ಹೈದರಾಬಾದ್: ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ (32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಟಾರ್ ನಟಿ ಹೈದರಾಬಾದ್‌ನಲ್ಲಿ ಸಾವಿಗೆ ಶರಣಾಗಿರೋ ಸುದ್ದಿ ಕೇಳಿ ಇಡೀ ಕಿರುತೆರೆ ಬಳಗ ಶಾಕ್ಗೆ ಒಳಗಾಗಿದೆ.
ಶೋಭಿತಾ ಸೈಬರಾಬಾದ್ ಮೂಲದ ಸುಧೀರ್ ಎಂಬುವವರ ಜತೆಗೆ ಅದ್ದೂರಿಯಾಗಿ ಮದುವೆಯಾಗಿದ್ದರು. ವಿವಾಹದ ಬಳಿಕ ನಟಿ ಶೋಭಿತಾ ಹೈದರಾಬಾದ್ನ ಕೊಂಡಾಪುರ ಶ್ರೀರಾಮ ಕಾಲೋನಿಯಲ್ಲಿ ವಾಸವಾಗಿದ್ದರು. ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ನಟಿ ಶೋಭಿತಾ ಬೆಡ್ ರೂಂ ಫ್ಯಾನಿಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ
ನಟಿ ಸಾವಿನ ವಿಚಾರವನ್ನು ಶೋಭಿತಾ ಅವರ ಸಂಬಂಧಿ ವಿಜಯ್ ಎಂಬುವವರು ಗಚ್ಚಿಬೌಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಗಚ್ಚಿಬೌಲಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ನಟಿಯ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಲ್ಲದೇ ಈ ಕೇಸ್ ಸಂಬಂಧ ಗಚ್ಚಿಬೌಲಿ ಠಾಣೆ ಇನ್ಸ್‌ಪೆಕ್ಟರ್ ಮಹಮ್ಮದ್ ಹಬೀಬುಲ್ಲಾ ಖಾನ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಸದ್ಯ ನಟಿಯ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ನಾಳೆ ಬೆಳಗ್ಗೆ ಪೋಸ್ಟ್ ಮಾರ್ಟಂ ನಂತರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಿದ್ದಾರೆ.
ಒಂದ್ ಕಥೆ ಹೇಳ್ಲಾ, ಜಾಕ್ ಪಾಟ್, ಎರಡೊಂದ್ಲಾ ಮೂರು, ಎಟಿಎಮ್, ವಂದನಾ, ಅಪಾರ್ಟ್‌ಮಂಟ್ ಟು ಮರ್ಡರ್ ಸಿನಿಮಾದಲ್ಲಿ ನಟಿಸಿದ್ದರು. ಕನ್ನಡದ 12ಕ್ಕೂ ಹೆಚ್ಚು ಸೀರಿಯಲ್‌ಗಳಲ್ಲಿ ಕೆಲಸ ಮಾಡಿದ್ದರು. ಬ್ರಹ್ಮಗಂಟು, ಕೃಷ್ಣ ರುಕ್ಮಿಣಿ, ಗಾಳಿಪಟ, ಕೋಗಿಲೆ, ದೀಪವು ನಿನ್ನದೆ ಗಾಳಿಯು ನಿನ್ನದೆ, ಅಮ್ಮಾವ್ರು, ಮನೆದೇವರು ಮತ್ತು ಮಂಗಳಗೌರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಆ್ಯಕ್ಟ್ ಮಾಡಿದ್ದಾರೆ.