತಾ ಮತ್ತು ಜಾಗ್ರತಾಧಿಕಾರಿಗಳು ತಮಿಳುನಾಡಿನ ವಿಳ್ಳುಪುರಂಗೆ ರಾತ್ರಿಯೇ ಪ್ರಯಾಣ ಬೆಳಸಿದ್ದು, ಬೆಳಗ್ಗೆ ವಿಳ್ಳುಪುರಂ ಠಾಣೆಗೆ ಹೋಗಿ ಮಾಹಿತಿ ಕಲೆಹಾಕಿದ್ದಾರೆ. ಇದು ಮೇಲ್ನೋಟಕ್ಕೆ ನಿರ್ವಾಹಕ ತಂಬಾಕು ಸಾಗಿಸಿರುವುದು ಕಂಡು ಬಂದಿದೆ. ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ನೌಕರರಿಗೂ ಸಂಸ್ಥೆಯು ಎಲ್ಲ ಘಟಕಗಳ ನೋಟಿಸ್ ಬೋರ್ಡಿನಲ್ಲಿ ಎಚ್ಚರಿಕೆ ಕೊಟ್ಟರು ಕೂಡ ನಿಯಮಾವಳಿಯನ್ನು ಗಾಳಿಗೆ ತೂರಿ ಈ ರೀತಿ ಅಪರಾಧ ಮಾಡಿದರೆ ತಮ್ಮನ್ನು ರಕ್ಷಣೆ ಮಾಡಲು ಯಾರು ಬರುವುದಿಲ್ಲ ಎಂಬುದಕ್ಕೆ ಈಗ ಈ ನಿರ್ವಾಹಕ ಚಂದ್ರಶೇಖರ್ ಪ್ರಕರಣವೇ ನಿದರ್ಶನವಾಗಿದೆ.
ಈತ ಅಕ್ರಮವಾಗಿ ಅದು ಕೂಡ ಸಂಸ್ಥೆಯ ವಾಹನವನ್ನು ದುರುಪಯೋಗಪಡಿಸಿಕೊಂಡು ತಂಬಾಕು ಸಾಗಿಸಿರುವುದು ದೃಢಪಟ್ಟರೆ ಈತನ ನೆರವಿಗೆ ಸಂಸ್ಥೆ ನಿಲ್ಲುವುದಿಲ್ಲ. ಜತೆಗೆ ಕೆಲಸದಿಂದಲೂ ವಜಾ ಆಗಲಿದ್ದಾನೆ. 1-2ಸಾವಿರ ರೂಪಾಯಿಗೆ ಆಸೆಬಿದ್ದು ಈರೀತಿ ಮಾಡುವುದರಿಂದ ಸಂಸ್ಥೆಗೂ ಕೆಟ್ಟಹೆಸರು ಅಲ್ಲದೆ ತಮ್ಮ ಕುಟುಂಬದವರು ಕೂಡ ಬೀದಿಗೆ ಬರುತ್ತಾರೆ.
ಇನ್ನು ಇದು ತಮಿಳುನಾಡಿನಲ್ಲಿ ಜಾಮೀನು ರಹಿತ (Non-bailable) ಪ್ರಕರಣವಾಗಿದೆ ಆದ್ದರಿಂದ ಎಚ್ಚರಿಕೆಯಿಂದ ಕರ್ತವ್ಯ ಮಾಡಿ ಎಂದು ಪದೇಪದೆ ಅಧಿಕಾರಿಗಳು ಕೂಡ ಎಚ್ಚರಿಕೆ ಸಂದೇಶ ರವಾನಿಸಿದ್ದರೂ ಈ ನಿರ್ವಾಹಕ ಎಚ್ಚೆತ್ತುಕೊಳ್ಳದೆ ಈಗ ಕಂಬಿ ಎಣಿಸುತ್ತಿದ್ದಾನೆ.
ಅಲ್ಲದೆ ಈ ನಿರ್ವಾಹಕನಿಗೆ ಇದೇ ವಿಳ್ಳುಪುರಂ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ಮೂರು ಬಾರಿ ಹಿಡಿದು 5,000 ರೂ.ವರಿಗೆ ದಂಡ ಕಟ್ಟಿಸಿಕೊಂಡು ಎಚ್ಚರಿಕೆ ನೀಡಿ ಬಿಟ್ಟಿದ್ದರಂತೆ. ಆದರೂ ಸಹ ಎಚ್ಚೆತ್ತುಕೊಳ್ಳದ ಈತ ಕನೂನು ಬಾಹಿರ ಕೆಲಸ ಮಾಡಿ ಕಂಬಿ ಎಣಿಸುತ್ತಿದ್ದಾನೆ.
ಇನ್ನು ಅಂತರ್ ರಾಜ್ಯ ತಮಿಳುನಾಡಿಗೆ ಕರ್ತವ್ಯದ ಮೇಲೆ ತೆರೆಳುವ ಸಾರಿಗೆ ನೌಕರರು ಈ ಬಗ್ಗೆ ಎಚ್ಚೆತ್ತುಕೊಂಡು ಡ್ಯೂಟಿ ಮಾಡಿದರೆ ಈ ರೀತಿಯ ಸಮಸ್ಯೆ ಬರುವುದನ್ನು ತಪ್ಪಿಸಬಹುದು ಇಲ್ಲದಿದ್ದರೆ ಸಿಬ್ಬಂದಿಗಳು ಮಾಡಿದ ತಪ್ಪಿಗೋ ಇಲ್ಲ ಯಾರೋ ಮಾಡಿದ ತಪ್ಪಿಗೋ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಚ್ಚರ.